Ad Widget

“ಮೌನವಾಗಿದ್ದೆ ನಾನು…..”

ಮೌನವಾಗಿದ್ದೆ ನಾನು
ಹಸಿರು ಚೆಲ್ಲುತ್ತಾ ಉಸಿರು ಪಸರಿಸುತ್ತಾ  ಅಮೃತವಾಗಿ ಸಿರಿ ಸಮೃದ್ಧಿಯಾಗಿ
ತಾಯ ಮಮತೆಯ ತೊಟ್ಟಿಲಾಗಿ
ಹದವರಿತು ಕಾರ್ಯವೆಸಗುತಲಿದ್ದೆ ಕ್ಷಮೆಯಾಧರಿತ್ರಿಯಾಗಿ ಕಾಯುತಲಿದ್ದೆ

ಬಡಿದೆಬ್ಬಿಸಿದೆ ನೀನು
ವಿಕೃತಿಯ ಮೆರೆಯುತ್ತಾ
ನಿನ್ನಾಸೆ ಆಮಿಷಗಳಿಗೆ ನನ್ನ ಬಲಿಕೊಟ್ಟೆ
ನನ್ನೊಡಲ ನೀ ಬರಿದು ಮಾಡಿಬಿಟ್ಟೆ ನನ್ನುಸಿರಿನಲ್ಲೇ ನಿನ್ನುಸಿರು
ಅದ ಮರೆತು ಬಗೆದೆ ನನ್ನ ಬಸಿರು

ನಿಗೂಢತೆಯ ಹೊತ್ತ ವಿಸ್ಮಯಗಳ ತಾಣದೊಳು
ರಹಸ್ಯಗಳ ಒಡಲೊಳಿಟ್ಟು
ಮೌನವಾಗಿದ್ದೆ ನಾನು
ಬಡಿದೆಬ್ಬಿಸಿದೆ ನೀನು

ಬಿಡದೆ ಅತ್ಯಾಚಾರವೆಸಗಿದೆ,
ಮುಳ್ಳಿನಿಂದ ಚುಚ್ಚಿದೆ
ಗೋಪುರವ ಕಟ್ಟಿದೆ
ಬಂಜೆಯಾಗಿಸಿದೆ
ಉಸಿರುಗಟ್ಟಿಸಿದೆ

ಇಳೆ ಹಚ್ಚ ಹಸಿರಾಗಿರಲು ಬೇಕು ವರುಣ
ಅದು ಮುನಿಸಿಕೊಂಡರೆ ಆಗುವುದು ಮರಣ
ಕೇಳುವುದು ಆಗ ಎಲ್ಲೆಲ್ಲೂ ಅರಣ್ಯ ರೋದನ
ಸುತ್ತಲೂ ಆವರಿಸುವುದು ಸ್ಮಶಾನ ಮೌನ

ಪ್ರಕೃತಿಯ ಎದುರು ವಿಕೃತಿಯ ಮೆರೆಯಬೇಡ
ನಾ ಮೈ ಮುರಿದರೆ ನಿನಗಿದೋ ಅರಗಿಸಲಸದಳವು
ಕಣ್ಣಿಗೆ ಚುಚ್ಚಿಕೊಂಡು ಅತ್ತರೇನು ಫಲ?
ವಿಷವಿಕ್ಕಿದ ನೀವೇ ಫಲವನ್ನುಣ್ಣಿರಿ ಈಗ

ಬಿಟ್ಟು ಬಿಡು ನನ್ನೊಡಲ ಆಗೆಯುವುದನು
ಕಲಿತುಬಿಡು ಇದ್ದುದರಲ್ಲೇ ತೃಪ್ತಿ ಪಡುವುದನು
ಭೂಗರ್ಭದ ಅಗರ್ಭ ಮೈ ಮಾಟಕ್ಕೆ
ಇದಿರಾಗಿ ನಿಲ್ಲುವರುಂಟೆ?

ಇನ್ನಾದರೂ ಎಚ್ಚೆತ್ತುಕೊಳ್ಳೋ……..
ತಿದ್ದಿಕೊಳ್ಳೋ ನಿನ್ನ ನೀ…….
ಅದು ಅಸಾಧ್ಯವೋ
ಇದೋ ಬೀಸುತ್ತಲೇ ಇರುವೆ
ಕೊಡಲಿಯ ನಿನ್ನತ್ತಲೇ……..

🖋 ಡಾ. ಅನುರಾಧಾ ಕುರುಂಜಿ, ಸುಳ್ಯ

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading