Ad Widget

ಬಾಡಿ ಶೇಮಿಂಗ್ – ಸಾಂಕ್ರಾಮಿಕ ಮಾನಸಿಕ ಅಸ್ವಸ್ಥತೆ ; ✍️ಧನ್ಯಾ ಬಾಳೆಕಜೆ

ನಟ ಕಿಚ್ಚ ಸುದೀಪ್ ಅವರ ಮಗಳು ಸಾನ್ವಿ ಸುದೀಪ್ ಅವರ ದೇಹದ ಬಗ್ಗೆ ಕೆಲವರು ಅನಗತ್ಯ ಕಾಮೆಂಟ್ ಹಾಕಿರುವುದು ಸದ್ಯ ಚರ್ಚೆಯಲ್ಲಿರುವ ವಿಷಯವಾಗಿದೆ. ಇದು ಬಾಡಿ ಶೇಮಿಂಗ್ ಮಾಡುವ ಮೂಲಕ ವಿಕೃತ ಆನಂದ ಅನುಭವಿಸುತ್ತಿರುವ ಆ ವ್ಯಕ್ತಿಗಳ ಕಳಪೆ ಮನಸ್ಥಿತಿಯನ್ನು ಬಹಿರಂಗಪಡಿಸುತ್ತದೆ. ಸಾರ್ವಜನಿಕ ವ್ಯಕ್ತಿಗಳ ಕುಟುಂಬದವರು ಎಂದ ಮಾತ್ರಕ್ಕೆ ಅವರು ಅವಮಾನ, ಟೀಕೆ ಹಾಗೂ ಮಾನಸಿಕ ಹಿಂಸೆಯನ್ನು ಸಹಿಸಬೇಕೆಂಬುದು ಯಾವ ನ್ಯಾಯ?
ಬಾಡಿ ಶೇಮಿಂಗ್ ಎಂದರೆ ಕೇವಲ ದೇಹದ ಬಗ್ಗೆ ಟೀಕೆ ಮಾಡುವುದಲ್ಲ. ಅದು ವ್ಯಕ್ತಿಯ ಆತ್ಮಗೌರವವನ್ನು ಕುಗ್ಗಿಸುವ, ಅವರ ಮನಸ್ಸಿಗೆ ಆಳವಾದ ಗಾಯ ಮಾಡುವ ಒಂದು ಮಾನಸಿಕ ಹಿಂಸೆಯ ರೂಪ. ಇದು ಹೇಳುವವನ ಮನಸ್ಥಿತಿಯನ್ನು ಮಾತ್ರ ಪ್ರತಿಬಿಂಬಿಸುತ್ತದೆ — ಶೇಮಿಂಗ್‌ಗೆ ಒಳಗಾಗುವ ವ್ಯಕ್ತಿಯ ಮೌಲ್ಯವನ್ನಲ್ಲ.
ಅಷ್ಟಕ್ಕೂ  ಈ ಬಾಡಿ ಶೇಮಿಂಗ್ ಎನ್ನುವುದು ನಟಿಯರು, ತಾರೆಯರ ಮಕ್ಕಳು, ಸಾರ್ವಜನಿಕ ಕ್ಷೇತ್ರದ ಮಹಿಳೆಯರನ್ನು ಮಾತ್ರ ಒಳಗೊಂಡಿಲ್ಲ. ನಮ್ಮಂತ ಸಾಮಾನ್ಯ ಹೆಣ್ಣು ಮಕ್ಕಳೂ ಇದರ ಬಲಿಪಶುಗಳು.  ಹಿಂದೆ ನಾನು ಉದ್ಯೋಗದಲ್ಲಿದ್ದಾಗ ಸಪೂರ ಇದ್ದ ಕಾರಣಕ್ಕೆ ಅಲ್ಲೇ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ ಹೀನಾಯವಾಗಿ ಮಾತನಾಡಿದ ಅನುಭವ ನನಗೂ ಇದೆ. ತನ್ನ ಗೆಳತಿಯ ಮುಂದೆ “ನಿನ್ನ ಹುಡುಗ ಫ್ರೆಂಡ್” ಎಂದು ನನ್ನನ್ನು  ಕರೆಯುತ್ತಾ ವಿಕೃತ ಆನಂದ ಪಡೆಯುತ್ತಿದ್ದ ಮತ್ತು ಹೆಣ್ಣಿಗೆ ಹೆಣ್ಣೇ ಶತ್ರು ಎಂಬಂತೆ ಆತ ಹೇಳಿದ್ದನ್ನು ನನ್ನ ಬಳಿ ಹೇಳಿ ಆಕೆಯೂ ವಿಕೃತ ಸಂತೋಷ ಅನುಭವಿಸುತ್ತಿದ್ದಳು. ಆ ಕ್ಷಣ ನನಗೆ ಅರಿವಾಯಿತು. ಇದು ನನ್ನೊಬ್ಬಳ ಕತೆಯಲ್ಲ, ಸಣ್ಣದಿದ್ದರೂ, ದಪ್ಪಗಿದ್ದರೂ, ಬಿಳಿಯಿದ್ದರೂ, ಕಪ್ಪಿದ್ದರೂ ಬಾಡಿ ಶೇಮಿಂಗ್ ಮಾಡುವ ಮಾನಸಿಕ ಅಸ್ವಸ್ಥರ ಗುಂಪು ಎಲ್ಲಾ ಕಡೆಯೂ ಇರುತ್ತದೆ.
ಬಾಡಿ ಶೇಮಿಂಗ್ ಮಾಡುವವರಿಗೆ ಇನ್ನೊಬ್ಬರ ಭಾವನೆಗಳ ಬಗ್ಗೆ ಯಾವುದೇ ಸಂವೇದನೆ ಇರುವುದಿಲ್ಲ. ಅವರಿಗೆ ಬೇಕಾಗಿರುವುದು ಇನ್ನೊಬ್ಬರನ್ನು ನೋಯಿಸಿ ಕೇವಲ ತಾತ್ಕಾಲಿಕ ಸಂತೋಷ.
ದೇಹದ ರಚನೆ ಹೀಗೇ ಇರಬೇಕೆಂದು ಯಾರೂ ನಿರ್ಧರಿಸುವುದಕ್ಕೆ ಆಗುವುದಿಲ್ಲ.
ಒಬ್ಬ ವ್ಯಕ್ತಿಯ ವ್ಯಕ್ತಿತ್ವ, ಬುದ್ಧಿಮತ್ತೆ, ನಡತೆ ಮತ್ತು ಮಾನವೀಯತೆಯೇ ಅವನ/ಅವಳ ನಿಜವಾದ ಸೌಂದರ್ಯ. ದೇಹದ ಆಕಾರ, ಬಣ್ಣ ಅಥವಾ ತೂಕ ಇದನ್ನು ನಿರ್ಧರಿಸುವುದಿಲ್ಲ. ಆದರೂ ನಮ್ಮ ಸಮಾಜದಲ್ಲಿ ಇನ್ನೂ ಈ ಮೂಲಭೂತ ಸತ್ಯವನ್ನು ಅರಿಯದವರು ಹೆಚ್ಚಿದ್ದಾರೆ ಎಂಬುದು ವಿಷಾದಕರ.
ಬಾಡಿ ಶೇಮಿಂಗ್ ಮಾಡುವುದು ಒಂದು ಮಾನಸಿಕ ಅಸ್ವಸ್ಥತೆಯ ಲಕ್ಷಣವೂ ಹೌದು. ತನ್ನೊಳಗಿನ ಕೊರತೆಯನ್ನು ಮರೆಮಾಚಲು, ತನ್ನ ಅಸಮಾಧಾನವನ್ನು ಇನ್ನೊಬ್ಬರ ಮೇಲೆ ಹೊರಿಸಲು ಇಂಥವರು ಪ್ರಯತ್ನಿಸುತ್ತಾರೆ. ಇದರಿಂದ ಅವರು ದೊಡ್ಡವರಾಗುವುದಿಲ್ಲ; ಬದಲಾಗಿ ತಮ್ಮ ಅಸಹ್ಯ ಮನಸ್ಥಿತಿಯನ್ನು ಬಹಿರಂಗಪಡಿಸುತ್ತಾರೆ.
ಸಾನ್ವಿ ಸುದೀಪ್ ಆಗಿರಲಿ ಅಥವಾ ಸಾಮಾನ್ಯ ವ್ಯಕ್ತಿಯಾಗಿರಲಿ – ಪ್ರತಿಯೊಬ್ಬರೂ ಗೌರವದಿಂದ ಬದುಕುವ ಹಕ್ಕು ಹೊಂದಿದ್ದಾರೆ. ಬಾಡಿ ಶೇಮಿಂಗ್ ವಿರುದ್ಧ ಧ್ವನಿ ಎತ್ತುವುದು ಕೇವಲ ಒಬ್ಬರ ಪರ ನಿಲ್ಲುವುದಲ್ಲ, ಮಾನವೀಯ ಮೌಲ್ಯಗಳ ಪರ ನಿಲ್ಲುವುದಾಗಿದೆ.
ನಾವು ಬದಲಾಗಬೇಕು. ನಮ್ಮ ಮಾತುಗಳು ಯಾರ ಮನಸ್ಸಿಗೆ ನೋವುಂಟು ಮಾಡುತ್ತವೆಯೇ ಎಂದು ಯೋಚಿಸಬೇಕು. ಏಕೆಂದರೆ ಬಾಡಿ  ಶೇಮಿಂಗ್ ವ್ಯಕ್ತಿಯ ದೇಹವನ್ನು ಅಲ್ಲ, ಸಮಾಜದ ಚಿಂತನೆಗಳನ್ನು ಬಯಲಿಗೆಳೆಯುತ್ತದೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading