
ಪ್ರಸ್ತುತ ಸುಳ್ಯ ತಾಲೂಕು ಆರೋಗ್ಯಾಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸುತ್ತಿರುವಂತಹ ಡಾ| ನಂದಕುಮಾರ್ ಬಾಳಿಕಳ ರವರು ಮಾ.31 ರಂದು ಸೇವಾ ನಿವೃತ್ತಿ ಹೊಂದುತ್ತಿದ್ದು, ಸುಳ್ಯ ತಾಲೂಕು ಮಡಪ್ಪಾಡಿ ಗ್ರಾಮದ ಕಡ್ಯ ತರವಾಡು ರಾಘವ ರೇಂಜರ್ ಎಂದೇ ಖ್ಯಾತಿ ಹೊಂದಿದ್ದ ನಿವೃತ್ತ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಬಾಳಿಕಳ ಶ್ರೀ ರಾಘವ ಗೌಡ ಮತ್ತು ಶ್ರೀಮತಿ ಯಶೋಧ ದಂಪತಿಯ ಪುತ್ರರಾಗಿ 23 ಮಾರ್ಚ್ 1965 ರಂದು ಡಾ|| ನಂದಕುಮಾರ್ ರವರು ಜನಿಸಿದರು. ಇವರ ಕಿರಿಯ ಸಹೋದರಿಯರು ಪ್ರಮೀಳಾ ನಳಿನ್ ಕುಮಾರ್ ಕೋಡ್ತುಗುಳಿ ಮತ್ತು ಲತಾ ಮಧುಸೂದನ್ ಕುಂಬಕೋಡು.
ಡಾ|| ನಂದಕುಮಾರ್ ರವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸುಳ್ಯ, ಪುತ್ತೂರು, ಬೈಂದೂರು, ಹೆಬ್ರಿ ಯಲ್ಲಿ, ಪ್ರೌಢ ಶಿಕ್ಷಣ ಹಾಗೂ ಪದವಿಪೂರ್ವ ಶಿಕ್ಷಣವನ್ನು ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ಜೂನಿಯರ್ ಕಾಲೇಜಿನಲ್ಲಿ ಮುಗಿಸಿದರು. ನಂತರ ಎಂ.ಬಿ.ಬಿ.ಎಸ್ ಪದವಿಯನ್ನು 1992 ರಲ್ಲಿ ಬೆಂಗಳೂರು ಒಕ್ಕಲಿಗರ ಸಂಘದ ಕೆಂಪೇಗೌಡ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಪಡೆದು ಬೆಂಗಳೂರಿನಲ್ಲಿ ತರಬೇತಿ ಪಡೆದು ಊರಿಗೆ ಬಂದರು.
ನಂತರ ಪುತ್ತೂರು ಚೇತನಾ ಆಸ್ಪತ್ರೆಯಲ್ಲಿ ಖಾಸಗಿ ಸೇವೆ ಪ್ರಾರಂಭಿಸಿ ಕಾಸರಗೋಡು ಕಿಮ್ಸ್ ಆಸ್ಪತ್ರೆಯಲ್ಲಿ 2 ವರ್ಷ, ಸರ್ಕಾರಿ ಸೇವೆಗೆ ಸುಳ್ಯದ ಗಾರ್ಡನ್ ಆಸ್ಪತ್ರೆಯಲ್ಲಿ 1998 ರವರೆಗೆ ಸೇವೆ ಸಲ್ಲಿಸಿ ನಂತರ ಸರಕಾರದ ಆದೇಶದ ಮೇರೆಗೆ ಗುತ್ತಿಗೆ ಆಧಾರದಲ್ಲಿ 1998 ಮೇ.01 ರಂದು ಪ್ರಾಥಮಿಕ ಆರೋಗ್ಯ ಕೇಂದ್ರ ಕೊಲ್ಲಮೊಗ್ರು ಇಲ್ಲಿಗೆ ಸೇರ್ಪಡೆಗೊಂಡು 2006ನೇ ಇಸವಿಯ ನಂತರ 2015ನೇ ಇಸವಿಯವರೆಗೆ ಪ್ರಾಥಮಿಕ ಆರೋಗ್ಯ ಕೇಂದ್ರ ಗುತ್ತಿಗಾರು ಇಲ್ಲಿ ಸೇವೆ ಸಲ್ಲಿಸಿ ಪದೋನ್ನತಿ ಹೊಂದಿ ಎಸ್.ಎಂ.ಓ ಆಗಿ ಪದೋನ್ನತಿ ಹೊಂದಿ ಸುಳ್ಯದ ಸಂಚಾರಿ ಗಿರಿಜನ ಆರೋಗ್ಯ ಘಟಕಕ್ಕೆ ವರ್ಗಾವಣೆಗೊಂಡರು. 2021 ರಲ್ಲಿ ಪ್ರಭಾರ ತಾಲೂಕು ಆರೋಗ್ಯಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿ 2023 ರಲ್ಲಿ ಖಾಯಂ ತಾಲೂಕು ಆರೋಗ್ಯಾಧಿಕಾರಿಯಾಗಿ ಮುಂದುವರೆದು 29 ವರ್ಷಗಳ ಕಾಲ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಜನಮೆಚ್ಚುಗೆ ಗಳಿಸಿದ ವೈದ್ಯರಾಗಿ ಸುದೀರ್ಘ ಸರ್ಕಾರಿ ಸೇವೆಯನ್ನು ಸಲ್ಲಿಸಿ ಮಾ.31 2025 ರಂದು ವಯೋ ನಿವೃತ್ತಿ ಹೊಂದುತ್ತಿದ್ದಾರೆ.
ಇವರ ಪತ್ನಿ ಮಂಜುಳಾ, ಪುತ್ರಿ ಆತ್ಮಿಕಾ ಬೆಂಗಳೂರಿನ ಎನ್.ಎಂ.ಸಿ, ಐ.ಬಿ.ಎಂ ಕಂಪೆನಿಯ ಉದ್ಯೋಗಿ ಹಾಗೂ ಪುತ್ರ ಆಸ್ತಿಕ್ ರಾಘವ್ ನಿಟ್ಟೆ ಎ.ಬಿ ಶೆಟ್ಟಿ ಡೆಂಟಲ್ ಕಾಲೇಜಿನಲ್ಲಿ ದ್ವಿತೀಯ ಬಿ.ಡಿ.ಎಸ್ ವ್ಯಾಸಂಗ ಮಾಡುತ್ತಿದ್ದಾರೆ.
