Ad Widget

ಸುಳ್ಯ ಎಲ್‌.ಡಿ ಬ್ಯಾಂಕ್‌ನ ವಾಣಿಜ್ಯ ಕಟ್ಟಡಕ್ಕೆ ತಪ್ಪು ಮಾಹಿತಿ ನೀಡಿ ವಿದ್ಯುತ್ ಸಂಪರ್ಕ ; ಸುಳ್ಯ – ಬೆಳ್ಳಾರೆ – ಚೊಕ್ಕಾಡಿ ಬಸ್ ಸಂಚಾರ ಮರು ಆರಂಭಿಸಲು ಸದಸ್ಯರ ಒತ್ತಾಯ

ಸುಳ್ಯದ ಎಲ್.ಡಿ ಬ್ಯಾಂಕ್‌ನ ವಾಣಿಜ್ಯ ಕಟ್ಟಡಕ್ಕೆ ತಪ್ಪು ಮಾಹಿತಿ ನೀಡಿ ವಿದ್ಯುತ್ ಸಂಪರ್ಕ ಪಡೆದಿದ್ದಾರೆ.  ಅವರಿಗೆ ಮೆಸ್ಕಾಂ ದಂಡ ಪಾವತಿಸಿರುವ ವಿಚಾರ ಸಭೆಯಲ್ಲಿ ಪ್ರಸ್ತಾಪವಾಗಿ ಮೆಸ್ಕಾಂ ಇಂಜಿನಿಯರ್ ವರ್ತನೆಗೆ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ ಹಾಗೂ ಈ ಕುರಿತು ಸದಸ್ಯರಿಗೆ ಸ್ಪಷ್ಟ ಮಾಹಿತಿ ದೊರೆಯದೇ ಇದ್ದಾಗ ಮುಂದಿನ ಸಭೆಗೆ ದಾಖಲೆ ಸಹಿತ ವರದಿ  ನೀಡುವಂತೆ ಸದಸ್ಯರು ಅಧಿಕಾರಿಗಳಿಗೆ ತಾಕೀತು ಮಾಡಿರುವ ಘಟನೆ ಸುಳ್ಯದ ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆಯಲ್ಲಿ ನಡೆದಿದೆ.

ಜ..27ರಂದು ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಹುಲ್‌ ಹಮೀದ್ ಕುತ್ತಮೊಟ್ಟೆ ಅವರ  ಅಧ್ಯಕ್ಷತೆಯಲ್ಲಿ ಮಾಸಿಕ ಸಭೆಯು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಸದಸ್ಯ, ಕಾರ್ಯದರ್ಶಿ ಹಾಗೂ ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಕಾರ್ಯ ಕಲಾಪ ನಡೆಸಿಕೊಟ್ಟರು.

ಸಭೆಯಲ್ಲಿ ಮೆಸ್ಕಾಂ ಇಲಾಖೆಯವರು ಮಾಹಿತಿ ನೀಡುತ್ತಿದ್ದಾಗ ಮಾತನಾಡಿದ ಸಮಿತಿ ಸದಸ್ಯ ಭವಾನಿಶಂಕರ ಕಲ್ಮಡ್ಕರು, “ಸುಳ್ಯದ ಎಲ್.ಡಿ. ಬ್ಯಾಂಕ್ ಕಮರ್ಷಿಯಲ್ ಕಾಂಪ್ಲೆಕ್ಸ್ ಅಲ್ಲವೇ? ಅಲ್ಲಿ ಗೃಹಜ್ಯೋತಿ ಸಂಪರ್ಕ ನೀಡಿ ವಿದ್ಯುತ್ ಪಡೆದಿರುವ ಹಾಗೂ ಅದಕ್ಕೆ ಮೆಸ್ಕಾಂ ನವರು ದಂಡ ಹಾಕಿರುವ ಕುರಿತು ನಮಗೆ ಮಾಹಿತಿ ಇದೆ. ಈ ಘಟನೆಯ ಕುರಿತು ವಿವರ ನೀಡಿ” ಎಂದು ಕೇಳಿದರು.
ಸಭೆಯಲ್ಲಿದ್ದ ಮೆಸ್ಕಾಂ ಅಧಿಕಾರಿ, “ಕಮರ್ಷಿಯಲ್ ಕಾಂಪ್ಲೆಕ್ಸ್‌ 8 ಮೀಟ‌ರ್ ಇದೆ, ಅದರಲ್ಲಿ 2 ಮೀಟ‌ರ್ ಗೃಹಜ್ಯೋತಿಯಡಿ ವಿದ್ಯುತ್ ಪಡೆಯುತ್ತಿದ್ದಾರೆ. ಮೊನ್ನೆ ಮಂಗಳೂರಿನಿಂದ ತಂಡ ಬಂದು ಪರಿಶೀಲನೆ ನಡೆಸಿದ್ದಾರೆ. ಅವರಿಗೆ ಒನ್ ಟು ಡಬಲ್ ಫೈನ್ ಹಾಕಲಾಗಿದೆ. ಸುಮಾರು 66 ಸಾವಿರ ಪಾವತಿಗೆ ಬ್ಯಾಂಕ್‌ನವರಿಗೆ ಸೂಚಿಸಲಾಗಿದೆ. ಇನ್ನೂ ಪಾವತಿ ಆಗಿಲ್ಲ ಇಷ್ಟು ಮಾಹಿತಿ ನನಗಿದೆ” ಎಂದು ಸಭೆಗೆ ತಿಳಿಸಿದರು.

”ಆ ಬ್ಯಾಂಕ್‌ನವರು ತಪ್ಪು ಮಾಹಿತಿ ನೀಡಿ ವಿದ್ಯುತ್ ಪಡೆದಿದ್ದಾರೆ. ಅವರಿಗೆ ಅಷ್ಟು ಕಡಿಮೆ ಫೈನ್ ಹಾಕಿದ್ದೀರಿ. ಅದೇ ಯಾರಾದರೂ ಪಾಪದವ ಒಂದು ದಿನ – ಎರಡು ದಿನ ವಿದ್ಯುತ್‌ ಪಡೆದರೆ ಅವನಿಗೆ ಲಕ್ಷ ಲಕ್ಷ ಫೈನ್‌ ಹಾಕುತ್ತೀರಿ. ಇದು ಯಾವ ಕಾನೂನು ನಿಮ್ಮದು” ಎಂದು ಸದಸ್ಯ ಶಿಲ್ಪಾ ಇಬ್ರಾಹಿಂ ಕೇಳಿದಾಗ, ರಾಜು ನೆಲ್ಲಿಕುಮೇರಿ ಧ್ವನಿಗೂಡಿಸಿ ಮಾತನಾಡಿದರು. “ನೀವು ನೀಡಿದ ಮಾಹಿತಿ ಅಸ್ಪಷ್ಟ. ಆ ಕುರಿತು ದಾಖಲೆ ನೀಡಿ. ಎಷ್ಟು ವರ್ಷದಿಂದ ಅವರು ವಿದ್ಯುತ್ ಪಡೆಯುತ್ತಿದ್ದಾರೆ. ಒಂದು ಯುನಿಟ್‌ಗೆ ಎಷ್ಟು ಇತ್ಯಾದಿ ಮಾಹಿತಿ ಇದೆಯಾ” ಎಂದು ಅಧ್ಯಕ್ಷ ಶಾಹುಲ್ ಹಮೀದ್ ಪ್ರಶ್ನಿಸಿದಾಗ, ಮೆಸ್ಕಾಂ ಇಂಜಿನಿಯರ್ ರವರು “ಈಗ ಒಂದು ವರ್ಷದ ಫೈನ್ ಹಾಕಲಾಗಿದೆ” ಎಂದು ಹೇಳಿದರು. ಅವರ ಉತ್ತರದಿಂದ ತೃಪ್ತರಾಗದ ಸದಸ್ಯರು ಮೆಸ್ಕಾಂ ಹಿರಿಯ ಅಧಿಕಾರಿಯನ್ನು ಸಭೆಗೆ ಬರುವಂತೆ ಆಗ್ರಹಿಸಿದರು.

ಇ.ಓ ರಾಜಣ್ಣರು ಮಾತನಾಡಿ, “ಮೆಸ್ಕಾಂ ಕುರಿತು ಸದಸ್ಯರು ಕೇಳುವ ಪ್ರಶ್ನೆಗೆ ಉತ್ತರ ನೀಡಿ. ನಿಮ್ಮ ಹಿರಿಯ ಅಧಿಕಾರಿಯನ್ನು ಬರಲು ಹೇಳಿ” ಎಂದು ಸೂಚಿಸಿದರು.
“ತಪ್ಪು ಮಾಹಿತಿ ನೀಡಿ ವಿದ್ಯುತ್‌ ಸಂಪರ್ಕ ಪಡೆದಿದ್ದಾರೆಂದರೆ ಕಾನೂನು ರೀತಿಯ ಕ್ರವ ಕೈಗೊಳ್ಳಿ. ಸಣ್ಣ ಫೈನ್ ಹಾಕಿದರೆ ಸರಿಯಾಗುತ್ತದೆಯಾ?” ಎಂದು ಭವಾನಿಶಂಕರ ಕಲ್ಮಡ್ಕ ಪ್ರಶ್ನಿಸಿದರು.

ಸಭೆ ಮುಗಿಯುವ ಹಂತಕ ಬಂದರೂ ಮೆಸ್ಕಾಂ ಎಇಇ ಆಗಲಿ ಎ.ಇ. ಆಗಲಿ ಸಭೆಗೆ ಬರಲಿಲ್ಲ, ಸಭೆಯ ಕೊನೆಯಲ್ಲಿ ಮುಂದಿನ ಸಭೆಗೆ ಈ ಕುರಿತು ಸ್ಪಷ್ಟ  ಮಾಹಿತಿಯನ್ನು ನೀಡಬೇಕು. ದಾಖಲೆ ಪತ್ರಗಳು ಇರಬೇಕು ಎಂದು ಸದಸ್ಯರ ಆಗ್ರಹದ ಮೇರೆಗೆ ಸದಸ್ಯ ಕಾರ್ಯದರ್ಶಿ ರಾಜಣ್ಣರವರು ಸೂಕ್ತ ಉತ್ತರ ಮತ್ತು ದಾಖಲೆಯೊಂದಿಗೆ ಸಭೆಗೆ ಬರುವಂತೆ ಸಭೆಗೆ ಬಂದಿದ್ದ ಮೆಸ್ಕಾಂ ಅಧಿಕಾರಿಗೆ ತಿಳಿಸಿದರು.

ಮೆಸ್ಕಾಂ ಇಂಜಿನಿಯರ್ ವರ್ತನೆಗೆ ಗ್ಯಾರಂಟಿ ಅನುಷ್ಠಾನ ಸದಸ್ಯರಗಳ ಅಸಮಾಧಾನ : “ಜಾಲ್ಲೂರು ಮೆಸ್ಕಾಂ ಶಾಖೆಯೊಂದಿಗೆ ಇದ್ದ ಅಜ್ಜಾವರ ವ್ಯಾಪ್ತಿಯನ್ನು ಈಗ ಸುಳ್ಯ ಶಾಖೆಗೆ ಸೇರಿಸಲಾಗಿದೆ. ಈ ಬಗ್ಗೆ ಮಾಹಿತಿ ನನಗೆ ಇರಲಿಲ್ಲ. ಜಾಲ್ಲೂರು ಮೆಸ್ಕಾಂ ಇಂಜಿನಿಯರ್‌ಗೆ ಅಡ್ಪಂಗಾಯದ ವಿದ್ಯುತ್ ಸಮಸ್ಯೆ ಕುರಿತು ಹೇಳಿದಾಗ ಅವರು ಸುಳ್ಯ ವಿಭಾಗಕ್ಕೆ ಹೇಳುವಂತೆ ಸಲಹೆ ನೀಡಿದರು. ಅದರಂತೆ ನಾನು ಸುಳ್ಯ ಮೆಸ್ಕಾಂ ಇಂಜಿನಿಯರ್ ಸುಪ್ರೀತ್‌ಗೆ ಕರೆ ಮಾಡಿ ಸಮಸ್ಯೆ ವಿವರಿಸಿದಾಗ, ಅವರು ನನ್ನ ಮೇಲೆ ರೇಗುತ್ತಾರೆ. ಉಡಾಫೆಯಾಗಿ ಮಾತನಾಡುತ್ತಾರೆ. ಅವರು ಆಡಿದ ಮಾತುಗಳು ನನ್ನಲ್ಲಿ ರೆಕಾರ್ಡ್ ಇದೆ. ನನ್ನ ಜತೆಯೇ ಆ ಅಧಿಕಾರಿ ಹೀಗೆ ಮಾತನಾಡುತ್ತಾರಾದರೆ ಸಾಮಾನ್ಯರೊಂದಿಗೆ ಹೇಗೆ ಮಾತನಾಡಿಯಾರು. ಜನ ಸಾಮಾನ್ಯರ ಕೆಲಸ ಆಗುವುದು ಹೇಗೆ?” ಎಂದು ಅಜ್ಜಾವರ ವ್ಯಾಪ್ತಿಯ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಎ.ಬಿ. ಅಬ್ಬಾಸ್ ಅಡ್ಕ ಸಭೆಯಲ್ಲಿ ಪ್ರಶ್ನಿಸಿದರು.
“ಸಭೆಯಲ್ಲಿ ಪ್ರಸ್ತಾಪವಾದ ಈ ವಿಚಾರದ ಕುರಿತು ನಾನು ಎ.ಇ.ಇ. ಅವರ ಗಮನಕ್ಕೆ ತರುತ್ತೇನೆ” ಎಂದು ಸಭೆಯಲ್ಲಿದ್ದ ಮೆಸ್ಕಾಂ ಅಧಿಕಾರಿಯವರು ಸಭೆಗೆ ತಿಳಿಸಿದಾಗ, “ಸುಪ್ರೀತ್‌ರನ್ನು ಸಭೆಗೆ ಬರುವಂತೆ ಮಾಡಿ” ಎಂದು ಅಧ್ಯಕ್ಷ ಶಾಹುಲ್‌ ಹಮೀದ್ ಸೇರಿದಂತೆ, ಸದಸ್ಯರು ಒತ್ತಾಯಿಸಿದರು. “ಅಧಿಕಾರಿಗಳು ಸೌಜನ್ಯದಿಂದ ವರ್ತಿಸಬೇಕು. ಉಡಾಫೆಯಾಗಿ ಮಾತನಾಡುವುದು ಖಂಡನೀಯ” ಎಂದು ಸದಸ್ಯರು ಹೇಳಿದಾಗ, “ನಾನು ಸಮಸ್ಯೆ ಹೇಳುತ್ತಿದ್ದಂತೆ ನೀವು ನನಗೆ ಕಾಲ್ ಮಾಡಿದ್ದು ಯಾಕೆ. ನಾನು ಪೋಲೀಸ್ ಕಂಪ್ಲೆಂಟ್ ಕೊಡುತ್ತೇನೆ’ ಎಂದು ಇಂಜಿನಿಯ‌ರ್ ಸುಪ್ರೀತ್ ನನಗೆ ಜೋರು ಮಾಡುತ್ತಾರೆ” ಎಂದು ಸದಸ್ಯ ಅಬ್ಬಾಸ್ ಮತ್ತಷ್ಟು ವಿವರ ಸಭೆಯ ಮುಂದಿಟ್ಟರು.
“ಸದಸ್ಯರೊಂದಿಗೆ ಈ ರೀತಿ ಮಾತನಾಡಿದ್ದಾರೆಂದರೆ ಅದು ಸರಿಯಲ್ಲ. ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರನ್ನು ಸುಪ್ರೀತ್ ಭೇಟಿಯಾಗಿ ಈ ಕುರಿತು ವಿವರ ನೀಡಬೇಕು. ಇಲ್ಲವಾದಲ್ಲ ಸದಸ್ಯರ ದೂರಿನಂತೆ ಎಂ.ಡಿ.ಯವರಿಗೆ ಸಭೆಯ ವರದಿ ಕಳುಹಿಸಿಕೊಡೋಣ” ಎಂದು ಇ.ಒ. ರಾಜಣ್ಣ ಹೇಳಿದರು.

ಸದಸ್ಯ ಭವಾನಿಶಂಕರ್ ಕಲ್ಮಡ್ಕ ರವರು “ಕೆಲವು ವರ್ಷದ ಹಿಂದೆ ಸುಳ್ಯದಿಂದ ಚೊಕ್ಕಾಡಿ- ಬೆಳ್ಳಾರೆಗೆ ಬೆಳಿಗ್ಗೆ ಮತ್ತು ಸಂಜೆ ಕೆ.ಎಸ್.ಆರ್.ಟಿ.ಸಿ ಬಸ್ಸು ಸೌಲಭ್ಯ ಇತ್ತು. ಈಗ ಅದನ್ನು ನಿಲ್ಲಿಸಲಾಗಿದ್ದು, ಈ ರೂಟ್ ನಲ್ಲಿ ಮತ್ತೆ ಬೆಳಿಗ್ಗೆ 6:30 ಕ್ಕೆ ಬೆಳ್ಳಾರೆ ಯಿಂದ ಹೊರಟು 7:30ಕ್ಕೆ ಸುಳ್ಯಕ್ಕೆ ಹಾಗೂ ಸಂಜೆ 6:30ಕ್ಕೆ ಸುಳ್ಯದಿಂದ ಹೊರಟು 7:30ಕ್ಕೆ ಬೆಳ್ಳಾರೆ ತಲುಪುವ ವ್ಯವಸ್ಥೆಯಾಗಬೇಕು. ಕಲ್ಮಡ್ಕ-ಬೆಳ್ಳಾರೆ-ಸುಳ್ಯ ಬಸ್ಸು ಪೆರುವಾಜೆಗೆ ಹೋಗಿ ಬರುವುದರಿಂದ ಬಾಳಿಲ ಕಲ್ಮಡ್ಕ ಭಾಗದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದ್ದು, ಇಲಾಖೆಗೆ ಕಂದಾಯ ಸಹ ಕಡಿಮೆಯಾಗುತ್ತಿದೆ. ಪೆರುವಾಜೆಗೆ ಬೇರೆಯೇ ವ್ಯವಸ್ಥೆ ಮಾಡಿ. ಈ ಬಸ್ಸು ನೇರವಾಗಿ ಬೆಳ್ಳರೆಯಿಂದ ಸುಳ್ಯಕ್ಕೆ ಬರುವಂತೆ ವ್ಯವಸ್ಥೆ ಮಾಡಿ” ಎಂದು ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳ ಗಮನಕ್ಕೆ ತಂದರು.
ಈ ವೇಳೆ ಸದಸ್ಯ ಕಾರ್ಯದರ್ಶಿ ರಾಜಣ್ಣ ನವರು ಈ ಹಿಂದೆ ಸದಸ್ಯರು ಬೇಡಿಕೆಯಿಟ್ಟಿದ್ದ ಐವರ್ನಾಡು – ಪಾಂಬಾರು ಬಸ್ಸು ಸೌಲಭ್ಯವನ್ನು ಸಹ ಒದಗಿಸಲು ಕ್ರಮ ಕೈಗೊಳ್ಳುವ ಕುರಿತು ಸೂಚನೆ ನೀಡಿದರು.

ಸಭೆಯಲ್ಲಿ ಸದಸ್ಯರಾದ ಧನುಷ್ ಕುಕ್ಕೆಟ್ಟಿ, ರಾಜು ನೆಲ್ಲಿಕುಮೇರಿ, ಭವಾನಿ ಕಲ್ಮಡ್ಕ, ರವಿ, ಹಾಗೂ ಇಲಾಖೆಯ ಅಧಿಕಾರಿಗಳು ಇದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading