Ad Widget

ವಯಸ್ಸಿನ ಆಕರ್ಷಣೆ ಅಲ್ಪಾಯುಷಿ..ಹೆತ್ತವರ ಪ್ರೀತಿ ಚಿರಾಯು

. . . . . . . . .

ಲೇಖನ : ಧನ್ಯ ಬಾಳೆಕಜೆ

. . . . . . .

ಪ್ರೀತಿ ಪ್ರತಿ ಮನುಷ್ಯನ ಜೀವನದಲ್ಲಿ ಪವಿತ್ರವಾದ ಭಾವನೆ. ಅದೊಂದು ನವಿರಾದ ಸಂಬಂಧದ ಸೇತುವೆ. ಪುರಾಣ ಕಾಲದಿಂದಲೇ ಈ ಪ್ರೀತಿಗೆ ಮನಸೋಲದವರಿಲ್ಲ. ಪ್ರೀತಿಯಿಂದಲೇ ಜಯಿಸಿದ, ಪ್ರೀತಿಯಿಂದಲೇ ಗಳಿಸಿದ ಹಲವು ಉದಾಹರಣೆಗಳಿಗೆ ನಮ್ಮ ದೇಶ ಪುರಾಣ ಕಾಲದಿಂದಲೇ ಸಾಕ್ಷಿಯಾಗಿದೆ.
ಪ್ರೀತಿ ಎಂದರೆ ಮೊದಲು ನೆನಪಾಗುವುದೇ ರಾಧಾಕೃಷ್ಣರ ಪ್ರೀತಿ. ನಿಸ್ವಾರ್ಥ ಪ್ರೀತಿ, ಭಕ್ತಿಯ ಸಂಕೇತವೇ ಈ ಪ್ರೀತಿ. ಪರಸ್ಪರ ಅರ್ಥೈಸಿಕೊಳ್ಳುವ ಭಾವನೆಯೊಂದಿಗೆ ಮನುಕುಲಕ್ಕೆ ಭಕ್ತಿ ಮತ್ತು ಶುದ್ದತೆಯ ಪಾಠವನ್ನು ರಾಧಾಕೃಷ್ಣರ ಪ್ರೀತಿ ಸದಾ ನೀಡುತ್ತದೆ. ಅಷ್ಟೊಂದು ಪರಿಶುದ್ದ ಪ್ರೀತಿಯನ್ನು ಜಗತ್ತಿಗೇ ಅರ್ಥೈಸಿದ ನಮ್ಮ ಭಾರತದಲ್ಲಿ ಪರಿಶುದ್ದ ಪ್ರೀತಿಗೆ ವಿಶೇಷ ಸ್ಥಾನ.
ಪ್ರೀತಿ ಎಂದರೆ ಎರಡು ಮನಸ್ಸುಗಳದ್ದಲ್ಲ. ಕುಟುಂಬ, ಸಮಾಜ, ದೇಶ, ಮಾನವತೆಯ ಮೇಲಿನ ಕಾಳಜಿಯ ರೂಪ.. ಇವೆಲ್ಲವೂ ಪ್ರೀತಿಯನ್ನು ಅರ್ಥೈಸುವ ಪರಿ. ಪ್ರೀತಿಯಿಂದ ಜಗತ್ತನ್ನೇ ಗೆದ್ದ ದೇಶ ನಮ್ಮ ಭಾರತ. ದೇಶದ ಮೇಲೆ ಪರಕೀಯರು ಹಕ್ಕು ಸಾಧಿಸಲು ಬಂದಾಗ ಜೀವವನ್ನೇ ಒತ್ತೆಯಿಟ್ಟು ದೇಶಪ್ರೇಮ ಮೆರೆದ ದೇಶಭಕ್ತ ಮಹನೀಯರು..ಇದೆಲ್ಲಾ ಪ್ರೀತಿಯಿಂದ ಗೆದ್ದ ಭಾರತದ ಉದಾಹರಣೆಗಳು.
ಪ್ರೀತಿ ಎಂದರೆ ಗಂಡು ಹೆಣ್ಣಿನ ನಡುವೆಯಷ್ಟೇ ಹುಟ್ಟುವ ಭಾವನೆಯಲ್ಲ. ಹೆತ್ತವರ ಮೇಲೆ, ಅಜ್ಜ ಅಜ್ಜಿಯರ ಮೇಲೆ, ಅಕ್ಕ, ಅಣ್ಣ, ತಮ್ಮ, ತಂಗಿಯ ಮೇಲೆ, ಕುಟುಂಬ, ನೆಂಟರಿಷ್ಟರ ಮೇಲೆ ಇರುವ ವಿಶೇಷ ಕಾಳಜಿಗಳೆಲ್ಲವೂ ಪ್ರೀತಿಯೇ. ಅದೊಂದು ಅನುಭೂತಿ, ಮನಸ್ಸಿನಲ್ಲಿ ಗಟ್ಟಿಯಾಗಿ ನೆಲೆಯೂರುವ ಬಂಧ. ಪ್ರೀತಿ ಇದ್ದಾಗ ಅಲ್ಲಿ ಸುರಕ್ಷತೆಯ ಭಾವನೆಯೂ ಏರ್ಪಡುತ್ತದೆ. ಇಂತಿಪ್ಪ ಪ್ರೀತಿಯ ರೂಪ ಈಗಿನ ಕಾಲದಲ್ಲಿ ವೈರುಧ್ಯ!
ಹೌದು. ಸದ್ಯ ಪ್ರೀತಿಯೆಂದರೆ ಭೀತಿ. ಪ್ರೀತಿಯ ವೈವಿಧ್ಯ ಮುಖಗಳು ನಮ್ಮೆದುರು ಅನಾವರಣವಾಗುತ್ತಲೇ ಇದೆ. ಪ್ರೀತಿಯೆಂಬುದು ಪರಿಶುದ್ದ ಭಾವನೆಯಾಗಿ ಈಗ ಉಳಿದಿಲ್ಲ. ಪ್ರೀತಿಯ ಹಿಂದೆ ವೈವಿಧ್ಯ ಉದ್ದೇಶ. ಹಣಕ್ಕಾಗಿ ಪ್ರೀತಿ, ಮೋಸಕ್ಕಾಗಿ ಪ್ರೀತಿ, ಮತಾಂತರಕ್ಕಾಗಿ ಪ್ರೀತಿ, ಮದುವೆಯಾದ ಮೇಲೇ ಪ್ರಿಯಕರನಿಗಾಗಿ ಗಂಡನ ಕೊಲೆ, ಹನಿಮೂನ್‌ನಲ್ಲೇ ಗಂಡನಿಗೆ ಸ್ಕೆಚ್‌, ಗೆಳತಿಗಾಗಿ ಪತ್ನಿಯನ್ನೇ ಮುಗಿಸಿದ ಪತಿ… ದಿನನಿತ್ಯ ನೋಡುವ, ಕೇಳುವ ಸುದ್ದಿಗಳಿವು. ಇಲ್ಲೆಲ್ಲಾ ಇರುವುದು ಪ್ರೀತಿಯಲ್ಲ. ಮೋಸ, ಅತಿಯಾದ ಹಣದ ವ್ಯಾಮೋಹ, ಐಶಾರಾಮಿ ಬದುಕಿನ ಮೋಹ.
ಸದ್ಯ ನಮ್ಮ ಮಂಗಳೂರು ಮತ್ತೆ ಚರ್ಚೆಯಲ್ಲಿದೆ. ಅನ್ಯ ಮತೀಯ ವ್ಯಕ್ತಿ ಮತ್ತು ಹಿಂದೂ ಯುವತಿಯ ನಡುವೆ ನಡೆದಿದೆ ಎನ್ನಲಾದ ಮದುವೆ ಕುರಿತು ವ್ಯಾಪಕವಾಗಿ ಚರ್ಚೆಯಾಗುತ್ತಿದೆ. ಇಲ್ಲಿ ಮಾತನಾಡಬೇಕಿರುವುದು ಆ ಯುವಕ-ಯುವತಿಯ ಬಗೆಗಲ್ಲ, ಆಕೆಯನ್ನು ಕಣ್ಣಲ್ಲಿ ಕಣ್ಣಿಟ್ಟು ಸಾಕಿ ಬೆಳೆಸಿದ ಎರಡು ಹಿರಿ ಜೀವಗಳ ಬಗ್ಗೆ. ಕಣ್ಣೆದುರು ಆಡಿ ಬೆಳೆದ ಮಗಳು ಇನ್ನು ತಮ್ಮ ಪಾಲಿಗೆ ಸಿಗುವುದೇ ಇಲ್ಲ ಎಂದಾದಾಗ ಇಷ್ಟು ವರ್ಷ ಪ್ರೀತಿಯಿಂದ ಸಾಕಿ ಬೆಳೆಸಿದ ಆ ಹಿರಿ ಜೀವಗಳ ಮನಸ್ಥಿತಿ, ಪರಿಸ್ಥಿತಿ ಹೇಗಿರಬಹುದು? ನಮ್ಮ ಮಗಳು ನಮಗೆ ಬೇಕು ಎಂದು ಹೆತ್ತವರು ಪ್ರತಿ ದಿನ ಅಲೆಯುತ್ತಿರುವುದನ್ನು ನೋಡಿದಾಗ ಮನಸ್ಸಿಗೆ ನೋವಾಗದೆ ಇರದು. ಆದರೆ ಕ್ಷಣಿಕ ಪ್ರೀತಿಯ ಹಿಂದೆ ಹೋದ ಮಕ್ಕಳಿಗೆ ಇವೆಲ್ಲಾ ಅರ್ಥವಾಗುತ್ತದೆಯೇ? ಅರ್ಥವಾಗುವ ಹೊತ್ತಿಗೆ ಕಾಲವೂ ಮಿಂಚಿರುತ್ತದೆ.
ಮೊನ್ನೆಯಷ್ಟೇ ಪ್ರೀತಿಸಿದ ಹುಡುಗಿ ಕೈಕೊಟ್ಟಳೆಂದು ಜಿಮ್‌ ಟ್ರೈನರ್‌ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ. ಕ್ಷಣಿಕ ಪ್ರೀತಿಯನ್ನೇ ಶಾಶ್ವತ ಪ್ರೀತಿಯೆಂದು ನಂಬಿ ಶಾಶ್ವತವಾಗಿ ಪ್ರೀತಿಯನ್ನು ಧಾರೆ ಎರೆದ ಹೆತ್ತವರಿಗೆ ಶಾಶ್ವತವಾದ ನೋವನ್ನೇ ಕೊಟ್ಟು ಹೋದ. ಮನೆಗೆ ಆಧಾರಸ್ಥಂಭವಾಗಿದ್ದ ಮಗನನ್ನು ಕಳೆದುಕೊಂಡ ಆ ವೃದ್ದ ದಂಪತಿಗಳಿಬ್ಬರು ಗೋಳಾಡುತ್ತಿರುವ ದೃಶ್ಯ ನೋಡುವಾಗ ಕಣ್ತುಂಬಿ ಬರುತ್ತದೆ. ಪ್ರೀತಿ ಪ್ರೇಮದ ಹೆಸರಿನಲ್ಲಿ ನಡೆಯುತ್ತಿರುವ ದುರಂತಗಳು ಒಂದೆರಡಲ್ಲ.
ಕಳೆದ ಕೆಲ ವರ್ಷಗಳಿಂದೀಚೆಗೆ ಬೆಂಗಳೂರಿನಲ್ಲಿ ಹೆಚ್ಚಾಗುತ್ತಿರುವ ಕೋ-ಲಿವಿಂಗ್‌ ಪಿಜಿಗಳ ಬಗ್ಗೆ ಫೇಸ್ಬುಕ್‌ನಲ್ಲಿ ವ್ಯಕ್ತಿಯೊಬ್ಬರು ಬರೆದುಕೊಂಡಿದ್ದರು. ಅಲ್ಲಿ ಬಂದ ಕಾಮೆಂಟ್ಸ್‌ಗಳಲ್ಲಿ ಬೆಂಗಳೂರಿನಲ್ಲಿ ಇಂತಹ ಪಿಜಿಗಳು ಕಾಮನ್‌ ಎಂದು ಕೆಲವರು ಉಲ್ಲೇಖಿಸಿದ್ದರು. ಬಹುಶಃ ನನ್ನಂತೆ ಬಹುತೇಕರಿಗೆ ಇವೆಲ್ಲ ತಿಳಿಯದ ವಿಷಯ ಮತ್ತು ಓದಿದಾಗ ಆಶ್ಚರ್ಯವಾಯಿತು. ನಮ್ಮದೇ ರಾಜ್ಯದಲ್ಲಿ ಇಂತಹ ಒಂದು ಬೆಳವಣಿಗೆ ಆಗುತ್ತಿದೆ ಎಂದಾಗ ಖಂಡಿತಾ ಭಯವಾಗದೇ ಇರದು. ಗಂಡು ಮತ್ತು ಹೆಣ್ಣು ಮದುವೆಯಾಗದೇ ಒಟ್ಟಿಗೇ ವಾಸಿಸಲು ಇರುವಂತಹ ಪಿಜಿಗಳಿವು ಎಂದು ಕೇಳಿದಾಗ ಆತಂಕ ಸಹಜವೇ. ಅಷ್ಟಕ್ಕೂ ಇಂತಹ ಪಿಜಿಗಳನ್ನು ನಡೆಸಲು ಅನುಮತಿ ಹೇಗೆ ಸಿಗುತ್ತದೆ? ಅಥವಾ ಕಾನೂನುಬಾಹಿರವಾಗಿ ನಡೆಯುತ್ತಿರುವುದೇ ತಿಳಿಯದು.
ನಾವೆಲ್ಲ ಕಾಲೇಜಿಗೆ ಹೋಗುತ್ತಿರುವಾಗ ನಮ್ಮ ಹೆತ್ತವರು ವಿಪರೀತ ಕಾಳಜಿ ವಹಿಸುವುದನ್ನು ನೋಡಿ ಕೆಲವೊಮ್ಮೆ ಕಸಿವಿಸಿಯಾಗುತ್ತಿತ್ತು. ಆದರೆ ಹೆತ್ತವರ ಆ ವಿಶೇಷ ಕಾಳಜಿಯ ಹಿಂದಿರುವ ಸದುದ್ದೇಶದ ಅರಿವು ಈಗ ಆಗುತ್ತಿದೆ. ಆಗೆಲ್ಲಾ ಈಗಿನಂತೆ ಸಾಮಾಜಿಕ ಜಾಲತಾಣಗಳಿರಲಿಲ್ಲ. ಸಮಾಜದಲ್ಲಿ ನಡೆಯುವ ಯಾವುದೇ ವಿಚಾರಗಳೂ ಸ್ಪಷ್ಟವಾಗಿ ಅರಿವಾಗುತ್ತಿರಲಿಲ್ಲ. ಆದರೆ ಈಗ ಹಾಗಲ್ಲ. ಪ್ರತಿಯೊಬ್ಬರ ಕೈಯಲ್ಲೂ ಮೊಬೈಲ್‌ ಇದೆ. ಇಂಟರ್ನೆಟ್‌ ಇದೆ. ಜಗತ್ತಿನಲ್ಲಿ ನಡೆಯುತ್ತಿರುವುದೆಲ್ಲಾ ಅಂಗೈಯಲ್ಲೇ ತಿಳಿಯುತ್ತಿದೆ. ವಾಸ್ತವತೆಯ ಅರಿವು ಎಲ್ಲಾ ಮಕ್ಕಳಿಗೂ ಇದೆ. ಯಾವುದೇ ಮಕ್ಕಳು ಅರಿತುಕೊಳ್ಳದಷ್ಟು ದಡ್ಡರೂ ಅಲ್ಲ.
ಹದಿಹರೆಯದ ವಯಸ್ಸಿನಲ್ಲಿ ಮನಸ್ಸು ಹಾರುವ ಚಿಟ್ಟೆಯಂತಾಗುವುದು ಸಾಮಾನ್ಯ. ಆದರೆ ಆ ಮನಸ್ಸನ್ನು ನಿಯಂತ್ರಿಸಿಕೊಳ್ಳುವ ಶಕ್ತಿ ಇಲ್ಲದೇ ಹೋದರೆ ಬದುಕು ಶಾಶ್ವತವಾಗಿ ಕತ್ತಲೆಯೆಡೆಗೆ ಸಾಗುವುದು ನಿಶ್ಚಿತ. ಜಾತಿ-ಧರ್ಮ ಯಾವುದೇ ಇರಲಿ. ಪ್ರೀತಿ ಕ್ಷಣಿಕ ಎಂಬುದು ತಿಳಿದಿರಲಿ. ಶಾಲಾ-ಕಾಲೇಜುಗಳಲ್ಲಿ ಹುಟ್ಟುವ ಪ್ರೀತಿ ಕೇವಲ ಆಕರ್ಷಣೆಯಷ್ಟೇ. ಅದಕ್ಕೆ ಆಯುಷ್ಯ ಇರುವುದಿಲ್ಲ. ಓದುವ ವಯಸ್ಸಿನಲ್ಲಿ ಓದಿಗಷ್ಟೇ ಮನಸ್ಸನ್ನು ಮೀಸಲಿಟ್ಟರೆ ಖಂಡಿತಾ ಬದುಕು ಗೆಲ್ಲುತ್ತದೆ. ಒಂಬತ್ತು ತಿಂಗಳು ಉದರದೊಳಗೆ ಹೊತ್ತುಕೊಂಡು, ಹೆತ್ತ ಮೇಲೆಯೂ ಕಣ್ಣಲ್ಲಿ ಕಣ್ಣಿಟ್ಟು ಸಾಕಿ ಸಲಹಿದ ತಾಯಿ, ಮಕ್ಕಳ ಬದುಕಿಗಾಗಿ ತನ್ನೆಲ್ಲಾ ಯೌವನವನ್ನು ಸವೆಸಿದ ತಂದೆಯ ಶ್ರಮ ಒಂದು ಕ್ಷಣ ಕಣ್ಮುಂದೆ ಬಂದರೆ ಯಾವ ಮಕ್ಕಳೂ ಕೆಟ್ಟ ದಾರಿ ತುಳಿಯುವುದಿಲ್ಲ. ಆದರೆ ಅಂತಹ ವಿಚಾರ ಮಕ್ಕಳಿಗೆ ಅರಿವಾಗದಿರುವುದೇ ದುರಾದೃಷ್ಟ.
ಹಿಂದೆಲ್ಲಾ ಮದುವೆ ಎಂದರೆ ಕಷ್ಟವೇ ಇರಲಿ, ಸುಖವೇ ಇರಲಿ ಜೀವನಪೂರ್ತಿ ಜೊತೆಗೇ ಬಾಳುವ ದೃಢನಿರ್ಧಾರ. ಆಗೆಲ್ಲ ಸಮಸ್ಯೆಗಳೆಷ್ಟೇ ಇದ್ದರೂ ತ್ಯಾಗ ಮತ್ತು ಸಹನೆಯೇ ದಾಂಪತ್ಯ ಜೀವನದ ದೃಢತೆಯ ಗುಟ್ಟು. ಆದರೆ ಈಗ ಸಣ್ಣ ಸಣ್ಣ ವಿಷಯಕ್ಕೂ ಜಗಳ, ಕಿತ್ತಾಟ. ಮದುವೆಯಾಗಿ ವರ್ಷ ತುಂಬುವುದರೊಳಗೇ ವಿಚ್ಚೇದನ! ಪ್ರೀತಿ-ಮದುವೆ-ವಿಚ್ಚೇದನ ಇಂದಿನ ಸಮಾಜದಲ್ಲಿ ಸಾಮಾನ್ಯ ಎಂಬುವಂತಾಗಿದೆ. ವಯಸ್ಸಿನ ಆಕರ್ಷಣೆಗೆ ಆಯುಷ್ಯ ಕಡಿಮೆ ಎಂಬ ಸತ್ಯ ಮಕ್ಕಳಿಗೆ ಅರಿವಾಗುವುದಿಲ್ಲ. ಅರಿವಾಗಿಸುವ ಹೆತ್ತವರ ಪ್ರಯತ್ನವೂ ಫಲ ಕೊಡುವುದಿಲ್ಲ. ಯಾಕೆಂದರೆ ಮಕ್ಕಳು ಅಡ್ಡದಾರಿ ಹಿಡಿದ ವಿಚಾರ ಹೆತ್ತವರಿಗೆ ತಿಳಿಯುವ ಹೊತ್ತಿಗೆ ಮಕ್ಕಳು ಬಹುದೂರ ಸಾಗಿಯಾಗಿರುತ್ತದೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading