Ad Widget

ಡಿ.26 : ಕೆ.ವಿ.ಜಿ ಜನ್ಮದಿನಾಚರಣೆ ಅಂಗವಾಗಿ ದಶಮಾನೋತ್ಸವ ಸಂಭ್ರಮದಲ್ಲಿರುವ ಅಮರಜ್ಯೋತಿ ಪದವಿಪೂರ್ವ ಕಾಲೇಜು ನೇತೃತ್ವದಲ್ಲಿ ಮ್ಯಾರಥಾನ್

“ಕಳೆದ 9 ವರ್ಷಗಳಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಫಲಿತಾಂಶದೊಂದಿಗೆ ಸುಳ್ಯದ ಪ್ರತಿಷ್ಠಿತ ವಿದ್ಯಾಸಂಸ್ಥೆಯಾಗಿ ಬೆಳೆದಿರುವ ಕೆ.ವಿ.ಜಿ. ಅಮರಜ್ಯೋತಿ ಪದವಿ ಪೂರ್ವ ಕಾಲೇಜು ದಶಮಾನೋತ್ಸವದ ಸಂಭ್ರಮದಲ್ಲಿದ್ದು, ಇದರ ಅಂಗವಾಗಿ ಸಂಸ್ಥಾಪಕರಾದ ಡಾ. ಕುರುಂಜಿ ವೆಂಕಟರಮಣ ಗೌಡರ 97 ನೇ ಜನ್ಮದಿನಾಚರಣೆಯ ಪ್ರಯುಕ್ತ ಡಿ.26 ರಂದು ‘ಆರೋಗ್ಯಕ್ಕಾಗಿ ಓಟ’ ಎಂಬ ಮ್ಯಾರಥಾನ್ ಅನ್ನು ಆಯೋಜಿಸಲಾಗಿದೆ” ಎಂದು ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಯಶೋಧ ರಾಮಚಂದ್ರ ಹೇಳಿದರು.
ಅವರು ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. “ಅಮರಜ್ಯೋತಿ ಪದವಿಪೂರ್ವ ಕಾಲೇಜು ಗ್ರಾಮೀಣ ಭಾಗದಲ್ಲಿ ಕಳೆದ 9 ವರ್ಷಗಳಿಂದ ಗುಣಮಟ್ಟದ ಮೌಲ್ಯಯುತ ಶಿಕ್ಷಣದೊಂದಿಗೆ ಸತತ ಶೇ.100 ಫಲಿತಾಂಶ ದಾಖಲಿಸುತ್ತ ಬಂದಿದೆ. ಜತೆಗೆ ಇಲ್ಲಿನ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿಯೂ ಉತ್ತಮ ಸಾಧನೆ ಮಾಡಿದ್ದಾರೆ. ಕಾಲೇಜಿನ ದಶಮಾನೋತ್ಸವದ ಅಂಗವಾಗಿ ಸಮಾಜಮುಖಿ ಚಿಂತನೆಯೊಂದಿಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದ್ದು, ಇದರ ಅಂಗವಾಗಿ ಸಂಸ್ಥಾಪಕರಾದ ದಿ.ಕುರುಂಜಿ ವೆಂಕಟ್ರಮಣ ಗೌಡರ ಜನ್ಮದಿನಾಚರಣೆಯಂದು ಆರೋಗ್ಯಕ್ಕಾಗಿ ಓಟ ಎಂಬ ಧ್ಯೇಯದೊಂದಿಗೆ ಮ್ಯಾರಥಾನ್ ನಡೆಸಲು ತೀರ್ಮಾನಿಸಲಾಗಿದೆ” ಎಂದರು.
ಸಂಸ್ಥೆಯ ಆಡಳಿತಾಧಿಕಾರಿ ಭವಾನಿ ಶಂಕರ ಅಡ್ತಲೆ ಮಾತನಾಡಿ “ನಿರಂತರ ಸ್ಥಾಪಕ ದಿನಾಚರಣೆಯನ್ನು ಕ್ಯಾಂಪಸ್ ನಲ್ಲಿ ಆಚರಿಸುತ್ತಾ ಬಂದಿದ್ದೇವೆ. ಪೂಜ್ಯರು ಆರಂಭಿಸಿದ ಶಿಕ್ಷಣ ಸಂಸ್ಥೆಗಳನ್ನು ನಮ್ಮ ಸಂಸ್ಥೆಯ ಅಧ್ಯಕ್ಷರಾದ ಡಾ.ರೇಣುಕಾ ಪ್ರಸಾದ್ ಕೆ.ವಿ. ಮುನ್ನಡೆಸಿಕೊಂಡು ಬಂದಿದ್ದಾರೆ. ಜತೆಗೆ ಅವರು ಸುಳ್ಯದ ಗ್ರಾಮೀಣ ಹಾಗೂ ರೈತರ ಮಕ್ಕಳಿಗೆ ಉತ್ತಮ ಗುಣಮಟ್ಟದ ಪದವಿ ಪೂರ್ವ ಶಿಕ್ಷಣವನ್ನು ನೀಡುವ ದೂರದೃಷ್ಟಿಯನ್ನಿಟ್ಟು 9 ವರ್ಷಗಳ ಹಿಂದೆ ಸ್ಥಾಪಕರ ದಿನದಂದು ಈ ಕಾಲೇಜನ್ನು ಆರಂಭಿಸಿದ್ದಾರೆ. ಮಕ್ಕಳಿಗೆ ಕಡಿಮೆ ವೆಚ್ಚದಲ್ಲಿ ಉತ್ತಮ ಫಲಿತಾಂಶ ನೀಡುತ್ತಾ ಬಂದಿದೆ. ಕಳೆದ ವರ್ಷ ತಾಲೂಕಿನಲ್ಲಿಯೇ ಪ್ರಥಮ ಸ್ಥಾನ ಗಳಿಸಿದೆ. ಕಾರ್ಯಕ್ರಮಕ್ಕೆ ಮ್ಯಾನೇಜಿಂಗ್ ಟ್ರಸ್ಟಿ ಡಾ. ರೇಣುಕಾ ಪ್ರಸಾದ್ ಕೆ.ವಿ., ಟ್ರಸ್ಟಿ ಡಾ. ಜ್ಯೋತಿ ಆರ್. ಪ್ರಸಾದ್ ಮತ್ತು ಶ್ರೀ ಮೌರ್ಯ ಆರ್. ಪ್ರಸಾದ್ ಸಂಪೂರ್ಣ ಬೆಂಬಲ ನೀಡಿದ್ದಾರೆ. ಹಾಗೂ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಕಮಿಟಿ’ ಬಿ ‘ ಯಲ್ಲಿ ಬರುವ ಎಲ್ಲ ಸಹ ಸಂಸ್ಥೆಗಳು ಸಂಪೂರ್ಣ ಸಹಕಾರವನ್ನು ನೀಡಲಿದ್ದಾರೆ. ಪ್ರಸಿದ್ಧ ಕ್ರೀಡಾಪಟುಗಳು ಹಾಗೂ ಗಣ್ಯರು ಪ್ರಶಸ್ತಿ ಬಹುಮಾನ ವಿತರಣಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ” ಎಂದರು.
ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನ ದೈಹಿಕ ಶಿಕ್ಷಣ ನಿದೇಶಕರಾದ ಡಾ.ರಾಜೇಶ್ ಮಾತನಾಡಿ “ಮ್ಯಾರಥಾನ್ ಮೂರು ವಿಭಾಗಗಳಲ್ಲಿ ನಡೆಯಲಿದ್ದು ಪುರುಷರಿಗೆ (18 ವರ್ಷ ಮೇಲ್ಪಟ್ಟವರು) 10 ಕಿ.ಮೀ.  ಕೆವಿಜಿ ಅಮರಜ್ಯೋತಿ ಕಾಲೇಜಿನಿಂದ ಪ್ರಾರಂಭಗೊಂಡು ವಿವೇಕಾನಂದ ಸರ್ಕಲ್. ಜ್ಯೋತಿ ಸರ್ಕಲ್. ಪೈಚಾರ್ ವರೆಗೆ ಸಾಗಿ ಪುನಃ ಹಿಂತಿರುಗಿ ಸುಳ್ಯ ಬಸ್ ಸ್ಟ್ಯಾಂಡ್, ಚೆನ್ನಕೇಶವ ದೇವಸ್ಥಾನದ ರಸ್ತೆಯ ಮುಖಾಂತರ ಕಾಲೇಜಿಗೆ ಹಿಂತಿರುಗುವುದು.  ಮಹಿಳೆಯರಿಗೆ(ಎಲ್ಲಾ ವಯೋಮಾನದವರು) ಮತ್ತು ಬಾಲಕರಿಗೆ (18 ವರ್ಷಕ್ಕಿಂತ ಕಡಿಮೆ) 5 ಕಿ.ಮೀ ಮ್ಯಾರಥಾನ್ ನಡೆಯಲಿದ್ದು, ಕೆವಿಜಿ ಅಮರಜ್ಯೋತಿ ಕಾಲೇಜಿನಿಂದ ಪ್ರಾರಂಭಗೊಂಡು ವಿವೇಕಾನಂದ ಸರ್ಕಲ್, ಶ್ರೀರಾಂಪೇಟೆಯಿಂದ ತಿರುಗಿ ಸುಳ್ಯ ಬಸ್ ಸ್ಟ್ಯಾಂಡ್, ಗಾಂಧಿನಗರ, ಉಡುಪಿ ಗಾರ್ಡನ್ ವರೆಗೆ ಸಾಗಿ ಪನಃ ಹಿಂತಿರುಗಿ ಚೆನ್ನಕೇಶವ ದೇವಸ್ಥಾನದ ರಸ್ತೆಯ ಮುಖಾಂತರ ಕಾಲೇಜಿಗೆ ಹಿಂತಿರುಗಬೇಕು. ಮ್ಯಾರಥಾನ್ ವಿಜೇತರಿಗೆ ನಗದು ಬಹುಮಾನವಾಗಿ ಪ್ರಥಮ ರೂ 5,000, ದ್ವಿತೀಯ ರೂ 3,000, ತೃತೀಯ 2,000, ಚತುರ್ಥ ರೂ 1,000 ನೀಡಲಾಗುವುದು. ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲರಿಗೂ ಟಿ-ಶರ್ಟ್ ನೀಡಲಾಗುವುದು. ಓಟವನ್ನು ಪೂರ್ಣಗೊಳಿಸುವ ಎಲ್ಲರಿಗೂ ಪದಕ ಹಾಗೂ ಸರ್ಟಿಫಿಕೇಟ್ ನೀಡಲಾಗುವುದು. ಮಾರ್ಗದುದ್ದಕ್ಕೂ ನೀರಿನ ವ್ಯವಸ್ಥೆ, ವೈದ್ಯಕೀಯ ಸೇವೆ, ತುರ್ತು ವಾಹನ ವ್ಯವಸ್ಥೆ ಹಾಗೂ ಭಾಗವಹಿಸುವರಿಗಾಗಿ ಬೆಳಗ್ಗಿನ ಲಘು ಉಪಹಾರ ವ್ಯವಸ್ಥೆ ಇದೆ” ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಪ್ರಮುಖರಾದ ಮಾಧವ ಬಿ.ಟಿ, ಪ್ರಸನ್ನ ಕಲ್ಲಾಜೆ, ದೀಪಕ್ ವೈ.ಆರ್. ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading