Ad Widget

ರಾಜ್ಯಮಟ್ಟದ ಯುವ ಸಂಭ್ರಮಕ್ಕೆ ಪಂಜ ಸಜ್ಜು ; ಜ.17 ಮತ್ತು 18ರಂದು ನಡೆಯಲಿದೆ ಅದ್ದೂರಿ ಕಾರ್ಯಕ್ರಮ – ವಸ್ತು ಪ್ರದರ್ಶನ, ಕೃಷಿ ಮೇಳ, ವಾಹನ ಮೇಳ, ಆಹಾರ ಮೇಳ, ವಿವಿಧ ಪ್ರಶಸ್ತಿ ಪ್ರದಾನ ಹಾಗೂ ಸಾಂಸ್ಕೃತಿಕ ರಸದೌತಣ

ಸುಳ್ಯದ ಯುವಜನ ಸಂಯುಕ್ತ ಮಂಡಳಿ ನೇತೃತ್ವದಲ್ಲಿ ಪ್ರಪ್ರಥಮ ಬಾರಿಗೆ ನಡೆಯುತ್ತಿರುವ ರಾಜ್ಯಮಟ್ಟದ ಯುವ ಸಂಭ್ರಮ ಕಾರ್ಯಕ್ರಮ ಪಂಜದಲ್ಲಿ ಅದ್ದೂರಿಯಾಗಿ ಜ.17 ಮತ್ತು 18 ರಂದು ನಡೆಯಲಿದೆ. ಇದರ ಅಂಗವಾಗಿ ವಿವಿಧೆಡೆ ಆಕರ್ಷಕ ದ್ವಾರ, ದೇವಸ್ಥಾನದ ರಸ್ತೆಯುದ್ದಕ್ಕೂ ಸಂಸ್ಕೃತಿಯನ್ನು ಬಿಂಬಿಸುವ ಕಲಾಕೃತಿಗಳೊಂದಿಗೆ ಶೃಂಗಾರಗೊಂಡಿದೆ.

ಜ.17 ಮತ್ತು 18 ರಂದು ಎರಡು ದಿನಗಳ ಕಾಲ ಪಂಜದ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯುವ ರಾಜ್ಯಮಟ್ಟದ ಯುವ ಸಂಭ್ರಮ 2026 ಕಾರ್ಯಕ್ರಮದಲ್ಲಿ ರಾಜ್ಯ ಯುವ ಪ್ರಶಸ್ತಿ ಮತ್ತು ಸಾಂಘಿಕ ಪ್ರಶಸ್ತಿ ಪ್ರದಾನ, ಪಂಚಸಪ್ತತಿ 2025 ಪ್ರಶಸ್ತಿ ವಿತರಣೆ, ರಾಜ್ಯಮಟ್ಡದ ಜನಪದ ವೈವಿಧ್ಯ ಸ್ಪರ್ಧೆ, ಕೃಷಿ ಮೇಳ, ವಸ್ತು ಪ್ರದರ್ಶನ, ಆಹಾರ ಮೇಳ, ವಾಹನ ಸಾಲ ಮೇಳ, ವಾಹನ ಮೇಳ ಹಾಗೂ ಮಿಶ್ರತಳಿ ಹೆಣ್ಣು ಕರುಗಳ ಪ್ರದರ್ಶನ, ವಿವಿಧ ಕಲಾ ತಂಡಗಳಿಂದ ಸಾಂಸ್ಕೃತಿಕ  ಸಂಭ್ರಮ  ಪ್ರದರ್ಶನಗೊಳ್ಳಲಿದೆ.

ಜ.17ರಂದು ಮೇಳಗಳ ಹಾಗೂ ಸಾಂಸ್ಕೃತಿಕ ಸಂಭ್ರಮ ಉದ್ಘಾಟನೆ ನಡೆಯಲಿದ್ದು, ಯುವ ಸಂಭ್ರಮದ ಸಂಘಟನಾ ಸಮಿತಿ ಅಧ್ಯಕ್ಷ ದಿಲೀಪ್ ಬಾಬುಬೆಟ್ಟು ಅಧ್ಯಕ್ಷತೆ ವಹಿಸಲಿದ್ದಾರೆ. ಆಹಾರ ಮೇಳ ಉದ್ಘಾಟನೆಯನ್ನು ಮಾಜಿ ಸಚಿವ ಎಸ್ ಅಂಗಾರ,  ಸಾಂಸ್ಕೃತಿಕ ಸಂಭ್ರಮ ಉದ್ಘಾಟನೆ
ಮಾಜಿ ಸಂಸದ ನಳೀನ್‌ ಕುಮಾ‌ರ್ ಕಟೀಲು, ವಾಹನ ಮೇಳ ಉದ್ಘಾಟನೆಯನ್ನು ಡಿಸಿಸಿ ಬ್ಯಾಂಕ್ ನಿರ್ದೇಶಕ  ಎಸ್.ಎನ್ ಮನ್ಮಥ, ವಸ್ತು ಮೇಳ ಉದ್ಘಾಟನೆಯನ್ನು ಶ್ರೀ ಅನ್ನಪೂರ್ಣೇಶ್ವರೀ ಕ್ಷೇತ್ರ ಯೋಗೀಶ್ವರಿ ಸಿದ್ದ ಮಠ ಮರ್ಕಂಜ ಇದರ ದರ್ಮದರ್ಶಿ ರಾಜೇಶನಾಥ್ ಜೀ, ಕೃಷಿ ಮೇಳ ಉದ್ಘಾಟನೆಯನ್ನು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ವಿವಿದ ಗಣ್ಯರ ಸಮ್ಮುಖದಲ್ಲಿ  ನೆರವೇರಿಸಲಿದ್ದಾರೆ.
ಬಳಿಕ ಕಲಾ ಮಂದಿರ್ ಡ್ಯಾನ್ಸ್ ಕ್ರೀವ್ ಬೆಳ್ಳಾರೆ ಮತ್ತು ಪಂಜ ಶಾಖೆಗಳ ವಿದ್ಯಾರ್ಥಿಗಳಿಂದ ಡ್ಯಾನ್ಸ್ ಧಮಾಕ, ವೀಶ್ವ ಕಲಾನಿಕೇತನ ಇನ್‌ಸ್ಟಿಟ್ಯೂಟ್ ಆಫ್ ಆರ್ಟ್ಸ್ ಮತ್ತು ಕಲ್ವರ್ ಪುತ್ತೂರು, ಪಂಜ ಶಾಖೆ ಇದರ ವಿದ್ಯಾರ್ಥಿಗಳಿಂದ ನೃತ್ಯ ವೈಭವ, ಡ್ಯಾನ್ಸ್ ಆ್ಯಂಡ್ ಬೀಟ್ಸ್ ಪಂಜ ಮತ್ತು ಇತರ ಶಾಖೆಗಳ ವಿದ್ಯಾರ್ಥಿಗಳಿಂದ ನೃತ್ಯ ವೈವಿಧ್ಯ ನಡೆಯಲಿದೆ.

ಜ.18ರಂದು ಅದ್ದೂರಿ ಮೆರವಣಿಗೆ ನಡೆಯಲಿದ್ದು, ತಾಲೂಕಿನ ಸುಮಾರು 100ಕ್ಕೂ ಹೆಚ್ಚು ಯುವಕ – ಯುವತಿ ಮಂಡಲಗಳು, ಸಿಂಗಾರಿ ಮೇಳ, ನಾಸಿಕ್ ಬ್ಯಾಂಡ್ ಹಾಗೂ ವಿವಿಧ ವೇಷ ಭೂಷಣಗಳೊಂದಿಗೆ ಅದ್ದೂರಿಯಾಗಿ ಪಂಜ ಮುಖ್ಯ ಪೇಟೆಯಿಂದ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದವರೆಗೆ ಯುವ ಸಂಭ್ರಮ ಮೆರವಣಿಗೆ ನಡೆಯಲಿದೆ. ಕನಿಷ್ಠ ವೇತನಾ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ.ಶಹೀದ್ ಮೆರವಣಿಗೆ ಚಾಲನೆ ನೀಡಲಿದ್ದು, ನಂತರ ನಡೆಯುವ ಸಭಾ ಕಾರ್ಯಕ್ರಮದಲ್ಲಿ ರಾಜ್ಯ ಯುವ ಪ್ರಶಸ್ತಿ 2025 – 26, ಸಾಂಘಿಕ ಪ್ರಶಸ್ತಿ 2025 – 26 ಪ್ರದಾನ ಹಾಗೂ ಪಂಚ ಸಪ್ತತಿ ಪ್ರಯುಕ್ತ 75 ದಿನಗಳ ಸ್ವಚ್ಛತಾ ಅಭಿಯಾನದ ಪ್ರಶಸ್ತಿ ವಿತರಣೆ ನಡೆಯಲಿದೆ.

ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಅಕಾಡೆಮಿ ಮಾಜಿ ಅಧ್ಯಕ್ಷ ಪಿ.ಸಿ.ಜಯರಾಮ್ ಜಾನುವಾರು ಪ್ರದರ್ಶನಕ್ಕೆ ಚಾಲನೆ ನೀಡಲಿದ್ದಾರೆ.  ಯುವ ಸಂಭ್ರಮ ಕಾರ್ಯಕ್ರಮದ ಸಭಾಕಾರ್ಯಕ್ರಮವನ್ನು ಕಾರ್ಮಿಕ ಸಚಿವ ಸಂತೋಷ್ ಎಸ್ ಲಾಡ್ ಉದ್ಘಾಟಿಸಲಿದ್ದಾರೆ. ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ರಾಜ್ಯ ಯುವ ಪ್ರಶಸ್ತಿಯನ್ನು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್, ಸಾಂಘಿಕ ಪ್ರಶಸ್ತಿಯನ್ನು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಪ್ರಧಾನ ಮಾಡಲಿದ್ದಾರೆ. ಪಂಚಸಪ್ತತಿ ಪ್ರಶಸ್ತಿಯನ್ನು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ. ಮೆರವಣಿಗೆ ಪ್ರಶಸ್ತಿಯನ್ನು ಉದ್ಯಮಿ ಕಿರಣ್ ಚಂದ್ರ.ಡಿ ಪುಷ್ಪಗಿರಿ ಪ್ರದಾನ ಮಾಡಲಿದ್ದಾರೆ.  ಸಮಾರಂಭದಲ್ಲಿ ಹಲವು ಗಣ್ಯರು ಭಾಗವಹಿಸಲಿದ್ದಾರೆ. ರಾಜ್ಯದ ಸಚಿವರು, ಕ್ಷೇತ್ರದ ಶಾಸಕರು ಸಹಿತ ಹಲವು ಗಣ್ಯರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ಮಧ್ಯಾಹ್ನ ಬಳಿಕ  ರಾಜ್ಯ ಮಟ್ಟದ ಆಹ್ವಾನಿತ ತಂಡಗಳಿಂದ ಜನಪದ ವೈವಿಧ್ಯ ಸ್ಪರ್ಧೆ ನಡೆಯಲಿದೆ ಎಂದು ಯುವ ಸಂಭ್ರಮ ಸಂಘಟನಾ ಸಮಿತಿ ಅಧ್ಯಕ್ಷ  ದಿಲೀಪ್ ಬಾಬ್ಲುಬೆಟ್ಟು ಹಾಗೂ ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ಪವನ್ ಪಲ್ಲತ್ತಡ್ಕ ತಿಳಿಸಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading