Ad Widget

ದೇವರಗದ್ದೆ ಶಾರದೋತ್ಸವದ ಸಮಾರೋಪ

“ಯುವ ಜನಾಂಗದ ಸಮ್ಮಿಲಿತದ ದುಡಿಮೆಯಿಂದ ಉತ್ಸವಗಳು ಯಶಸ್ವಿ” – ಕೆಡಿಪಿ ಸದಸ್ಯ ಶಿವರಾಮ ರೈ ಅಭಿಮತ

ಸುಬ್ರಹ್ಮಣ್ಯ : “ಸರ್ವರ ಒಗ್ಗಟ್ಟಿನ ಸೇವೆಯಿಂದಾಗಿ ಉತ್ಸವವು ಯಶಸ್ವಿಯಾಗಿ ನೆರವೇರಲು ಸಾಧ್ಯ. ಯುವ ಜನಾಂಗದ ಸಮ್ಮಿಲಿತದ ದುಡಿಮೆಯಿಂದ ಧಾರ್ಮಿಕ ಆಚರಣೆಗಳು ಪ್ರಗತಿಯಾಗುತ್ತದೆ. ನಾಯಕತ್ವದ ಬೆಳವಣಿಗೆಯಿಂದ ದೇಶದ ಪ್ರಗತಿ ಸಾಧ್ಯ. ಉತ್ತಮ ಜೀವನ ನಿರ್ವಹಣೆಗೆ ಉತ್ತಮ ಕಾರ್ಯಗಳನ್ನು ಮಾಡುವುದು ಅತ್ಯಗತ್ಯ. ದೇಶದ ಅಭಿವೃದ್ಧಿಗೆ ಪ್ರಜೆಗಳ ಪ್ರಗತಿಯೇ ಬುನಾದಿಯಾಗುತ್ತದೆ. ಜವಬ್ದಾರಿಯನ್ನು ಸಂಪೂರ್ಣವಾಗಿ ನಿರ್ವಹಿಸುವ ಕಾರ್ಯಕ್ಷಮತೆ ಪ್ರತಿಯೊಬ್ಬರಿಗೂ ಬರಬೇಕು” ಎಂದು ಕೆಡಿಪಿ ಸದಸ್ಯ ಶಿವರಾಮ ರೈ ಅಗರಿಕಜೆ ನುಡಿದರು.
ಕುಕ್ಕೆ ಸುಬ್ರಹ್ಮಣ್ಯದ ದೇವರಗದ್ದೆಯ ಸಾರ್ವಜನಿಕ ಶ್ರೀ ಶಾರದೋತ್ಸವ ಸೇವಾ ಸಮಿತಿ ಮತ್ತು ಅಂಗನವಾಡಿ ಕೇಂದ್ರ ದೇವರಗದ್ದೆ ಇದರ ಆಶ್ರಯದಲ್ಲಿ ನಡೆದ 24ನೇ ವರ್ಷದ ಶಾರದೋತ್ಸವದ ಸಮಾರೋಪ ಸಮಾರಂಭದಲ್ಲಿ ಮುಖ್ಯಅತಿಥಿಗಳಾಗಿ ಅವರು ಮಾತನಾಡಿದರು. “ಹಿರಿಯರು ಹೇಳಿಕೊಟ್ಟ ಜೀವನ ಕ್ರಮವನ್ನು ಅನುಸರಿಸಿಕೊಂಡು ಬದುಕು ಕಟ್ಟಿಕೊಳ್ಳುವುದು ಅತ್ಯಗತ್ಯ. ಮಕ್ಕಳನ್ನು ಮೊಬೈಲ್ ವ್ಯಾಮೋಹದಿಂದ ದೂರವಿಸುವುದು ಪೋಷಕರ ಜವಬ್ದಾರಿಯಾಗಬೇಕು. ಸಂಸ್ಕೃತಿ, ಸಂಸ್ಕಾರ ಪಾಲನೆ ಬಗ್ಗೆ ತಿಳಿಯಲು ಇಂತಹ ಆಚರಣೆಗಳು ಅತ್ಯಗತ್ಯ” ಎಂದರು.

ಪ್ರತಿಭಾ ಪ್ರೋತ್ಸಾಹದಿಂದ ಸ್ಪೂರ್ತಿ : ರತ್ನಾಕರ ಸುಬ್ರಹ್ಮಣ್ಯ “ಪ್ರತಿಭೆಗಳಿಗೆ ಪ್ರೋತ್ಸಾಹ ಸೇರಿದಂತೆ ಕಿರಿಯರಿಗೆ ಆಚರಣೆಗಳ ಮಹತ್ವ ತಿಳಿಸಲು ಧಾರ್ಮಿಕ ಆಚರಣೆಗಳು ಮುಖ್ಯ. ನಮ್ಮ ಪ್ರಾಚೀನ ಸಂಸ್ಕಾರ ಸಂಸ್ಕೃತಿಯ ಅರಿವು ಕಿರಿಯರಿಗೆ ಲಭಿಸಲಿ ಎಂಬ ಉದ್ದೇಶದಿಂದ ಹಿರಿಯರು ಆಚರಣೆಗಳನ್ನು ನಡೆಸಿಕೊಂಡು ಬಂದಿದ್ದಾರೆ. ಉತ್ಸವಗಳ ಸಂದರ್ಭದಲ್ಲಿ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ಶ್ಲಾಘನೀಯ ವಿಚಾರ. ಇದರಿಂದಾಗಿ ಪ್ರತಿಭೆಗಳು ಮತ್ತಷ್ಟು ಸಾಧನೆ ಮೆರೆಯಲು ಸ್ಪೂರ್ತಿ ದೊರಕುತ್ತದೆ” ಎಂದು ಮುಖ್ಯ ಅತಿಥಿಯಾಗಿದ್ದ ಸುಬ್ರಹ್ಮಣ್ಯ ಪ್ರೆಸ್ ಕ್ಲಬ್ ಅಧ್ಯಕ್ಷ ರತ್ನಾಕರ ಸುಬ್ರಹ್ಮಣ್ಯ ಹೇಳಿದರು.

ಗೌರವಾರ್ಪಣೆ : ಸಮಾರಂಭದಲ್ಲಿ ರಾಜ್ಯ ಮಟ್ಟದ ಕ್ರೀಡಾ ಪ್ರತಿಭೆ ಯಜ್ಞೇಶ್ ದೇವರಗದ್ದೆ, ಶೈಕ್ಷಣಿಕ ಸಾಧಕರಾದ ಸ್ವಾತಿ.ಎಸ್.ಆಚಾರ್ಯ ದೇವರಗದ್ದೆ, ನಿಧಿ ಸುವರ್ಣ, ಚೈತ್ರಾ ಕೋಡಿಕಜೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಉತ್ಸವದ ಅಂಗವಾಗಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಸಮಿತಿ ಕಾರ್ಯಾಧ್ಯಕ್ಷೆ ಶೀಲಾ ಗಣೇಶ್ ವಹಿಸಿದ್ದರು. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ, ವ್ಯವಸ್ಥಾಪನಾ ಸಮಿತಿ ಸದಸ್ಯೆ ಸೌಮ್ಯಾ ಭರತ್, ಮಾಜಿ ಸದಸ್ಯ ಮಾಧವ.ಡಿ.ದೇವರಗದ್ದೆ, ಜೇಸಿಐ ಪೂರ್ವಾಧ್ಯಕ್ಷ ಡಾ.ರವಿ ಕಕ್ಕೆಪದವು, ಪ್ರೆಸ್ ಕ್ಲಬ್ ಅಧ್ಯಕ್ಷ ರತ್ನಾಕರ ಸುಬ್ರಹ್ಮಣ್ಯ, ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯ ಪವನ್ ಎಂ.ಡಿ ಮುಖ್ಯಅತಿಥಿಗಳಾಗಿದ್ದರು.
ಅಂಗನವಾಡಿ ಶಿಕ್ಷಕಿ ಕಮಲಾ ಮಾನಾಡು, ಅಂಗನವಾಡಿ ಸಹಾಯಕಿ ಆಶಾ ಶೇಷಕುಮಾರ್, ಬಾಲವಿಕಾಸ ಸಮಿತಿ ಅಧ್ಯಕ್ಷೆ ರಮಾ ಕುಸುಮಾಧರ್ ವೇದಿಕೆಯಲ್ಲಿದ್ದರು.
ವಿನೋದ್ ಪಾಂಡ್ಯನ್ ಮತ್ತು ಭೂಮಿಕಾ ಮಾನಾಡು ನಿರೂಪಿಸಿದರು.
ವನಿತಾ ಲಕ್ಷೀಶ್ ಬಹುಮಾನಿತರ ಪಟ್ಟಿ ವಾಚಿಸಿದರು.
ಲತೇಶ್ ದೇವರಗದ್ದೆ, ತಾರನಾಥ್ ಕೋನಡ್ಕ, ಕಾರ್ತಿಕ್ ದೇವರಗದ್ದೆ ಸಹಕರಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading