
ಶರೀರೇ ಜರ್ಜರೀ ಭೂತೇ ವ್ಯಾಧಿ ಗ್ರಸ್ಥೆ ಕಳೇಬರೇ ಔಷಧಂ ಜಾಹ್ನವೀಃ ತೋಯಂ, ವೈದ್ಯೋ ನಾರಾಯಣೋ ಹರಿಃ.
ಮನುಷ್ಯನ ದೇಹಕ್ಕೆ ರೋಗವು ತಗಲಿಕೊಂಡು, ಸರ್ವ ಕ್ರಿಯೆಗಳು ನಿಷ್ಕ್ರೀಯವಾಗಿ, ದೇಹವು ಕಳೇಬರದಂತಾದಾಗ ಸ್ವತಃ ನಾರಾಯಣನೇ ವೈದ್ಯನ ರೂಪದಲ್ಲಿ ಬರುತ್ತಾನೆ. ಮತ್ತು ಗಂಗಾಜಲವೇ ಅಮೃತವಾಗುತ್ತದೆ ಎಂಬುದು ಪುರಾತನ ಕಾಲದಿಂದಲೂ ನಾವು ನಂಬಿಕೊಂಡು ಬಂದ ಸಾರ್ವಕಾಲಿನ ಸತ್ಯ.
ವೈದ್ಯ ಮತ್ತು ರೋಗಿಗಳ ಸಂಬಂಧದಲ್ಲಿ ನಂಬಿಕೆ ಎಂಬ ಪದಕ್ಕೆ ಬಹಳ ಅತ್ಯಮೂಲ್ಯವಾದ ಸ್ಥಾನವಿದೆ. ಹೆಚ್ಚಿನ ರೋಗಿಗಳ ಚಿಕಿತ್ಸೆ, ವೈದ್ಯ ರೋಗಿಯ ಸಂಬಂಧ ಮತ್ತು ನಂಬಿಕೆಯ ತಳಹದಿಯ ಮೇಲೆ ನಿಂತಿರುತ್ತದೆ. ಮೊದಲೆಲ್ಲಾ ಊರಿಗೊಬ್ಬರೇ ವೈದ್ಯ. ಆತ ಕೊಟ್ಟಿದ್ದೇ ಮದ್ದು. ಆಗ ಈಗಿನಂತೆ ಹೊಸ ಹೊಸ ಏಬೋಲಾ, ಏಡ್ಸ್, ಹೆಪಟೈಟೀಸ್ ಮುಂತಾದ ಮಾರಣಾಂತಿಕ ಖಾಯಿಲೆಗಳಿರಲಿಲ್ಲ. ಸಕಲ ರೋಗಕ್ಕೂ ಒಬ್ಬನೇ ವೈದ್ಯ. ಒಂದೇ ಮದ್ದು. ಒಂದಷ್ಟು ಕಷಾಯ, ಔಷಧಿ, ಮಾತ್ರೆ. ವೈದ್ಯರು ಆತ್ಮೀಯವಾಗಿ ತಲೆ ಸವರಿ, ಮೈ ತಡವಿ, ನಾಡಿಬಡಿತ ನೋಡಿದಾಗಲೇ ಅರ್ಧ ರೋಗ ವಾಸಿಯಾಗುತ್ತಿತ್ತು. ಕುಟುಂಬ ವೈದ್ಯ ಪದ್ಧತಿ ಭಾರತದಲ್ಲಿ, ಅದೂ ಗ್ರಾಮೀಣ ಪ್ರದೇಶಗಳಲ್ಲಿ ಬಹಳ ಪ್ರಖ್ಯಾತಿ ಪಡೆದಿದೆ. ಈಗಲೂ ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯರೆಂದರೆ ದೇವರು ಎಂಬ ಭಾವನೆ ಉಳಿದಿದೆ ಎಂಬುದಂತೂ ಸತ್ಯ. ಆದರೆ ನಗರ ಪ್ರದೇಶಗಳಲ್ಲಿ ವೈದ್ಯರು ದೇವರಾಗುವುದು ಬಿಡಿ, ಮನುಷ್ಯರೇ ಅಲ್ಲ ಎಂಬ ಸಂಧಿಗ್ಧ ಪರಿಸ್ಥಿತಿಯ ಬಂದೊದಗಿದೆ ಎನ್ನುವುದು ಬಹಳ ನೋವಿನ ಸಂಗತಿ.
ಕಾಲಕ್ರಮೇಣ ಜೀವನಶೈಲಿ, ಆಹಾರ ಪದ್ಧತಿ, ಪಾಶ್ಚಾತ್ತೀಕರಣ, ನಗಾರೀಕರಣ ಮತ್ತು ಅಧುನಿಕತೆ ಬೆಳೆದಂತೆಲ್ಲಾ ಹೊಸ ಹೊಸ ರೋಗಗಳು ರೋಗಿಗಳಲ್ಲಿ ಹುಟ್ಟಿಕೊಂಡಿತು. ವೈದ್ಯರ ಸಂಖ್ಯೆಯೂ ವೃದ್ಧಿಸಿತು. ಒಂದು ರೋಗಕ್ಕೆ ಒಬ್ಬ ವೈದ್ಯ ಎಂಬ ಪರಿಸ್ಥಿತಿ ಬಂದೊದಗುವ ಪ್ರಮೇಯ ಮತ್ತು ಕಾಲಘಟ್ಟದಲ್ಲಿ ನಾವು ಬಂದು ನಿಂತಿದ್ದೇವೆ. ಅದರ ಜೊತೆಗೆ ವೈದ್ಯ ರೋಗಿಯ ಸಂಬಂಧÀವೂ ಬದಲಾಗುತ್ತಾ ಬಂದಿತು. ಎಲ್ಲವೂ ವ್ಯಾಪಾರೀಕರಣವಾಗುತ್ತಿರುವ ಈ ಕಾಲಘಟ್ಟದಲ್ಲಿ ತಂದೆ-ಮಕ್ಕಳ, ಅಣ್ಣ-ತಮ್ಮಂದಿರ ಗಂಡ-ಹೆಂಡಿರ ಸಂಬಂಧಗಳಲ್ಲಿ ಮಾರ್ಪಾಡಾದಂತೆ ವೈದ್ಯರೋಗಿಯ ಸಂಬಂಧವೂ ವ್ಯಾಪಾರೀಕರಣವಾಗಿರುವುದು ಆಶ್ಚರ್ಯವಾದ ಸಂಗತಿಯೇನೂ ಅಲ್ಲ. ಮೊದಲೆಲ್ಲಾ ನಂಬಿಕೆ, ವಿಶ್ವಾಸದ ತಳಹದಿಯ ಮೇಲೆ ನಿಂತಿರುತ್ತಿದ್ದ ಚಿಕಿತ್ಸಾ ಪದ್ಧತಿ, ಈಗ ವ್ಯಾಪಾರೀಕರಣಗೊಂಡ ಸಮಾಜದಲ್ಲಿ ಕೇವಲ ನಂಬಿಕೆ ಮತ್ತು ವಿಶ್ವಾಸ ಎಂಬ ಪದ ಅರ್ಥ ಕಳಕೊಂಡಿದೆ ಎಂಬುದಂತೂ ಸತ್ಯ.
ಏನಿದು ಮಿಥ್ಯಮಾತ್ರೆ ?
ಆಂಗ್ಲಭಾಷೆಯಲ್ಲಿ ಮಿಥ್ಯಮಾತ್ರೆಯನ್ನು ಪ್ಲಾಸೆಬೋ (Placebo) ಎಂದು ಕರೆಯಲಾಗುತ್ತದೆ. ಪ್ಲಾಸಿಯೋ ಎಂಬ ಲ್ಯಾಟಿನ್ ಪದದಿಂದ ಹುಟ್ಟಿಕೊಂಡ ಈ ಶಬ್ದದ ನಿಜವಾದ ಅರ್ಥ “ಸಂತಸಗೊಳಿಸುವುದು” ಹಿಂದಿನ ಕಾಲದಿಂದಲೂ ವೈದ್ಯರು ಕೆಲವೊಮ್ಮೆ ಮಿಥ್ಯಮಾತ್ರೆಯನ್ನು ಬಳಸುತ್ತಿದ್ದಾರೆ. ಕೆಲವೊಮ್ಮೆ ರೋಗಿಗೆ ಯಾವುದೇ ರೀತಿಯ ದೈಹಿಕವಾದ ಖಾಯಿಲೆ ಇಲ್ಲವೆಂದು ವೈದ್ಯರಿಗೆ ಮನವರಿಕೆಯಾದಲ್ಲಿ ಅನಗತ್ಯವಾಗಿ ಔಷಧವನ್ನು ನೀಡುವ ಬದಲು ರೋಗಿಯನ್ನು ಖುಷಿ ಪಡಿಸುವ ಸಲುವಾಗಿ ಮತ್ತು ಮಾನಸಿಕವಾಗಿ ರೋಗಿಗೆ ಔಷಧ ತೆಗೆದುಕೊಳ್ಳುತ್ತಿದ್ದೇನೆ ಎಂಬ ಭಾವನೆ ಬರಿಸಿ ರೋಗವನ್ನು ಗುಣಪಡಿಸಲಾಗುತ್ತಿದೆ ಎಂಬ ಮಾನಸಿಕ ಭಾವನೆ ಬರಿಸುವ ಸಲುವಾಗಿ ಮಿಥ್ಯಮಾಥ್ರೆಯನ್ನು ಬಳಸಲಾಗುತ್ತದೆ. ಸಾಮಾನ್ಯವಾಗಿ ಸಕ್ಕರೆ ಮಿಶ್ರಿತ ಗುಳಿಗೆಗಳು, ನೀರು ತುಂಬಿದ ಬಣ್ಣದ ನೀರಿನ ಇಂಜೆಕ್ಷನ್‍ಗಳು ಮತ್ತು ದೇಹ ದ್ರಾವಣಗಳು ಇತ್ಯಾದಿಗಳನ್ನು ರೋಗಿಯ ಮಾನಸಿಕ ನೆಮ್ಮದಿಯನ್ನು ಹೆಚ್ಚಿಸಲು ಮತ್ತು ಆ ಮೂಲಕ ರೋಗವನ್ನು ಗುಣಪಡಿಸಲು ಬಳಸಲಾಗುತ್ತದೆ. ನಿಜವಾಗಿಯೂ ರೋಗಿ ಅಸ್ತಮಾ, ಜ್ವರ ಮತ್ತು ಇನ್ನಿತರ ತೊಂದರೆಗಳಿಂದ ಬಳಲುತ್ತಿದ್ದಲ್ಲಿ ಮಿಥ್ಯ ಮಾತ್ರೆ ಕೊಡಬಾರದು. ಮತ್ತು ಈ ರೀತಿಯಾಗಿ ಬಳಸುವುದು ನಿಜವಾಗಿ ಅನೈತಿಕ. ಆದರೆ ರೋಗಿಯು ಯಾವುದೆ ರೀತಿಯ ರೋಗಗಳಿಂದ ಬಳಲುತ್ತಿಲ್ಲ ಎಂದು ಮನವರಿಕೆಯಾದಲ್ಲಿ, ಮಾನಸಿಕವಾಗಿ ರೋಗಿ ವೈದ್ಯರ ಮಾತ್ರೆಯ ಮೇಲೆಯೇ ಹೆಚ್ಚು ಅವಲಂಬಿತನಾಗಿದ್ದಾನೆ ಎಂದು ವೈದ್ಯರು ಕೂಲಂಕುಷÀವಾಗಿ ಪರೀಕ್ಷಿಸಿದ ಬಳಿಕವೇ ಈ ರೀತಿಯ ಮಿಥ್ಯಮಾತ್ರೆಯನ್ನು ಬಳಸುತ್ತಾರೆ. ಈ ರೀತಿಯ ಮಿಥ್ಯಮಾತ್ರೆಗಳಿಂದ ಯಾವುದೇ ರೀತಿಯ ಅಡ್ಡ ಪರಿಣಾಮವಿರುವುದಿಲ್ಲ. ಆದರೆ ರೋಗಿ ನಿಜವಾಗಿಯೂ ಯಾವುದಾದರೊಂದು ರೋಗಗಳಿಂದ ಬಳಲುತ್ತಿದ್ದಲ್ಲಿ ಸರಿಯಾಗಿ ಕೂಲಂಕುಷವಾಗಿ ಪರೀಕ್ಷಮಾಡದೇ ಮಿಥ್ಯ ಮಾತ್ರೆ ನೀಡುವುದು ಬಹಳ ಅಪಾಯಕಾರಿ. ಯಾಕೆಂದರೆ ಕೆಲವೊಮ್ಮ ಈ ರೀತಿಯ ಮಿಥ್ಯಮಾತ್ರೆಗಳಿಂದಾಗಿ ರೋಗ ಉಲ್ಭಣಗೊಂಡು ಜೀವಕ್ಕೆ ಕುತ್ತುಬರುವ ಸಾಧ್ಯತೆಯೂ ಇದೆ. ಈ ನಿಟ್ಟಿನಲ್ಲಿ ವೈದ್ಯರ ತಮ್ಮ ಜ್ಞಾನ, ಕುಶಲತೆ ಮತ್ತು ಅನುಭವಗಳಿಂದ ಸರಿಯಾದ ಪರೀಕ್ಷೆಗಳನ್ನು ಸಕಾಲದಲ್ಲಿ ಮಾಡಿಸಿಕೊಂಡು, ರೋಗದ ಲಕ್ಷಣಗಳನ್ನು ಅಭ್ಯಸಿಸಿ ಚಿಕಿತ್ಸೆಯ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು. ಎಲ್ಲಿ, ಯಾವಾಗ, ಯಾವರೀತಿಯ ಔಷಧಿ ಕೊಡಬೇಕು ಮತ್ತು ಕೊಡಬಾರದು ಎಂಬುದನ್ನು ನಿರ್ಣಯಮಾಡುವ ಅಂತಿಮ ಅಧಿಕಾರ ವೈದ್ಯರದ್ದೇ ಆಗಿರುತ್ತದೆ. ರೋಗಿಗಳು ಏನಿದ್ದರೂ ವೈದ್ಯರ ಆದೇಶದಂತೆ ಸೂಕ್ತ ಪ್ರಮಾಣದಲ್ಲಿ ಸೂಚಿಸಿದ ಸಮಯದಲ್ಲಿ ಔಷಧಿ ತೆಗೆದುಕೊಂಡಲ್ಲಿ ರೋಗವನ್ನು ಪರಿಣಾಮಕಾರಿಯಾಗಿ ಗುಣಪಡಿಸಬಹುದು.
ಮಿಥ್ಯೆಮಾತ್ರೆಗಳು ಯಾವಾಗ ಅಗತ್ಯವಿರುತ್ತದೆ
ಮಿಥ್ಯಮಾತ್ರೆ ಎನ್ನುವುದು ನಿಜವಾಗಿಯೂ ವೈದ್ಯಕೀಯ ಲೋಕದ ಔಷಧಿಶಾಸ್ತ್ರದ ಅಚ್ಚರಿ ಎಂದರೂ ತಪ್ಪಲ್ಲ. ನಮ್ಮ ದೇಹದಲ್ಲಿ ಮೆದುಳು ಎನ್ನುವುದು ನರಮಂಡಲದ ಮುಖ್ಯ ಕೇಂದ್ರವಿದ್ದಂತೆ ಮತ್ತು ಮನೋವ್ಯಾಪಾರದ ಬಹುಮುಖ್ಯ ಶಕ್ತಿ ಕೆಂದ್ರ. ಈ ಮೆದುಳಿನಲ್ಲಿ ಭಾವನಾ ಸಾಮಾಜ್ಯವಿದೆ. ಇದರಲ್ಲಿ ಗ್ರಹಿಸುವ ಬುದ್ಧಿ ಮತ್ತು ಮನಸ್ಸು ಎರಡೂ ಅಡಗಿರುತ್ತದೆ. ಭ್ರಮೆಯೂ ಇರುತ್ತದೆ. ವಾಸ್ತವವೂ ಅಡಗಿರುತ್ತದೆ. ಆದರೆ ಒಂದಂತೂ ಸತ್ಯ, ನಮ್ಮ ದೇಹದ ಕ್ರಿಯೆಗೂ ಮನಸ್ಸಿನ ಭಾವನಾ ಪ್ರಪಂಚಕ್ಕೂ ಸಂಬಂಧವಿರುವುದಂತೂ ಖಂಡಿತಾ ಹೌದು. ಕೆಲವೊಮ್ಮೆ ಯಾವುದೇ ಕಾರಣವಿಲ್ಲದೆ ಕೆಲವು ಕಲ್ಪನೆಗಳಿಂದ ಉಂಟಾದ ಭಯ, ನೋವು ಖಿನ್ನತೆಗಳಿಗೆ ಮಿಥ್ಯಮಾತ್ರೆ ನಿಜವಾಗಿಯೂ ಸಹಕಾರಿಯಾಗಬಲ್ಲದು. ಕೆಲವೊಮ್ಮೆ ಜನರ ಅಥವಾ ಕುಟುಂಬಸ್ಥರ ಗಮನ ಪಡೆಯಲು ಅನುಕಂಪ ಗಿಟ್ಟಿಸಲು ಮೈ, ಕೈ ನೋವು, ತಲೆನೋವು, ಹೊಟ್ಟೆನೋವು ಮುಂತಾದ ರೋಗಗಳಿಗೆ ಮಿಥ್ಯಮಾತ್ರೆ ಮತ್ತು ಸಣ್ಣ ಸುಳ್ಳು ರಾಮಬಾಣವಾಗಬಲ್ಲದು. ಸಾವಿನ ಅಂಚಿನಲ್ಲಿ ಮರಣ ಶೈಯೆಯಲ್ಲಿರುವ ವೃದ್ಧನಿಗೆ ಒಂದೆರಡು ವಿಟಮಿನ್‍ಗುಳಿಗೆ ನೀಡಿ ನಾಲ್ಕು ಸಾಂತ್ವನದ ಮಾತನಾಡಿದಾಗ ಆ ವೃದ್ಧನಿಗೆ ಸಿಗುವ ಮಾನಸಿಕ ನೆಮ್ಮದಿ ಮತ್ತು ಸಂತಸ ಇನ್ನೆಲ್ಲೂ ದೊರಕದು. ಮಾನಸಿಕ ಉದ್ವೇಗ ಮತ್ತು ಕೆಲಸದ ಒತ್ತಡದಿಂದ ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವ ವ್ಯಕ್ತಿಗೆ ಸಣ್ಣ ಸುಳ್ಳು ಹೇಳಿ ನೀರು ತುಂಬಿದ ಇಂಜೆಕ್ಷನ್ ನೀಡಿ ನಾಲ್ಕು ಸಾಂತ್ವನದ ಮಾತನಾಡಿ ಬೆನ್ನ ಸವರಿದಾಗ ರೋಗದ ಭ್ರಮೆ ಹೊರಟುಹೋಗಿ ರಕ್ತದೊತ್ತಡ ಕಡಿಮೆಯಾದ ಸಾಕಷ್ಟು ಉದಾಹರಣೆ ನಮ್ಮ ಮುಂದೆ ಇದೆ. ಅದೇ ರೀತಿ ರೋಗವಿಲ್ಲದೆ, ರಕ್ತಹೀನತೆಯ ಕುಂಟುನೆಪ ಹೇಳಿ ಕೆಲಸಗಳ್ಳಿಯಾದ ಹಳ್ಳಿ ಹೆಂಗಸಿಗೆ ಬಣ್ಣದ ನೀರು ಇರುವ ಇಂಜೆಕ್ಷನ್ ನೀಡಿದಾಗ ತಟ್ಟನೆ ಶಕ್ತಿ ಬಂದು ಕುಣಿದು ಕುಪ್ಪಳಿಸಿದ ವಿಚಿತ್ರ ಸತ್ಯವೂ ನಮ್ಮ ಮುಂದಿದೆ ಇವೆಲ್ಲವೂ ಮಿಥ್ಯಮಾತ್ರೆಗಳ ಚಮತ್ಕಾರ ಮತ್ತು ವೈದ್ಯಲೋಕದಲ್ಲಿ ಬಸವಳಿದು ಕೈಚೆಲ್ಲಿ ಕುಳಿತ ವೈದ್ಯರಿಗೆ ದೊರಕಿದ ವರದಾನ ಎಂದರೂ ತಪ್ಪಲ್ಲ.
ವೈದ್ಯ ಲೋಕದ ನಗ್ನಸತ್ಯಗಳು
ಹಿಂದೊಂದು ಮಾತಿತ್ತು, ಅತೀ ಕಡಿಮೆ ಔಷಧಿ ಕೊಡುವ ವೈದ್ಯ ಉತ್ತಮ ವೈದ್ಯ ಎಂದು. (The Best Doctor is the One who gives least Medicine) ಆದರೆ ಈಗಿನ ಬರಾಟೆಯ, ಧಾವಂತದ, ಪೈಪೋಟಿಯ ಮತ್ತು ಅವಸರದ ಜೀವನಶೈಲಿಯಲ್ಲಿ ಪ್ರತಿಯೊಬ್ಬ ರೋಗಿಯೂ ವೈದ್ಯನೇ ಆಗಿರುತ್ತಾನÉ. ಅಂತರ್ಜಾಲದ ಮುಖಾಂತರ ಎಲ್ಲರೂ ಎಲ್ಲವನ್ನೂ ಅರ್ಧಂಬರ್ಧ ತಿಳಿದಿರುತ್ತಾರೆ ಮತ್ತು ತಮಗೆ ತಿಳಿದ ಒಂದಷ್ಟು ವಿಷಯಗಳನ್ನು ಇನ್ನಷ್ಟು ಮಸಾಲೆ ಸೇರಿಸಿ ಎಲ್ಲರ ನಡುವೆ ಸ್ವಯಂ ಘೋಷಿತ ವೈದ್ಯನಾಗಿರುತ್ತಾನೆ. ಜ್ವರ ಬರುವುದರ ಜೊತೆಗೆ ಡೆಂಗ್ಯೂ, ಮಲೇರಿಯಾ, ಟೈಫಾಯಿಡ್, ಹಂದಿಜ್ವರ ಹೀಗೆ ಹಲವಾರು ಸಂದೇಹಗಳು ರೋಗಿಯ ಹೃದಂiÀiದಲ್ಲಿ ಬಧ್ರವಾಗಿ ನೆಲೆಯೂರಿ ವೈದ್ಯರ ಮೇಲೆ ಅನಗತ್ಯ ಒತ್ತಡ ತರುತ್ತಾನೆ. ವೈದ್ಯರಿಗೆ ರೋಗವನ್ನು ಗುಣಪಡಿಸುವ ಜೊತೆಗೆ ರೋಗಿಯ ಅನಗತ್ಯ ಸಂದೇಹ ಮತ್ತ ಸಂಶಯವನ್ನು ದೂರಮಾಡುವ ಗುರುತರ ಹೊಣೆಗಾರಿಕೆ ಇರುತ್ತದೆ. ಮತ್ತೆ ಯಾವ ರೋಗಿಯೂ ತಾಳ್ಮೆ, ಸಂಯಮ ಮತ್ತು ವ್ಯವದಾನದ ವಿಚಾರದಲ್ಲಿ ಬಹಳ ಹಿಂದೆ. ಒಂದೆರಡು ದಿನಗಳಲ್ಲಿ ರೋಗಿಗೆ ರೋಗ ವಾಸಿಯಾಗದಿದ್ದಲ್ಲಿ ವೈದ್ಯರಿಗೆ ಸರ್ಟಿಫೀಕೆಟ್ ನೀಡುವಷ್ಟರ ಮಟ್ಟಿಗೆ ಬೆಳೆದಿರುತ್ತಾರೆ. ಹೀಗಿರುವ ಕಾಲಘಟ್ಟದ್ದಲ್ಲಿ ಯಾವ ವೈದ್ಯರೂ ಜ್ವರಬಂದಾಗ ಒಂದೆರಡು ಪ್ಯಾರಸಿಟಮಲ್ ನೀಡಿ ಕಾಯುವ ಅಥವಾ ರೋಗಿಯನ್ನು ಅಭ್ಯಸಿಸುವ ಕೆಲಸಕ್ಕೆ ಹೋಗಲಾರ. ಅನಗತ್ಯವೆನಿಸಿದರೂ ರೋಗಿಯ ಒತ್ತಡ ಮತ್ತು ಸಂಶಯಗಳಿಗೆ ಕಟ್ಟುಬಿದ್ದು ಎಲ್ಲಾ ರೀತಿ ಪರೀಕ್ಷೆಯನ್ನು ಮಾಡಿಸಲೇಬೇಕು ಎಂಬ ಅನಿವಾರ್ಯತೆಗೆ ಸಿಲುಕುತ್ತಾನೆ. ಹೀಗಿರುವಲ್ಲಿ ವೈದ್ಯರ ಔಷಧಿಗಳ ಪಟ್ಟಿ ಮತ್ತು ಪರೀಕ್ಷೆಗಳ ಪಟ್ಟಿ ಹನುಮಂತನ ಬಾಲದಂತೆ ಬೆಳೆಯುತ್ತಲೇ ಹೋಗುತ್ತದೆ. ಹಾಗಾಗಿ ಈಗ ಒಬ್ಬ ಒಳ್ಳೆಯ ವೈದ್ಯ ಎಂದರೆ ಹಲವಾರು ಪರೀಕ್ಷೆ ಮಾಡಿ ಹಲವಾರು ಔಷಧ ನೀಡಿ ಕ್ಷಣಾರ್ಧದಲ್ಲಿ ಒಂದೆರಡು ದಿನಗಳಲ್ಲಿ ವಾಸಿಮಾಡಿದ್ದಲ್ಲಿ ವೈದ್ಯರು ದೇವರಾಗುತ್ತಾರೆ !! ಹೀಗೆ (The Best Doctor is the One who gives More Medicine) ಎಂದು ಬದಲಾಗಿರುವುದು ಬಹಳ ಸೋಜಿಗದ ಮತ್ತು ವಿಷಾಧದ ಸಂಗತಿ. ಹೀಗಿರುವಾಗ ಮಿಥ್ಯ ಔಷಧಿಗಳು ಬಿಡಿ, ಸತ್ಯ ಔಷಧಿಗಳು ವಿಷವಾಗುವ ಕಾಲಬಂದಿದೆ ಎಂದರೂ ತಪ್ಪಲ್ಲ.
ವೈದ್ಯರೂ ಕೂಡಾ ನಿಮ್ಮಂತೆಯೇ ಒಂದು ಜೀವ. ಅವರಿಗೂ ಅವರದ್ದೇ ಆದ ಇತಿಮಿತಿಗಳು ಇವೆ. ಕ್ಷಣಾರ್ಧದಲ್ಲಿ ಯಾವುದೇ ರೋಗವನ್ನು ಯಾವ ವೈದ್ಯನೂ ಗುಣಪಡಿಸಲಾರ. ನಿಮಗಿರುವ ಅರೆ ಬರೆ ಜ್ಞಾನ ಮತ್ತು ಅಂತರ್ಜಾಲದ ಮಾಹಿತಿಯಿಂದ ವೈದ್ಯರನ್ನು ಗಲಿಬಿಲಿಗೊಳ್ಳಿಸಬೇಡಿ. ರೋಗಿಯನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಮತ್ತು ಅಭ್ಯಸಿಸಲು ಅವರಿಗೂ ಸ್ವಲ್ಪ ಕಾಲವಕಾಶ ನೀಡಿ. ಹುಟ್ಟುತ್ತಲೇ ಯಾರು ವೈದ್ಯರಾಗಿಲ್ಲ. ಆಗುವುದೂ ಇಲ್ಲ. ವೈದ್ಯರು ತಮ್ಮ ಜ್ಞಾನ, ತಿಳುವಳಿಕೆ ಮತ್ತು ಅನುಭವದ ಮುಖಾಂತರ ರೋಗಿಯನ್ನು ಕೂಲಂಕುಷವಾಗಿ ಪರೀಕ್ಷೆಮಾಡಿ ಅಗತ್ಯವಾದ ಪರೀಕ್ಷೆಗಳನ್ನು ಸಕಾಲದಲ್ಲಿ ಮಾಡಿಸಿ ರೋಗದ ಬಗ್ಗೆ ಮತ್ತು ರೋಗದ ಚಿಕಿತ್ಸೆಯ ಬಗ್ಗೆ ನಿರ್ಣಯ ತೆಗೆದುಕೊಳ್ಳುತ್ತಾರೆ ನೆನಪಿರಲಿ, ಯಾವುದೇ ವೈದ್ಯ ರೋಗಿಯ ಹಿತವನ್ನು ಬಯಸುತ್ತಾನೆಯೇ ಹೊರತು ರೋಗಿಯ ಖಾಯಿಲೆ ಉಲ್ಭಣವಾಗಲಿ ಎಂದೂ ಬಯಸಲಾರ. ರೋಗಿಯ ದೇಹದ ಪರಿಸ್ಥಿತಿ ಮತ್ತು ಖಾಯಿಲೆಯ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳುವ ಸಂಪೂರ್ಣ ಅಧಿಕಾರ ಮತ್ತು ಜವಾಬ್ದಾರಿ ನೀವು ವೈದ್ಯರಿಗೆ ನೀಡಿದ್ದಲ್ಲಿ ಖಂಡಿತವಾಗಿಯೂ ರೋಗಿ ಬೇಗ ಗುಣಮುಖವಾಗುವುದರಲ್ಲಿ ಸಂಶಯವೇ ಇಲ್ಲ
.
ಕೊನೆಮಾತು
ರೋಗಿಗಳೇ ನೆನಪಿಡಿ, ರೋಗ ಎನ್ನುವುದು ಮನಸ್ಸಿನ ಕಲ್ಪನೆಯಾಗಿರಬಾರದು. ದೈಹಿಕ ಸ್ಥಿತಿಯಾಗಿರಬೇಕು. ದೇಹಕ್ಕೆ ರೋಗಬಂದಲ್ಲಿ ಗುಣಪಡಿಸಬಹುದು. ಆದರೆ ಮನಸ್ಸಿಗೆ ರೋಗ ಬಂದಿದೆ ಎಂದಾದಲ್ಲಿ, ಚಿಕಿತ್ಸೆಗಿಂತ ಹೆಚ್ಚು ಮನಸ್ಸಿಗೆ ಸಾಂತ್ವನ ಮತ್ತು ಮಾರ್ಗದರ್ಶನದ ಅವಶ್ಯಕತೆ ಇರುತ್ತದೆ. ಇಲ್ಲಿ ಔಷಧಿಯ ಅಗತ್ಯವೇ ಇರುವುದಿಲ್ಲ. ಗುಣಪಡಿಸಲಾಗದ ರೋಗಗಳು ಬಹಳ ಕಡಿಮೆ. ನಿಮ್ಮ ವೈದ್ಯರ ಮೇಲೆ ಸಂಪೂರ್ಣ ವಿಶ್ವಾಸ ಇಡಿ, ನಂಬಿಕೆ ಇಡಿ. ನಿಮ್ಮೆಲ್ಲಾ ತೊಂದರೆಗಲನ್ನು ಮುಕ್ತವಾಗಿ ಹಂಚಿಕೊಳ್ಳಿ. ನಿಮ್ಮ ವಿಶ್ವಾಸಕ್ಕೆ ಎಂದೂ ಧಕ್ಕೆ ಬರಲಿಕ್ಕಿಲ್ಲ. ನೆನಪಿರಲಿ ನಂಬಿಕೆ, ವಿಶ್ವಾಸದ ತಳಹದಿಯ ಮೇಲೆ ವೈಜ್ಞಾನಿಕವಾಗಿ ನೀಡುವ ಔಷಧಿಗಳು ಯಾವತ್ತೂ ವಿಫಲವಾಗುವುದೇ ಇಲ್ಲ. ಹಾಗೆಯೇ ವೈಜ್ಞಾನಿಕವಾದ ತಳಹದಿಯ ಮೆಲೆ ನೀಡುವ ಔಷಧಗಳೂ ನಂಬಿಕೆ, ವಿಶ್ವಾಸದ ಕೊರತೆಯಿಂದ ವಿಫಲವಾಗಲೂಬಹುದು.
ಡಾ|| ಮುರಲೀ ಮೋಹನ್ ಚೂಂತಾರು
