Ad Widget

ಸುಬ್ರಹ್ಮಣ್ಯ ಬಿಜೆಪಿ ವತಿಯಿಂದ ಸುದ್ದಿಗೋಷ್ಠಿ – “ಶಾಸಕರ ಆಸ್ಪತ್ರೆ ಭೇಟಿಯನ್ನು ಕಾಂಗ್ರೆಸ್ ಟೀಕಿಸಿರುವುದು ಖಂಡನೀಯ”

ಸುಬ್ರಹ್ಮಣ್ಯ, ಮಾ.04 : ಸುಬ್ರಹ್ಮಣ್ಯದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಭಾಗೀರಥಿ ಮುರುಳ್ಯ ಅವರು ಸಾರ್ವಜನಿಕರ ದೂರಿನ ಹಿನ್ನಲೆಯಲ್ಲಿ ಭೇಟಿ ನೀಡಿ ಪರಿಶೀಲಿಸಿ ಅಲ್ಲಿನ ವೈದ್ಯರು, ಸಿಬ್ಬಂದಿಗಳಿಂದ ಮಾಹಿತಿ ಪಡೆದಿರುವುದನ್ನು ತಿರುಚಿ ಟೀಕಿಸಿರುವ ಕಾಂಗ್ರೆಸ್‌ನ ಪ್ರಮುಖರ ಹೇಳಿಕೆಯನ್ನು ಸುಬ್ರಹ್ಮಣ್ಯ ಬಿಜೆಪಿ ಖಂಡಿಸಿದೆ.

. . . . . . . . .

ಸುಬ್ರಹ್ಮಣ್ಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸುಬ್ರಹ್ಮಣ್ಯ ಬಿಜೆಪಿ ಶಕ್ತಿಕೇಂದ್ರ ಪ್ರಮುಖ್ ರಾಜೇಶ್ ಎನ್.ಎಸ್. ಅವರು, “ಸಾರ್ವಜನಿಕರ ದೂರಿನ ಹಿನ್ನಲೆಯಲ್ಲಿ ಇತ್ತೀಚೆಗೆ ಸುಳ್ಯ ಶಾಸಕರು ಸುಬ್ರಹ್ಮಣ್ಯ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಶಾಸಕರು ಆಸ್ಪತ್ರೆಯಲ್ಲಿ ಉತ್ತಮ ರೀತಿಯಲ್ಲಿ ಸೇವೆ ನೀಡಬೇಕು ಎಂದು ವೈದ್ಯರು, ಸಿಬ್ಬಂದಿಗಳಿಗೆ ಸೂಚನೆ, ಮಾರ್ಗದರ್ಶನಗಳನ್ನು ನೀಡಿದ್ದರು, ನಗುಮುಖದ ಸೇವೆ ನೀಡಬೇಕು, ಇಲ್ಲಿನ ಆಸ್ಪತ್ರೆ ಮೇಲ್ದರ್ಜೆಗೇರಿಸಲು ಇಲ್ಲಿ ಸಂದರ್ಶಕರ ಸಂಖ್ಯೆ(ಸಾರ್ವಜನಿಕರ ಭೇಟಿ) ಹೆಚ್ಚಿರಬೇಕಾಗುತ್ತದೆ” ಎಂದು ದಾಖಲೆ ಪರಿಶೀಲನೆ ನಡೆಸಿ ಸೂಚಿಸಿದ್ದರು. ಬಳಿಕದ ಬೆಳವಣಿಗೆಯಲ್ಲಿ ಡಾಕ್ಟರ್‌ಗೆ ಶಾಸಕರು ಜೋರು ಮಾಡಿದ್ದಾರೆ, ಡಾಕ್ಟರ್ ಕಣ್ಣೀರು ಹಾಕಿದ್ದಾರೆ, ಡಾಕ್ಟರ್ ಇನ್ನು ಮುಂದೆ ಆಸ್ಪತ್ರೆಗೆ ಬರುವುದಿಲ್ಲ ಎಂದು ಶಾಸಕರ ವಿರುದ್ಧ ಆರೋಪಗಳನ್ನು ಮಾಡಿ ಕಾಂಗ್ರೆಸ್‌ನ ಕೆಲವರು ಪ್ರಚಾರ ಮಾಡಿದ್ದಾರೆ. ಆದರೆ ಇದು ಸುಳ್ಳು. ಶಾಸಕರು ಡಾಕ್ಟರ್ ಜೊತೆ ಬಳಿಕವೂ ಮಾತನಾಡಿದ್ದಾರೆ. ವೈದ್ಯರು ತರಬೇತಿಗೆ ತೆರಳಿದ್ದು, ತರಬೇತಿ ಮುಗಿಸಿ ಕರ್ತವ್ಯಕ್ಕೆ ಮರಳಲಿದ್ದಾರೆ” ಎಂದು ಸ್ಪಷ್ಟನೆ ನೀಡಿದರು.

. . . . . . .

“ಕಾಂಗ್ರೆಸ್ ಶಾಸಕರ ವಿರುದ್ಧ ಯಾಕೆ ಮಾತನಾಡುವುದಿಲ್ಲ” : ಬಿಜೆಪಿ ಪ್ರಮುಖ್ ದಿನೇಶ್ ಸಂಪ್ಯಾಡಿ ಮಾತನಾಡಿ, “ಸುಳ್ಯ ಶಾಸಕರು ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿರುವುದನ್ನು ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಶಾಸಕರು, ಜನಪ್ರತಿನಿಧಿಗಳು ಅಧಿಕಾರಿಗಳ ವಿರುದ್ಧ ತುಚ್ಛವಾಗಿ ಮಾತನಾಡುವಾಗ ಕಾಂಗ್ರೆಸ್‌ನವರು ಯಾಕೆ ಸುಮ್ಮನಿದ್ದಾರೆ. ನೆರೆಯ ಕಾಂಗ್ರೆಸ್ ಶಾಸಕರು ಪೊಲೀಸರ ವಿರುದ್ಧ ಏಕವಚನದಲ್ಲಿ ಕೇವಲವಾಗಿ ಮಾತನಾಡಿದ್ದರು, ಪುತ್ತೂರು ಶಾಸಕರು ಮಹಿಳಾ ಕಾಲೇಜಿನ ಪ್ರಾಂಶುಪಾಲರ ವಿರುದ್ಧ ಅತ್ಯಂತ ಕೇವಲವಾಗಿ ಮಾತನಾಡಿದ್ದರು. ಇದು ಕಾಂಗ್ರೆಸ್‌ನವರಿಗೆ ಗೊತ್ತಿಲ್ಲವೇ” ಎಂದು ಅವರು ಪ್ರಶ್ನಿಸಿದರು.

ಕುಕ್ಕೆಗೆ ಸುಸಜ್ಜಿತ ಆಸ್ಪತ್ರೆಗಾಗಿ ಪ್ರತಿಭಟನೆ : “ಕುಕ್ಕೆ ಸುಬ್ರಹ್ಮಣ್ಯಕ್ಕೆ ಸುಸಜ್ಜಿತ ಆಸ್ಪತ್ರೆ ನಮ್ಮೆಲ್ಲರ ಬೇಡಿಕೆಯಾಗಿದೆ. ಅದರಂತೆ ಎಸ್.ಅಂಗಾರ ಅವರ ಅವಧಿಯಲ್ಲಿ ಆಸ್ಪತ್ರೆಯ ಹೊರರೋಗಿ ವಿಭಾಗ ಕಟ್ಟಡ ನಿರ್ಮಾಣಗೊಂಡಿದೆ. ಸುಬ್ರಹ್ಮಣ್ಯ ಆಸ್ಪತ್ರೆಗೆ ಮೇಲ್ದರ್ಜೆಗೇರಿಸಬೇಕು, ಸುಸಜ್ಜಿತ ಆಸ್ಪತ್ರೆಗೆ ಬೇಡಿಕೆ ಬಗ್ಗೆ ಗ್ರಾಮ ಸಭೆಗಳಲ್ಲೂ ಆಗ್ರಹ ವ್ಯಕ್ತವಾಗುತ್ತಿದೆ. ಇದಕ್ಕಾಗಿ ಸಾರ್ವಜನಿಕರು ಪ್ರತಿಭಟಿಸುವ ನಿರ್ಧಾರವನ್ನೂ ಮಾಡಲಾಗಿದೆ, ಸುಸಜ್ಜಿತ ಆಸ್ಪತ್ರೆಗಾಗಿ ಪ್ರತಿಭಟನೆಗೆ ನಾವೂ ಕೈಜೋಡಿಸುತ್ತೇವೆ” ಎಂದು ರಾಜೇಶ್ ಎನ್.ಎಸ್. ತಿಳಿಸಿದರು. 

ಬಿಜೆಪಿ ಸುಳ್ಯ ಮಂಡಲ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಗಿರೀಶ್‌ ಆಚಾರ್ಯ ಮಾತನಾಡಿದರು. 

ಸುಬ್ರಹ್ಮಣ್ಯ ಗ್ರಾ.ಪಂ ಮಾಜಿ ಅಧ್ಯಕ್ಷರಾದ ಸುಜಾತ ಕಲ್ಲಾಜೆ, ಎನ್‌.ಡಿ ಬ್ಯಾಂಕ್ ನಿರ್ದೇಶಕರಾದ ಅಚ್ಚುತ ಗೌಡ ಕುಕ್ಕಪನಮನೆ, ಬಿಜೆಪಿ ಯುವ ಮೋರ್ಚಾ ಸದಸ್ಯರಾದ ದಿಲೀಪ್ ಕಲ್ಲಾಜೆ, ಮಹಿಳಾ ಮೋರ್ಚಾ ಸದಸ್ಯರಾದ ಭಾರತಿ ದಿನೇಶ್, ಸುಬ್ರಹ್ಮಣ್ಯ ಐನೆಕಿದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ವೆಂಕಟೇಶ್ ಎಚ್.ಎಲ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading