Ad Widget

ಕುಕ್ಕೆ ಸುಬ್ರಹ್ಮಣ್ಯ : ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆದ 55ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ – ಶ್ರೀ ಮಹಾಗಣಪತಿ ದೇವರಿಗೆ ರಜತ ಪ್ರಭಾವಳಿ ಸಮರ್ಪಣೆ ; ಸರ್ವಾಲಂಕೃತ ರಥದಲ್ಲಿ ವೈಭವದಿಂದ ನಡೆದ ಶ್ರೀ ಗಣೇಶ ದೇವರ ಶೋಭಾಯಾತ್ರೆ ಹಾಗೂ ವಿಸರ್ಜನೆ

(ವರದಿ : ಉಲ್ಲಾಸ್ ಕಜ್ಜೋಡಿ) ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ(ರಿ.) ಕುಕ್ಕೆ ಸುಬ್ರಹ್ಮಣ್ಯ ಇದರ ಆಶ್ರಯದಲ್ಲಿ “55ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ”ವು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಆ.27 ರಿಂದ ಸೆ.02 ರವರೆಗೆ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ರಥಬೀದಿಯ ಪಕ್ಕದಲ್ಲಿರುವ ಸಭಾಂಗಣದಲ್ಲಿ ನಡೆಯಿತು.
ಮೊದಲ ದಿನವಾದ ಜು.27 ರಂದು ಪೂರ್ವಾಹ್ನ ಗಣಪತಿ ಪ್ರತಿಷ್ಠಾಪನೆ ನಡೆದು ಶ್ರೀ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ “ಶ್ರೀ ಮಹಾಗಣಪತಿ ದೇವರಿಗೆ ರಜತ ಪ್ರಭಾವಳಿ ಸಮರ್ಪಣೆ” ಕಾರ್ಯಕ್ರಮ ನಡೆದು ನಂತರ 108 ತೆಂಗಿನಕಾಯಿ ಗಣಪತಿ ಹವನ ಹಾಗೂ ಮಧ್ಯಾಹ್ನ ಮಹಾಪೂಜೆ ನಡೆಯಿತು. ನಂತರ “ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳು” ನಡೆಯಿತು. ಹಾಗೆಯೇ ಸಂಜೆಯಿಂದ ಶಿವಸ್ಕಂದ ಭಜನಾ ಮಂಡಳಿ ಸುಬ್ರಹ್ಮಣ್ಯ ಇವರಿಂದ ಭಜನಾ ಕಾರ್ಯಕ್ರಮ, ವಿದುಷಿ ಕು| ಮೇಧಾ ವಿದ್ಯಾಭೂಷಣ ಬೆಂಗಳೂರು ಇವರಿಂದ “ಕರ್ನಾಟಕ ಶಾಸ್ತ್ರೀಯ ಸಂಗೀತ ಹಾಗೂ ಭಕ್ತಿ ಸಂಗೀತ”, ಗಾನ ನೃತ್ಯ ಅಕಾಡೆಮಿ ಮಂಗಳೂರು ಹಾಗೂ ಸುಳ್ಯದ ಕಲಾವಿದರಿಂದ ವಿದುಷಿ ಶ್ರೀಮತಿ ವಿದ್ಯಾಶ್ರೀ ರಾಧಾಕೃಷ್ಣ ಇವರ ನಿರ್ದೇಶನದಲ್ಲಿ “ನೃತ್ಯ ಸಂಗಮ ಹಾಗೂ ನೃತ್ಯ ರೂಪಕ-ಶ್ರೀನಿವಾಸ ಕಲ್ಯಾಣ” ಹಾಗೂ ಗೀತಾ ನೃತ್ಯಾಲಯ ಧರ್ಮಸ್ಥಳ ಪ್ರಸ್ತುತಪಡಿಸುವ ವಿದುಷಿ ಶ್ರೀಮತಿ ಚೈತ್ರಾ ಭಟ್ ಮತ್ತು ತಂಡದವರಿಂದ “ಸಮೂಹ ನೃತ್ಯ” ಕಾರ್ಯಕ್ರಮ ನಡೆಯಿತು.
ಎರಡನೇ ದಿನವಾದ ಆ.28 ರಂದು ಪೂರ್ವಾಹ್ನ ವಿದ್ಯಾಸಾಗರ ಭಜನಾ ಸಂಗಮ ಸುಬ್ರಹ್ಮಣ್ಯ ಇವರಿಂದ ಭಜನಾ ಕಾರ್ಯಕ್ರಮ ನಡೆದು ಸಂಜೆ ಖ್ಯಾತ ಭಾಗವತರಾದ ಶ್ರೀ ನಾರಾಯಣ ಶಬರಾಯ ಮತ್ತು ಬಳಗದವರಿಂದ “ತೆಂಕು-ಬಡಗು ಯಕ್ಷ-ಗಾನ ವೈಭವ”, ಕಲಾರತ್ನ ಶಂ.ನಾ.ಅಡಿಗ ಕುಂಬ್ಳೆ ಮತ್ತು ಬಳಗದವರಿಂದ “ಹರಿಕಥಾ ಸತ್ಸಂಗ-ಭೂ ಕೈಲಾಸ”, ರಾತ್ರಿ ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದ ವಿದ್ಯಾರ್ಥಿಗಳಿಂದ “ಕುಮಾರ ವೈಭವ” ಹಾಗೂ ಸುಬ್ರಹ್ಮಣ್ಯ ಕೆ.ಎಸ್.ಎಸ್ ಕಾಲೇಜಿನ ಸಾಂಸ್ಕೃತಿಕ ತಂಡದ ವಿದ್ಯಾರ್ಥಿಗಳಿಂದ “ನೃತ್ಯ ವೈವಿಧ್ಯ” ನಡೆಯಿತು.
ಮೂರನೇ ದಿನವಾದ ಆ.29 ರಂದು ಸಂಜೆ ಮರಕತ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಇವರಿಂದ ಭಜನಾ ಕಾರ್ಯಕ್ರಮ, ಆಶಿಕ್ ನಾಯಕ್ ಬೆಂಗಳೂರು ಮತ್ತು ಕು.ಹಿತಾರ್ಥಿ ಬೆಂಗಳೂರು ಇವರಿಂದ “ದಾಸರ ಪದಗಳು ಮತ್ತು ಸುಗಮ ಸಂಗೀತ” ಹಾಗೂ ರಾತ್ರಿ “ಜೈ ಭಜರಂಗ ಬಲಿ” ಚಾರಿತ್ರಿಕ ತುಳು ನಾಟಕ ನಡೆಯಿತು.
ನಾಲ್ಕನೇ ದಿನವಾದ ಆ.30 ರಂದು ಸಂಜೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ನೌಕರ ವೃಂದದವರಿಂದ ಭಜನಾ ಕಾರ್ಯಕ್ರಮ, ಭಾರತೀಯ ಕಲೆಗಳ ತರಬೇತಿ ಕೇಂದ್ರ ನೃತ್ಯ ನಿನಾದ ಕಡಬದ ವಿದ್ಯಾರ್ಥಿಗಳಿಂದ ನೃತ್ಯಗುರು ವಿದುಷಿ ಶ್ರೀಮತಿ ಪ್ರಮೀಳಾ ಲೋಕೇಶ್ ನಿರ್ದೇಶನದಲ್ಲಿ “ಭಾರತೀಯ ನೃತ್ಯ ಕಲಾ ವೈಭವ” ಹಾಗೂ ರಾತ್ರಿ ಹನುಮಗಿರಿ ಮೇಳ ಹಾಗೂ ಪ್ರಸಿದ್ಧ ಮೇಳಗಳ ಆಯ್ದ ಕಲಾವಿದರಿಂದ “ಶ್ರೀಕೃಷ್ಣ ಪಾರಿಜಾತ-ನರಕಾಸುರ ವಧೆ” ಪೌರಾಣಿಕ ಯಕ್ಷಗಾನ ಪ್ರಸಂಗ ನಡೆಯಿತು.
ಐದನೇ ದಿನವಾದ ಆ.31 ರಂದು ಸಂಜೆ ಶ್ರೀವಲ್ಲಿ ಮಹಿಳಾ ಭಜನಾ ಮಂಡಳಿ ಸುಬ್ರಹ್ಮಣ್ಯ ಇವರಿಂದ ಭಜನಾ ಕಾರ್ಯಕ್ರಮ, ಕಾರ್ತಿಕ್ ಸುಬ್ರಹ್ಮಣ್ಯ ಮತ್ತು ಕಲಾವಿದರಿಂದ “ವಾದ್ಯ ಸಂಗೀತ ಮೇಳ”, ರಾತ್ರಿ ಸುಬ್ರಹ್ಮಣ್ಯ ಎಸ್.ಎಸ್.ಪಿ.ಯು ಕಾಲೇಜಿನ ಸಾಂಸ್ಕೃತಿಕ ತಂಡದ ವಿದ್ಯಾರ್ಥಿಗಳಿಂದ ಶ್ರೀಮತಿ ರೇಖಾರಾಣಿ ಸೋಮಶೇಖರ್ ನಿರ್ದೇಶನದಲ್ಲಿ “ಜಾನಪದೀಯ ನೃತ್ಯ ಸಿಂಚನ” ಹಾಗೂ ನೃತ್ಯೋಪಾಸನಾ ಕಲಾ ಅಕಾಡೆಮಿ ಪುತ್ತೂರು ಶಾಖೆ ಪ್ರಸ್ತುತಪಡಿಸುವ ವಿದುಷಿ ಶ್ರೀಮತಿ ಶಾಲಿನಿ ಆತ್ಮಭೂಷಣ್ ನಿರ್ದೇಶನದ “ನೃತ್ಯೋಹಂ” ನಡೆಯಿತು.
