
ಪಾದಾಚಾರಿಗಳಿಗೆ ಕಾರೊಂದು ಢಿಕ್ಕಿ ಹೊಡೆದು ಚಾಲಕ ನಿಲ್ಲಿಸದೇ ಪರಾರಿಯಾದ ಘಟನೆ ಕನಕಮಜಲಿನ ಸುಣ್ಣಮೂಲೆಯಲ್ಲಿ ಕಳೆದ ರಾತ್ರಿ ನಡೆದಿದೆ. ಗಂಭೀರವಾಗಿ ಗಾಯಗೊಂಡ ಇಬ್ಬರನ್ನು ಸ್ಥಳೀಯರು ಆಸ್ಪತ್ರೆಗೆ ರವಾನಿಸಿದ್ದು ಒರ್ವನನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕರೆದೊಯ್ಯಲಾಗಿದೆ ಎಂದು ತಿಳಿದುಬಂದಿದೆ.
ಕನಕಮಜಲು ಶ್ರೀ ಆತ್ಮಾರಾಮ ಭಜನಾ ಮಂದಿರದ ಏಕಾಹ ಭಜನೆ ನಡೆಯುತ್ತಿದ್ದು, ಕೋಡಿಯ ಜನಾರ್ದನ ಶೆಟ್ಟಿ ಹಾಗೂ ಅವರ ಮಾವ ರಾಮ ಶೆಟ್ಟಿ ಅವರು ಏಕಾಹ ಭಜನೆಗೆ ಮುಖ್ಯರಸ್ತೆ ಬದಿಯಲ್ಲಿ ನಡೆದುಕೊಂಡು ಬರುತ್ತಿದ್ದ ವೇಳೆ ಪುತ್ತೂರಿನಿಂದ ಸುಳ್ಯ ಕಡೆಗೆ ತೆರಳುತ್ತಿದ್ದ ಕಾರೊಂದು ರಭಸವಾಗಿ ಬಂದು ಇವರಿಬ್ಬರಿಗೆ ಢಿಕ್ಕಿ ಹೊಡೆಯಿತೆನ್ಮಲಾಗಿದೆ. ಈ ವೇಳೆ ರಾಮ ಶೆಟ್ಟಿ ಅವರು ರಸ್ತೆ ಬದಿ ಬಿದ್ದಿರುವುದನ್ನು ಗಮನಿಸಿದ ಸ್ಥಳೀಯರು ಅವರನ್ನು ಅಂಬ್ಯುಲೆನ್ಸ್ ಮೂಲಕ ಸುಳ್ಯದ ಕೆವಿಜಿ ಆಸ್ಪತ್ರೆಗೆ ಕರೆತಂದು ದಾಖಲಿಸಿದ್ದರು. ಆದರೆ ಕಾರು ಜನಾರ್ದನ ಅವರಿಗೂ ಢಿಕ್ಕಿ ಹೊಡೆದಿದ್ದು, ಅವರು ರಸ್ತೆಯಿಂದ ಸ್ವಲ್ಪ ದೂರ ಎಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡು ಪ್ರಜ್ಞಾಹೀನರಾಗಿ ಬಿದ್ದಿದ್ದನ್ನು ಯಾರ ಗಮನಕ್ಕೂ ಬರಲಿಲ್ಲ. ಸ್ವಲ್ಪ ಸಮಯದ ಬಳಿಕ ಗಮನಿಸಿದ ಸ್ಥಳೀಯರು ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವರನ್ನು ಕೆವಿಜಿ ಆಸ್ಪತ್ರೆಗೆ ಕರೆ ತಂದು ಪ್ರಥಮ ಚಿಕಿತ್ಸೆ ಕೊಡಿಸಿ, ತಲೆಗೆ ಗಂಭೀರವಾಗಿ ಗಾಯಗೊಂಡ ಹಿನ್ನೆಲೆ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದುಬಂದಿದೆ.
