Ad Widget

“ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ”ಗೆ ಆಯ್ಕೆಯಾದ ಶ್ರೀಧರ್ ಗೌಡ ಕೆರೆಮೂಲೆ ರವರ ಪರಿಚಯ

ಶಿಕ್ಷಕರ ದಿನಾಚರಣೆಯ ಅಂಗವಾಗಿ ಜಿಲ್ಲಾ ಮಟ್ಟದಲ್ಲಿ ಕೊಡಮಾಡುವ “ಅತ್ಯುತ್ತಮ ಶಿಕ್ಷಕ ಪ್ರಶಸ್ತಿ”ಗೆ ಪ್ರಾಥಮಿಕ ಶಾಲಾ ವಿಭಾಗದಿಂದ ಆಯ್ಕೆಯಾಗಿರುವ ಸೆ.05 ರಂದು ಬೆಳ್ತಂಗಡಿಯ ಸಂತೆಕಟ್ಟೆ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲಾಭವನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದ ಪ್ರಶಸ್ತಿ ಸ್ವೀಕರಿಸಲಿರುವ ಸುಳ್ಯ ತಾಲೂಕಿನ ದೇವಚಳ್ಳ ಸ.ಹಿ.ಪ್ರಾ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀಧರ್ ಗೌಡ ಕೆರೆಮೂಲೆ ರವರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ…
ಶ್ರೀಧರ್ ಗೌಡ ಕೆರೆಮೂಲೆರವರು ಮಾ.07, 1966 ರಂದು ಸುಳ್ಯ ತಾಲೂಕಿನ ನೆಲ್ಲೂರು ಕೆಮ್ರಾಜೆ ಗ್ರಾಮದ ಕೆರೆಮೂಲೆ ದಿ| ಎಲ್ಯಣ್ಣ ಗೌಡ ಹಾಗೂ ಶ್ರೀಮತಿ ದೇವಮ್ಮ ದಂಪತಿಗಳ ಪುತ್ರನಾಗಿ ಜನಿಸಿದರು.
ಇವರು ಸ.ಹಿ.ಪ್ರಾ ಶಾಲೆ ಪೈಲಾರಿನಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಪಡೆದು, ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕ ದಲ್ಲಿ ಪ್ರೌಢ ಶಿಕ್ಷಣವನ್ನು ಪಡೆದು, ಪಂಜದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣವನ್ನು ಪಡೆದಿರುತ್ತಾರೆ.
ನಂತರ ಮಂಗಳೂರಿನ ಸರ್ಕಾರಿ ಶಿಕ್ಷಕರ ತರಬೇತಿ ಸಂಸ್ಥೆ ಕೊಡಿಯಾಲ್ ಬೈಲ್ ಇಲ್ಲಿ ಶಿಕ್ಷಣ ತರಬೇತಿಯನ್ನು ಪಡೆದುಕೊಂಡು ಸೆ.01, 1990 ರಂದು ಸುಳ್ಯ ತಾಲೂಕಿನ ಆಲೆಟ್ಟಿಯ ಭೂತಕಲ್ಲು ಸ.ಕಿ.ಪ್ರಾ ಶಾಲೆಯಲ್ಲಿ ಕರ್ತವ್ಯಕ್ಕೆ ಹಾಜರಾದರು. ಮೂರು ವರ್ಷಗಳ ಕಾಲ ಅಲ್ಲಿ ಕರ್ತವ್ಯ ನಿರ್ವಹಿಸಿದ ಇವರು ಈ ಸಂದರ್ಭದಲ್ಲಿ ಉಬರಡ್ಕದ ಅಮೈಮಡಿಯಾರು ಸಿ.ಹಿ.ಪ್ರಾ ಶಾಲೆಯಲ್ಲಿ ಪ್ರತಿನಿಯುಕ್ತಿಯಲ್ಲಿ ಕಾರ್ಯ ನಿರ್ವಹಿಸಿರುತ್ತಾರೆ.
ನಂತರ ಜೂ.22, 1994 ರಂದು ನಾರ್ಣಕಜೆ ಸ.ಹಿ.ಪ್ರಾ ಶಾಲೆಗೆ ವರ್ಗಾವಣೆಗೊಂಡ ಇವರು ಜು.03, 1998 ರವರೆಗೆ ಇಲ್ಲಿನ ಪ್ರಭಾರ ಮುಖ್ಯ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿರುತ್ತಾರೆ.
ಜು.04, 1998 ರಿಂದ ಸೆ.30, 2014 ರವರೆಗೆ ದೇವಚಳ್ಳ ಸ.ಹಿ.ಪ್ರಾ ಶಾಲೆಯಲ್ಲಿ ಸಹಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿ ಅ.10, 2014 ರಂದು ಪದೋನ್ನತಿಗೊಂಡು ಪ್ರಸ್ತುತ ಇದೇ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಇನ್ನು ತಮ್ಮ ಸೇವಾ ಅವಧಿಯಲ್ಲಿ ಇಂದಿನವರೆಗೆ ಇವರು ಮಾಡಿದ ಸಾಧನೆಗಳ ಕಡೆಗೆ ಗಮನಹರಿಸುತ್ತಾ ಒಂದೊಂದಾಗಿ ಹೇಳುವುದಾದರೆ “ಪ್ರತೀ ವರ್ಷ ಶೈಕ್ಷಣಿಕ ಪ್ರವಾಸ ಆಯೋಜನೆ, ಎನ್.ಎಸ್.ಎಸ್ ಶಿಬಿರ ಆಯೋಜನೆ, ಹೋಬಳಿ ಮಟ್ಟದ ಕ್ರೀಡಾಕೂಟಗಳ ಸಂಘಟನೆ, ತಾಲೂಕು ಮಟ್ಟದ ಚೆಸ್ ಪಂದ್ಯಾಟ ಸಂಘಟನೆ, 2014 ರಿಂದ ಪ್ರತೀವರ್ಷ ಶಾಲಾ ವಾರ್ಷಿಕೋತ್ಸವ ಆಚರಣೆ ಹಾಗೂ ಜಂಟಿಯಾಗಿ ಕ್ರೀಡಾಕೂಟ ನಡೆಸುತ್ತಿರುವುದು, ದತ್ತಿನಿಧಿ ಸಂಗ್ರಹ, ಪೋಷಕರ ಸಹಕಾರದೊಂದಿಗೆ ಗೌರವ ಶಿಕ್ಷಕರ ನೇಮಕಾತಿ, ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಆಯೋಜನೆ, ಪೋಷಕರ ಸಹಕಾರದೊಂದಿಗೆ ಪ್ರತೀ ವರ್ಷ ಶ್ರಮದಾನದ ಮೂಲಕ ಶಾಲಾ ಸ್ವಚ್ಛತಾ ಕಾರ್ಯಕ್ರಮ, 2022-23 ರಿಂದ ಶಾಲಾಭಿವೃದ್ಧಿ ಸಮಿತಿಯ ಸಹಕಾರದೊಂದಿಗೆ ಎಲ್.ಕೆ.ಜಿ ಹಾಗೂ ಯು.ಕೆ.ಜಿ ತರಗತಿಗಳ ಪ್ರಾರಂಭ, 2024-25 ರಿಂದ ದ್ವಿಭಾಷಾ ತರಗತಿ ಪ್ರಾರಂಭ ಹಾಗೂ 2024-25ನೇ ಸಾಲಿನ ಕಲಿಕಾ ಹಬ್ಬ ಕಾರ್ಯಕ್ರಮ ಆಯೋಜನೆ” ಹೀಗೆ ಇವರು ತಮ್ಮ ಸೇವಾ ಅವಧಿಯಲ್ಲಿ ಇಂದಿನವರೆಗೆ ಶೈಕ್ಷಣಿಕವಾಗಿ ಇಷ್ಟು ಸೇವೆಗಳನ್ನು ಅಥವಾ ಸಾಧನೆಗಳನ್ನು ಮಾಡಿದ್ದಾರೆ.
ಇನ್ನು ಇವರ ಸೇವಾ ಅವಧಿಯಲ್ಲಿ ಇವರು ಕರ್ತವ್ಯ ನಿರ್ವಹಿಸುತ್ತಿರುವ ಶಾಲೆಯಲ್ಲಿನ ವಿದ್ಯಾರ್ಥಿಗಳು ಮಾಡಿಸಿದಂತಹ ಸಾಧನೆಗಳತ್ತ ಗಮನ ಹರಿಸುವುದಾದರೆ “ಕ್ಲಸ್ಟರ್, ತಾಲೂಕು ಹಾಗೂ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಪ್ರಶಸ್ತಿ, ನವೋದಯ ವಿದ್ಯಾಲಯಕ್ಕೆ ವಿದ್ಯಾರ್ಥಿಗಳು ಆಯ್ಕೆ ಆಗಿರುವುದು, ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಬಹುಮಾನ ಪಡೆದಿರುವುದು, ತಾಲೂಕು, ರಾಜ್ಯ ಹಾಗೂ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿರುವುದು, ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಸಮಗ್ರ ಪ್ರಶಸ್ತಿ ಪಡೆದಿರುವುದು, ಶಿಶು ಕಲ್ಯಾಣ ಇಲಾಖೆಯ ವತಿಯಿಂದ ನಡೆಸಲಾದ ದೇಶಭಕ್ತಿ ಗೀತೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿರುವುದು, ಕನ್ನಡ ಸಾಹಿತ್ಯ ಪರಿಷತ್ ಸುಳ್ಯ ಇದರ ವತಿಯಿಂದ ನಡೆದ ಸ್ಪರ್ಧೆಯಲ್ಲಿ ಬಹುಮಾನ ಪಡೆದಿರುವುದು ಸೇರಿದಂತೆ ಹೀಗೆ ಇವರ ಶಾಲೆಯ ವಿದ್ಯಾರ್ಥಿಗಳು ಅನೇಕ ಶಾಲಾ ಮಟ್ಟದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದುಕೊಂಡಿರುತ್ತಾರೆ.”
ಇನ್ನು ಶಿಕ್ಷಕರಾಗಿ ಶೈಕ್ಷಣಿಕ ಲೋಕದಲ್ಲಿ ಇವರು ಸಲ್ಲಿಸಿದ ಸೇವೆಗಳ ಬಗ್ಗೆ ಹೇಳುವುದಾದರೆ “ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ(ರಿ.) ಬೆಂಗಳೂರು ಇದರ ಸುಳ್ಯ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ 05 ವರ್ಷ ಹಾಗೂ ಅಧ್ಯಕ್ಷರಾಗಿ 10 ವರ್ಷ ಸೇವೆ ಸಲ್ಲಿಸಿದ ಇವರು ಶಿಕ್ಷಕರ ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಸಮನ್ವಯತೆಯಿಂದ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಮತ್ತು ಇಲಾಖೆಯ ಎಲ್ಲಾ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ವಿದ್ಯಾರ್ಥಿಗಳಿಗೆ, ಪೋಷಕರಿಗೆ ಹಾಗೂ ಸಮುದಾಯಕ್ಕೆ ತಲುಪಿಸುವಲ್ಲಿ ಪ್ರಾಮಾಣಿಕ ಪ್ರಯತ್ನವನ್ನು ಮಾಡಿರುತ್ತಾರೆ. ಈ ಅವಧಿಯಲ್ಲಿ ಇಲಾಖೆ ಹಾಗೂ ಶಿಕ್ಷಕರ ಮಧ್ಯೆ ಯಾವುದೇ ಸಮಸ್ಯೆಗಳು ಬಾರದಂತೆ ಹೊಂದಾಣಿಕೆಯಿಂದ ಕೆಲಸ ನಿರ್ವಹಿಸಿದ ಇವರು 2 ಬಾರಿ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಆಯೋಜನೆ, ಪ್ರತೀ ವರ್ಷ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ಇಲಾಖೆ ಹಾಗೂ ಸಂಘಟಕರ ಜೊತೆಗೆ ಕಾರ್ಯಕ್ರಮಗಳ ಯಶಸ್ಸಿಗೆ ಸಂಪೂರ್ಣ ಸಹಕಾರ ನೀಡಿರುತ್ತಾರೆ. ಹಾಗೆಯೇ ತಾಲೂಕು ಹಾಗೂ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ, ಕ್ರೀಡಾಕೂಟ ಮತ್ತು ಇತರೆ ಶೈಕ್ಷಣಿಕ ಕಾರ್ಯಕ್ರಮಗಳಿಗೆ ಶಿಕ್ಷಕರ ಸಂಘದ ನೆಲೆಯಲ್ಲಿ ಶಾಲಾ ಪಾಠ-ಪ್ರವಚನಗಳಿಗೆ ತೊಂದರೆಯಾಗದಂತೆ ಕಾರ್ಯಕ್ರಮಗಳ ಯಶಸ್ಸಿಗೆ ನಿರಂತರ ಸಹಕಾರ ನೀಡಿರುತ್ತಾರೆ.”
ಇನ್ನು ಇವರ ಈ ವೃತ್ತಿ ಸಾಧನೆಗಾಗಿ 2002-03ನೇ ಸಾಲಿನಲ್ಲಿ ಜನಮೆಚ್ಚಿದ “ಶಿಕ್ಷಕ ಪ್ರಶಸ್ತಿ”, ಜ.08, 2024 ರಂದು ನುಸ್ರುತುಲ್ ಇಸ್ಲಾಂ ಅಸೋಸಿಯೇಷನ್ ಎಲಿಮಲೆ ಇವರಿಂದ “ಸಾಧಕ ಪ್ರಶಸ್ತಿ”, ಜ.09, 2025 ರಂದು ಶಾಲಾ ಶತಮಾನೋತ್ಸವದ ಸಂದರ್ಭದಲ್ಲಿ ಗೌರವ ಸನ್ಮಾನಕ್ಕೆ ಭಾಜನರಾಗಿರುತ್ತಾರೆ.
ಕೊನೆಯದಾಗಿ ಇವರ ವೈಯಕ್ತಿಕ ಜೀವನದ ಬಗ್ಗೆ ಹೇಳುವುದಾದರೆ ಇವರ ಪತ್ನಿ ಶ್ರೀಮತಿ ರೂಪವಾಣಿ.ಬಿ ರವರು ಸ.ಉ.ಹಿ.ಪ್ರಾ ಶಾಲೆ ಅಮರಪಡ್ನೂರು ಇಲ್ಲಿ ಮುಖ್ಯ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮಕ್ಕಳಾದ ನವನೀತ್ ಎಂ.ಎಸ್.ಸಿ ಇನ್ ಎಲೆಕ್ಟ್ರಾನಿಕ್ಸ್ ಹಾಗೂ ನವ್ಯಕೃಷ್ಣ ಸಿವಿಲ್ ಎಂಜಿನಿಯರಿಂಗ್ ಮಾಡುತ್ತಿದ್ದಾರೆ.
ಪ್ರಸ್ತುತ ಸ.ಹಿ.ಪ್ರಾ ಶಾಲೆ ದೇವಚಳ್ಳ ಇಲ್ಲಿ ಮುಖ್ಯ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀಧರ್ ಗೌಡ ರವರು ಮಾ.31, 2026 ರಂದು ವಯೋನಿವೃತ್ತಿ ಹೊಂದಲಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading