
ಸುಬ್ರಹ್ಮಣ್ಯ ಮಾ.15: ಸುಬ್ರಹ್ಮಣ್ಯ ಸಮೀಪದ ಕೈಕಂಬ ನಡುತೋಟ ಶ್ರೀ ಶಿರಾಡಿ ದೈವದ ವಾರ್ಷಿಕ ನೇಮೋತ್ಸವ ಶುಕ್ರವಾರ ರಾತ್ರಿಯಿಂದ ಆರಂಭಗೊಂಡು ಶನಿವಾರ ಮಧ್ಯಾಹ್ನ ತನಕ ಜರಗಿತು.
ಶುಕ್ರವಾರ ಸಂಜೆ ಶಿರಾಡಿ ದೈವದ ಚಾವಡಿಯಿಂದ ಭಂಢಾರ ತೆಗೆದು ಕೊಡಿನಾಡದಲ್ಲಿ ಇಡಲಾಯಿತು. ತದನಂತರ ದೈವಗಳಿಗೆ ಎಣ್ಣೆ ಇಡಲಾಯಿತು.
ನಾಗಭ್ರಹ್ಮ, ಪಂಜುರ್ಲಿ, ಗುಳಿಗ, ಸತ್ಯದೇವತೆ ಮುಂತಾದ 15 ದೈವಗಳು ನರ್ತನ ಸೇವೆಯನ್ನು ಮಾಡಿ ಕೊನೆಗೆ ಶಿರಾಡಿ ದೈವದ ನೇಮೋತ್ಸವ ಜರಗಿತು.
ಗ್ರಾಮ ದೈವವಾದ ಶಿರಾಡಿ ದೈವವು ನಡುತೋಟ ,ಕಳಿಗೆ ಹಾಗೂ ಪಳ್ಳಿಗದ್ದೆ ಪ್ರದೇಶಗಳಿಗೆ ಸಂಬಂಧಿಸಿದರೂ ಉಳಿದ ಪ್ರದೇಶಗಳಿಂದ ಅಧಿಕ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು.
ಶುಕ್ರವಾರ ರಾತ್ರಿ ನೇಮೋತ್ಸವಕ್ಕೆ ಬಂದ ಎಲ್ಲ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಕೂಡ ನಡೆಯಿತು.
ಶನಿವಾರ ಶಿರಾಡಿ ದೈವ ಆಗಮಿಸಿದ ಎಲ್ಲರಿಗೂ ಪ್ರಸಾದವನ್ನು ನೀಡಿತು. ಈ ಸಂದರ್ಭದಲ್ಲಿ ದೈವಸ್ಥಾನದ ಆಡಳಿತ ಮಂಡಳಿಯವರು ,ಮುಖ್ಯ ಪೂಜಾರಿಗಳು, ಸಹಾಯಕ ಪೂಜಾರಿಗಳು, ನಾಲ್ವಕ್ಕಿಯವರು, ಊರ ಗಣ್ಯರು ,ಹಾಗೂ ಊರವರು ಪಾಲ್ಗೊಂಡಿದ್ದರು.
