ಅರಂತೋಡು – ಅಡ್ತಲೆ ರಸ್ತೆ ಅಭಿವೃದ್ಧಿಗಾಗಿ ಮಾಜಿ ಶಾಸಕ ಹಾಗೂ ಸಚಿವ ಎಸ್.ಅಂಗಾರರು ಅನುದಾನ ಒದಗಿಸಿ 3.9 ಕಿ.ಮೀ. ರಸ್ತೆ ಅಭಿವೃದ್ಧಿಗೊಳಿಸಿದ್ದಾರೆ. ಅದಕ್ಕಾಗಿ ಅಡ್ತಲೆ ನಾಗರಿಕ ಹಿತರಕ್ಷಣಾ ವೇದಿಕೆ ಹಾಗೂ ಊರವರು ಸೇರಿ ಜೂ.10ರಂದು ಮಾಜಿ ಸಚಿವ ಎಸ್.ಅಂಗಾರರಿಗೆ ನಾಗರಿಕ ಸನ್ಮಾನ ಏರ್ಪಡಿಸಿದ್ದು, ಜತೆಗೆ ರಸ್ತೆ ಅಭಿವೃದ್ಧಿಗೆ ಸಹಕರಿಸಿದ ಪ್ರತಿಯೊಬ್ಬರಿಗೂ ಗೌರವ ಸಲ್ಲಿಸಲಿದ್ದೆವೆಂದು ಅಡ್ತಲೆ ನಾಗರಿಕ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಹರಿಪ್ರಸಾದ್ ಅಡ್ತಲೆ, ಜತೆ ಕಾರ್ಯದರ್ಶಿ ರಂಜಿತ್ ಅಡ್ತಲೆ ಹಾಗೂ ಗೌರವ ಸಲಹೆಗಾರ ಹರಿಶ್ಚಂದ್ರ ಮೇಲಡ್ತಲೆ ಹೇಳಿದ್ದಾರೆ. ಸುಳ್ಯ ಪತ್ರಿಕಾಗೋಷ್ಠಿ ನಡೆಸಿದ ಮಾತನಾಡಿದ ಅವರು, ಅರಂತೋಡು – ಎಲಿಮಲೆ ರಸ್ತೆ ಅಭಿವೃದ್ಧಿಗೆ ಕಳೆದೆರಡು ವರ್ಷಗಳಿಂದ ನಾಗರಿಕ ಹಿತರಕ್ಷಣಾ ವೇದಿಕೆ ವಿವಿಧ ರೀತಿಯ ಹೋರಾಟಗಳನ್ನು ಹಮ್ಮಿಕೊಂಡ ಪರಿಣಾಮ ಇಂದು ರೂ. 3 ಕೋಟಿ ಅನುದಾನದಲ್ಲಿ ಅರಂತೋಡಿನಿಂದ ರಸ್ತೆ ಅಭಿವೃದ್ಧಿ ಆಗಿದೆ. ಅರಂತೋಡಿನಿಂದ ಪಿಂಡಿಮನೆ ತನಕ 3.9. ಕಿ.ಮೀ. ರಸ್ತೆ ಅಗಲೀಕರಣ ಗೊಂಡಿದ್ದು, ಇದರಲ್ಲಿ 1.3 ಕಿ.ಮೀ ರಸ್ತೆ ಸಂಪೂರ್ಣ ಡಾಮರೀಕರಣ, 2.6 ಕಿ.ಮೀ. ರಸ್ತೆ ಅಗಲೀಕರಣ ನಡೆದು ಒಂದು ಕೋಟ್ ಡಾಮರು ಹಾಕಲಾಗಿದೆ. 2.5 .ಕಿಮೀ. ರಸ್ತೆ ಮರುಡಾಮರೀಕರಣ ಮಾಡಲಾಗಿದೆ ಎಂದು ಅವರು ವಿವರ ನೀಡಿದರು. ರಸ್ತೆ ಅಭಿವೃದ್ಧಿ ಸಂದರ್ಭ ವಿದ್ಯುತ್ ಕಂಬ, ಚರಂಡಿ ವ್ಯವಸ್ಥೆ, ಮರಗಳ ತೆರವು ಆಗಿಲ್ಲ. ಅದನ್ನು ಮಾಡಿ ವಾಹನ ಸಂಚಾರ ಸುಗಮವಾಗುವಂತೆ ಆಗಬೇಕು ಎಂದು ಅವರು ಕೇಳಿಕೊಂಡರು.ನಮ್ಮ ಬೇಡಿಕೆಯಂತೆ ರಸ್ತೆ ಅಭಿವೃದ್ಧಿ ಪೂರ್ಣ ಆಗಿಲ್ಲ. ಆದರೂ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಇಷ್ಟು ಅನುದಾನ ಒದಗಿಸಿಕೊಟ್ಟವರಿಗೆ ಗೌರವ ಸಲ್ಲಿಸಬೇಕಾದುದು ನಮ್ಮ ಕರ್ತವ್ಯ. ಆದ್ದರಿಂದ ಜೂ.10ರಂದು ಮಾಜಿ ಸಚಿವ ಅಂಗಾರರನ್ನು ಸನ್ಮಾನಿಸುತ್ತೇವೆ. ಅಡ್ತಲೆ ಶಾಲಾ ವಠಾರದಲ್ಲಿ ಕಾರ್ಯಕ್ರಮ ನಡೆಯುವುದು ಎಂದು ಹೇಳಿದ ಅವರು, ನೂತನ ಶಾಸಕಿ ಭಾಗೀರಥಿ ಮುರುಳ್ಯ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಅವರಿಗೆ ರಸ್ತೆಯ ಉಳಿಕೆ ಅಭಿವೃದ್ಧಿ ಪೂರ್ಣಗೊಳಿಸುವಂತೆ ಮನವಿ ಮಾಡಲಾಗುವುದು ಎಂದವರು ಹೇಳಿದರು
- Wednesday
- November 27th, 2024