ಕೊರೊನಾ ನಂತರ ಮಂಗಳೂರಿನಲ್ಲಿ ಮಾನವೀಯತೆ ಮರೆಯಾದಂತೆ ಕಂಡು ಬರುತ್ತಿದೆ. ಸ್ಮಶಾನ ಗಲಾಟೆ, ಕ್ವಾರಂಟೈನ್ ಗಲಾಟೆಗಳ ನಂತರ ಈಗ ಮತ್ತೆ ಸುದ್ದಿಯಲ್ಲಿದ್ದು, ಮಂಗಳೂರಿನ ಆಸ್ಪತ್ರೆಗೆ ಆಂಬುಲೆನ್ಸ್‌ನಲ್ಲಿ ರೋಗಿಯೊಬ್ಬರನ್ನು ಕರೆದುಕೊಂಡು ಬಂದಿದ್ದ ಚಾಲಕರಿಗೆ ನಗರದಲ್ಲಿ ಅಂಗಡಿ ಮಾಲಕರೊಬ್ಬರು ನೀರಿನ ಬಾಟ್ಲಿಯನ್ನು ನೀಡಲು ನಿರಾಕರಿಸಿರುವ ಘಟನೆ ನಡೆದಿದೆ.
ಈ ಘಟನೆಯಿಂದ ಆಕ್ರೋಶಗೊಂಡ ಆಂಬುಲೆನ್ಸ್ ಚಾಲಕರು ಇದೀಗ ನಗರ ಬಂದರು ಠಾಣಾ ಪೊಲೀಸರಿಗೆ ದೂರು ನೀಡಿದ್ದಾರೆ. ಸುಳ್ಯದ ಅಭಿಲಾಷ್ ಎಂಬವರು ರಾಜೇಶ್ ಆಲಟ್ಟಿ ಎಂಬ ರೋಗಿಯನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲು ಕರೆ ತಂದಿದ್ದರು. ಈ ವೇಳೆ ನಸುಕಿನ ಜಾವ ಬೇರೆ ಯಾವುದೇ ಅಂಗಡಿಗಳು ತೆರೆದಿರದೇ ಫಳ್ನೀರ್ ರಸ್ತೆಯ ಮೋತಿಮಹಲ್ ಮುಂಭಾಗದಲ್ಲಿರುವ ಅಂಗಡಿಯೊಂದು ತೆರೆದಿದ್ದು, ಅಲ್ಲಿ ಕುಡಿಯಲು ನೀರಿನ ಬಾಟಲಿಯನ್ನು ಕೇಳಿದ್ದಾರೆ.
ಆದರೆ ಅಂಗಡಿಯಲ್ಲಿದ್ದ ಮಾಲಕ ನೀರು ನೀಡಲು ನಿರಾಕರಿಸಿದ್ದಾರೆ. ಇಲ್ಲಿದ್ದ ‘ಜನಧ್ವನಿ ಸಂಪರ್ಕ ಕೇಂದ್ರ’ ಎನ್ನುವ ಅಂಗಡಿ ಅಷ್ಟು ಹೊತ್ತಿನಲ್ಲಿ ತೆರೆದಿದ್ದು, ಆಂಬುಲೆನ್ಸ್‌ನಲ್ಲಿದ್ದವರು ಹೋಗಿ ನೀರು ಕೇಳಿದಾಗ ಅಂಗಡಿಯಲ್ಲಿದ್ದಾತ ‘ಕೊರೊನಾ ರೋಗಿಗಳನ್ನು ಸಾಗಿಸುವ ಆಂಬುಲೆನ್ಸ್ ಚಾಲಕರಿಗೆ ನೀರು ಕೊಡುವುದಿಲ್ಲ. ಊರಿಡೀ ಕೊರೊನಾ ಹಬ್ಬುತ್ತಿದ್ದಾರೆ. ನಿಮಗೆ ನೀರು ಕೊಡುವುದಿಲ್ಲ’ ಎಂದು ದುಡ್ಡು ಕೊಟ್ಟರೂ ನೀರು ಬಾಟಲ್ ನೀಡಲು ನಿರಾಕರಿಸಿದ್ದಾರೆ ಎಂದು ಅವರು ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ದಿನದ 24 ಗಂಟೆಯೂ ಆಂಬುಲೆನ್ಸ್ ಚಾಲಕರು ರೋಗಿಗಳ ಜೀವ ಉಳಿಸಲು ಶ್ರಮಿಸುತ್ತಿದ್ದಾರೆ. ಆದರೆ ಇಂತಹ ಅಂಗಡಿ ಮಾಲಕರು ಕನಿಷ್ಠ ನೀರಿನ ಬಾಟ್ಲಿ ನೀಡುವಷ್ಟೂ ಅಮಾನವೀಯತೆಯಿಂದ ನಡೆದುಕೊಳ್ಳುತ್ತಿರುವುದು ನೋವು ತಂದಿದೆ.ನಮಗೂ ಕೊರೊನಾದ ಬಗ್ಗೆ ಭಯ ಇಲ್ಲವೇ..? ಆಂಬುಲೆನ್ಸ್ ಚಾಲಕರು ಇಂತಹ ನಿಂದನೆಗಳನ್ನು ಕೇಳಬೇಕಾ..? ಎಂದು ಮಂಗಳೂರಿನ ಆಂಬುಲೆನ್ಸ್ ಚಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.