ಪೆರುವಾಜೆ : ಇತಿಹಾಸ ಪ್ರಸಿದ್ಧ ಮಾಗಣೆ ಕ್ಷೇತ್ರ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದಲ್ಲಿ ರವಿವಾರ ರಾತ್ರಿ ಭಕ್ತರು ಶ್ರೀದೇವಿಯ ಶಯನೋತ್ಸವಕ್ಕೆ ಸಮರ್ಪಿಸಿದ ರಾಶಿ ರಾಶಿ ಮಲ್ಲಿಗೆ ಹೂವಿನಲ್ಲಿ ಮಹಾಮಾತೆ ಜಲದುರ್ಗಾದೇವಿ ಪವಡಿಸಿದಳು.!
ಇಂತಹ ಅಪೂರ್ವ ಕ್ಷಣ ಶ್ರೀ ಕ್ಷೇತ್ರ ಸಾಕ್ಷಿಯಾಯಿತು. ಬ್ರಹ್ಮರಥೋತ್ಸವದ ಬಳಿಕ ಜಲದುರ್ಗಾದೇವಿ ಶಯನೋತ್ಸವ ನಡೆಯಲಿದ್ದ ಕಾರಣ ಮಲ್ಲಿಗೆ ಶಯನೋತ್ಸವ ಎಂಬ ವಿಶಿಷ್ಟ ಸೇವೆಗೆ ಭಕ್ತರು ಮಲ್ಲಿಗೆ ಸಮರ್ಪಿಸಲು ಅವಕಾಶ ನೀಡಲಾಯಿತು. ನೂರಾರು ಭಕ್ತರು ಕ್ಷೇತ್ರದ ವಠಾರ ಹಾಗೂ ವಿವಿಧ ಭಾಗದಿಂದ ಮಲ್ಲಿಗೆ ಖರೀದಿಸಿ ಸಮರ್ಪಿಸಿದರು.
ಏನಿದು ಶಯನೋತ್ಸವ
ಶಯನವೆಂದರೆ ಹಾಸಿಗೆ ಎಂದರ್ಥ. ಪೌರಾಣಿಕ ನಂಬಿಕೆಗಳ ಪ್ರಕಾರ ದುರ್ಗಾದೇವಿಯು ಮಲ್ಲಿಗೆ ಪ್ರಿಯಳು ಎಂಬ ಐತಿಹ್ಯವಿದೆ. ಇಷ್ಟಾರ್ಥ ಸಿಧಿಗಾಗಿ ಭಕ್ತರು ಒಂದು ಚೆಂಡು ಮಲ್ಲಿಗೆಯನ್ನು ಶಯನೋತ್ಸವದ ಸಂದರ್ಭದಲ್ಲಿ ಶ್ರೀದೇವಿಗೆ ಸಮರ್ಪಿಸಿದರೆ ತನ್ನ ಮನದಲ್ಲಿರುವ ಅಭೀಷ್ಟ ನೆರವೇರುತ್ತದೆ ಎನ್ನುವ ಪ್ರತೀತಿಯಿದೆ. ಶಯನೋತ್ಸವಕ್ಕೆ ಸಮರ್ಪಿಸಿದ ಮಲ್ಲಿಗೆ ಹೂವಿನಲ್ಲಿ ಶ್ರೀದೇವಿಯು ಪವಡಿಸುತ್ತಾಳೆ ಎಂಬುವುದು ಭಕ್ತರ ನಂಬಿಕೆ.