
ಗೋವು ಉಳಿದರೇ ಮಾತ್ರ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಾಧ್ಯವಿದೆ ಎಂದು ರಾಷ್ಟ್ರೀಯ ಗೋ ಸೇವಾ ಸಂಸ್ಥಾನ್ ಟ್ರಸ್ಟ್ ನ ಅಧ್ಯಕ್ಷರಾದ ಭಕ್ತಿಭೂಷನ್ ದಾಸ್ ಹೇಳಿದರು.
ಗೋ ಸೇವಾ ಗತಿನಿಧಿ ಕರ್ನಾಟಕ, ರಾಧ ಸುರಭಿ ಗೋ ಮಂದಿರ, ರಾಷ್ಟ್ರೀಯ ಗೋ ಸೇವಾ ಸಂಸ್ಥಾನ ಟ್ರಸ್ಟ್ ಇವರ ಸಹಯೋಗದೊಂದಿಗೆ ನಡೆಯುವ ನಂದಿ ರಥಯಾತ್ರೆಯ ಅಂಗವಾಗಿ ಸುಳ್ಯದ ಚೆನ್ನಕೇಶವ ದೇವಸ್ಥಾನದ ಎದುರು ನಡೆದ ಸಭಾಕಾರ್ಯಕ್ರಮದಲ್ಲಿ ಮಾತನಾಡಿದರು.
ಗೋವು ಮತ್ತು ನಂದಿ ಎಲ್ಲಿ ಒಡಾಡಿಕೊಂಡಿರುತ್ತದೆಯೋ ಅಲ್ಲಿ ಪವಿತ್ರವಾಗಿರುತ್ತದೆ. ಗೋವು ಆದರಿತ ಕೃಷಿಯಿಂದ ಮಾತ್ರ ಮಣ್ಣು ಫಲವತ್ತಾಗುತ್ತದೆ. ಈಗಿನ ಕೃಷಿಯಿಂದ ಮಣ್ಣು ನಾಶ ಆಗುತ್ತಿದೆ. ಆರೋಗ್ಯ ಪೂರ್ಣ ಆಹಾರ ಬೆಳೆಗಳನ್ನು ಗೋವು ಆಧರಿತ ಕೃಷಿ ಮಾಡಬೇಕು. ಇಂದಿನ ಕೃಷಿಯಿಂದಾಗಿ ರೋಗರುಜಿನ ಹೆಚ್ಚಾಗುತ್ತಿದೆ. ಆಸ್ಪತ್ರೆಗಳ ಸಂಖ್ಯೆ ಜಾಸ್ತಿಯಾಗುತ್ತಿದೆ. ಗೋವು ಉಳಿದರೇ ಪ್ರಕೃತಿ ಉಳಿದಂತೆ. ಈ ಹಿನ್ನೆಲೆಯಲ್ಲಿ ಜಾಗೃತಿ ಮೂಡಿಸಲು ನಂದಿಯಾತ್ರೆ ಮಾಡುತ್ತಿದ್ದೇವೆ ಎಂದರು.



ಹಲವಾರು ವರ್ಷಗಳಿಂದ ಗೋ ಫಾರ್ಮ್ ಮಾಡುತ್ತಿರುವ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಮಾತನಾಡಿ ಇಂದು ನಾವು ಗೋವಿನ ಬಗ್ಗೆ ಅರಿವು ಮೂಡಿಸಲು ಯಾತ್ರೆ ಮಾಡುವಂತಾಗಿರುವುದು ಬೇಸರದ ಸಂಗತಿ. ಗೋವಿನಲ್ಲಿ ಎಲ್ಲಾ ದೇವತೆಗಳು ನೆಲೆಸಿದ್ದಾರೆ. ಹಲವಾರು ವರ್ಷಗಳಿಂದ ನನ್ನ ತೋಟವನ್ನು ಹಸಿರು ಮಾಡಿದ್ದೇ ಗೋವು. ಗೋವನ್ನು ಹಾಲಿಗೋಸ್ಕರ ಸಾಕುವುದಿಲ್ಲ. ಗೋಮಯ, ಗೋಮೂತ್ರದಿಂದ ನಮ್ಮ ಫಾರ್ಮ್ ನಲ್ಲಿಯೇ ಸಿ ಎನ್ ಜಿ ಉತ್ತತ್ತಿ ಮಾಡುತ್ತಿದ್ದೇವೆ ಎಂದರು.
ವೇದಿಕೆಯಲ್ಲಿ ನಂದಿ ರಥಯಾತ್ರೆಯ ಸ್ವಾಗತ ಸಮಿತಿ ಅಧ್ಯಕ್ಷ ಅಕ್ಷಯ ಕೆ.ಸಿ., ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷರಾದ ಪತಂಜಲಿ ಭಾರಧ್ವಾಜ್, ಮಾಜಿ ಸಚಿವ ಎಸ್.ಅಂಗಾರ, ಶಾಸಕಿ ಭಾಗೀರಥಿ ಮುರುಳ್ಯ, ನ.ಪಂ.ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ಸನತ್ ಪಿ.ಆರ್., ಹರಪ್ರಸಾದ್ ತುದಿಯಡ್ಕ, ಗಿರೀಶ್ ಭಾರಧ್ವಾಜ್, ಚಂದ್ರಶೇಖರ ದಾಮ್ಲೆ, ಸುಧಾಕರ ಕಾಮತ್, ಪಶು ವೈದ್ಯರುಗಳಾದ ಡಾ.ಕೇಶವ ಸುಳ್ಳಿ, ಡಾ.ಸೂರ್ಯನಾರಾಯಣ, ಡಾ.ಪುನೀತ್ ಎಸ್.ಕೆ.ಸೋಣಂಗೇರಿ ಉಪಸ್ಥಿತರಿದ್ದರು.
ನಂದಿ ರಥಯಾತ್ರೆಯು ರಾಜ್ಯಾದ್ಯಾಂತ ಸಂಚರಿಸಲಿದ್ದು, ಮಾ.14 ರಂದು ಸುಬ್ರಹ್ಮಣ್ಯಕ್ಕೆ ಆಗಮಿಸಿದ್ದು ಇಂದು ಸುಳ್ಯಕ್ಕೆ ಆಗಮಿಸಿದ ವೇಳೆ ಜ್ಯೋತಿ ಸರ್ಕಲ್ ಬಳಿಯಲ್ಲಿ ನೂರಾರು ಹಿಂದೂ ಬಾಂಧವರು ನಂದಿ ರಥಯಾತ್ರೆಯನ್ನು ಅದ್ದೂರಿಯಾಗಿ ಸ್ವಾಗತಿಸಿದರು. ಬಳಿಕ ಮೆರವಣಿಗೆಯಲ್ಲಿ ರಥಯಾತ್ರೆಯು ಸುಳ್ಯ ಚೆನ್ನಕೇಶವ ದೇವಸ್ಥಾನದ ಮುಂಭಾಗಕ್ಕೆ ಆಗಮಿಸಿದ ಬಳಿಕ ಸಭಾ ಕಾರ್ಯಕ್ರಮ ನಡೆಯಿತು.
ಸಂಚಾಲಕ ರಾಜೇಶ್ ಶೆಟ್ಟಿ ಮೇನಾಲ ಸ್ವಾಗತಿಸಿದರು. ಹರ್ಷಿತ್ ಮರ್ಕಂಜ ಧ್ಯೇಯ ಗೀತೆ ಹಾಡಿದರು. ಪ್ರ.ಕಾರ್ಯದರ್ಶಿ ಜಗದೀಶ್ ಡಿ.ಪಿ. ವಂದಿಸಿದರು. ಕುಸುಮಾಧರ ಎ.ಟಿ.ವಂದಿಸಿದರು.