ಆರನೇ ದಿನವಾದ ಸೆ.01 ರಂದು ಅಪರಾಹ್ನ ಅಕ್ಷರ ಗಾನಸುಧೆ ಸುಬ್ರಹ್ಮಣ್ಯ ಪ್ರಸ್ತುತಪಡಿಸುವ “ಭಕ್ತಿ-ಭಾವ ಗಾಯನ”, ಸಂಜೆ ಧಾರ್ಮಿಕ ಸಭೆ, “ತೆಲಿಕೆದ ಬರ್ಸ ಯಕ್ಷ ತೆಲಿಕೆ”, ಹಾಗೂ ರಾತ್ರಿ ತುಳು ಹಾಸ್ಯಮಯ ನಾಟಕ “ಪುದರ್ ದೀತಿಜಿ” ನಡೆಯಿತು.
ಏಳನೇ ಹಾಗೂ ಕೊನೆಯ ದಿನವಾದ ಸೆ.02 ರಂದು ಕೆ.ಯಜ್ಞೇಶ್ ಆಚಾರ್ ಮತ್ತು ಬಳಗದವರಿಂದ “ಭಕ್ತಿ ಸಂಗೀತ” ಕಾರ್ಯಕ್ರಮ ಹಾಗೂ ಅಪರಾಹ್ನ ಮಹಾ ಮಂಗಳಾರತಿ ನಡೆದು ನಂತರ ಸ್ಕಂದಶ್ರೀ ಯುವ ಮಲೆಕುಡಿಯರ ಸಂಘದಿಂದ ಸಾಂಪ್ರದಾಯಿಕ ಸ್ತಬ್ಧಚಿತ್ರ, ಕುಕ್ಕೆಶ್ರೀ ಖಾಸಗಿ ಟ್ಯಾಕ್ಸಿ ಚಾಲಕ-ಮಾಲಕರ ಸಂಘದಿಂದ ವೈಶಿಷ್ಟ್ಯಮಯ ಸ್ತಬ್ಧಚಿತ್ರ, ಶ್ರೀ ಸಂಪುಟ ನರಸಿಂಹ ಸ್ವಾಮಿ ಸುಬ್ರಹ್ಮಣ್ಯ ಮಠದ ನೌಕರ ವೃಂದದಿಂದ ಮನಮೋಹಕ ಸ್ತಬ್ಧಚಿತ್ರ, ಕುಕ್ಕೆಶ್ರೀ ಆಟೋ ಚಾಲಕ-ಮಾಲಕರ ಸಂಘದಿಂದ ವಿನೂತನ ಸ್ತಬ್ಧಚಿತ್ರ, ಬಿ.ಎಂ.ಎಸ್ ಆಟೋ ಚಾಲಕ-ಮಾಲಕರ ಸಂಘದಿಂದ ಆಕರ್ಷಕ ಸ್ತಬ್ಧಚಿತ್ರ, ಫ್ರೆಂಡ್ಸ್ ಸುಬ್ರಹ್ಮಣ್ಯ, ಕುಣಿತ ಭಜನೆ, ಮಂಗಳವಾದ್ಯ, ಗೊಂಬೆ-ಕೀಲುಕುದುರೆ ಹಾಗೂ ಸಾಂಪ್ರದಾಯಿಕ ಬ್ಯಾಂಡ್ ವಾದನದೊಂದಿಗೆ ಸರ್ವಾಲಂಕೃತ ರಥದಲ್ಲಿ ವೈಭವದ “ಶ್ರೀ ಗಣಪತಿ ಶೋಭಾಯಾತ್ರೆ” ಯೊಂದಿಗೆ ಶ್ರೀ ಗಣೇಶ ದೇವರ ವಿಸರ್ಜನೆ ನಡೆಯುವುದರೊಂದಿಗೆ 55ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಸಂಪನ್ನಗೊಂಡಿತು.
ಹಾಗೇಯೇ ಆ.28, 29 ಹಾಗೂ 30 ರಂದು ಅಪರಾಹ್ನ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ “ವಿವಿಧ ರೀತಿಯ ಕ್ರೀಡಾ ಸ್ಪರ್ಧೆಗಳು” ನಡೆಯಿತು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading