
ಕರ್ನಾಟಕ ರಾಜ್ಯದ ಪಶ್ಚಿಮ ಘಟ್ಟಕ್ಕೂ, ಜನವಸತಿ ಪ್ರದೇಶಕ್ಕೂ, ಕೃಷಿ ಭೂಮಿಗೂ ಗಡಿ ಗುರುತು ಮತ್ತು ಅರಣ್ಯ ಇಲಾಖೆ, ಕಂದಾಯ ಇಲಾಖೆ ಜಂಟಿ ಸರ್ವೆ ಮಾಡುವ ಕುರಿತಾಗಿ ಆಗ್ರಹಿಸಿ ಸುಳ್ಯ ತಾಲೂಕಿನ ಸುಳ್ಯ ಮತ್ತು ಪಂಜ ಹೋಬಳಿಯ ಅರಣ್ಯ ಕಛೇರಿ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಮಲೆನಾಡು ಜನ ಹಿತ ರಕ್ಷಣಾ ವೇದಿಕೆ ಸಂಚಾಲಕರಾದ ಚಂದ್ರಶೇಖರ ಬಾಳುಗೋಡು ಹೇಳಿದರು.
ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಜನಪ್ರತಿನಿಧಿಗಳು ಮತ್ತು ಅಧಿಕಾರಿ ವರ್ಗವು ಕೃಷಿಕರ ಹಿತ ಕಾಪಾಡುವ ಸಲುವಾಗಿ ಕಸ್ತೂರಿ ರಂಗನ್ ವರದಿಯನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಂಪೂರ್ಣ ಕೈಬಿಡಬೇಕು. ಅಲ್ಲದೇ ಆನೆ ದಾಳಿ, ಇತರೆ ಕಾಡು ಪ್ರಾಣಿಗಳಿಂದ ಕೃಷಿ ನಾಶವಾಗದಂತೆ ಅರಣ್ಯ ಇಲಾಖೆ ನಿಗಾ ವಹಿಸಬೇಕು ಹಾಗೂ ಪ್ಲಾಟಿಂಗ್ ಆಗದ ಹಕ್ಕುಪತ್ರಗಳಿಗೆ ಅಥವಾ ಸರ್ವೆ ನಂಬ್ರಗಳಿಗೆ ತಕ್ಷಣ ಪ್ಲಾಟಿಂಗ್ ಆಗುವ ರೀತಿಯಲ್ಲಿ ಅನುಮತಿ ನೀಡಬೇಕು, ರೈತದ ಸ್ವಾಧೀನ ಇರುವ ಕೃಷಿ ಭೂಮಿಗೆ ಹಕ್ಕುಪತ್ರ ನೀಡಲು ಅನುಮತಿ ನೀಡಬೇಕು, ಆರಣ್ಯದಡಿಯಲ್ಲಿ ಸೇರಿಸಿರುವ ಕಂದಾಯ ಸರ್ವೆ ನಂಬ್ರಗಳನ್ನು ಪುನರ್ ಪರಿಶೀಲನೆ ಮಾಡಿ ಅದನ್ನು ಕಂದಾಯ ಭೂಮಿ ಎಂದು ಪರಿಗಣಿಸಬೇಕು , ಪಶ್ಚಿಮ ಘಟ್ಟ ಮತ್ತು ಜನವಸತಿ ಪ್ರದೇಶಕ್ಕೆ ಗಡಿಗುರುತು ಆಗಬೇಕು,ಕಂದಾಯ ಮತ್ತು ಅರಣ್ಯ ಇಲಾಖೆಯಿಂದ ಜಂಟಿ ಸರ್ವೆ ನಡೆಯಬೇಕು ,ರೈತರಿಗೆ ಕೋವಿ ಪರವಾನಿಗೆ ನೀಡಬೇಕು. ಪಶ್ಚಿಮ ಘಟ್ಟಕ್ಕೆ ಸಂಬಂಧಪಟ್ಟಂತೆ ಪರಿಸರ ಸಂರಕ್ಷಣೆಯ ತಜ್ಞರ ವರದಿ ತಯಾರಿಸುವಾಗ ಪಶ್ಚಿಮ ಘಟ್ಟ ಪ್ರದೇಶದ ಗ್ರಾಮ ಪಂಚಾಯತುಗಳಲ್ಲಿ ವ್ಯಾಪಕ ಪ್ರಚಾರ ನಡೆಸಿ ವಿಶೇಷ ಗ್ರಾಮ ಸಭೆ ಕರೆದು ಗ್ರಾಮಸ್ಥರ ಅಭಿಪ್ರಾಯವನ್ನು ಸಂಗ್ರಹಿಸಬೇಕು ಎಂದು ಪ್ರಮುಖ ಬೇಡಿಕೆಗಳನ್ನು ಮುಂದಿಡುತ್ತಿದ್ದು ಇದನ್ನು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ನಡೆಸಬೇಕು ಎಂದು ಹೇಳಿದರು . ಅಲ್ಲದೇ ಅಧಿಕಾರಿಗಳನ್ನು ಎಚ್ಚರಿಸುವ ಸಲುವಾಗಿ ಜ. 15 ರಂದು ಸುಳ್ಯ ತಾಲೂಕಿನ ಪಂಜ ಹೋಬಳಿಯ ಅರಣ್ಯ ಅಧಿಕಾರಿಗಳ ಕಛೇರಿ ಮುಂಭಾಗದಲ್ಲಿ ಮತ್ತು ಜ.18 ರಂದು ಸುಳ್ಯ ಹೋಬಳಿಯ ಸುಳ್ಯ ಅರಣ್ಯಾಧಿಕಾರಿಗಳ ಕಛೇರಿ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಹರಿಪ್ರಸಾದ್ ಪಾನತ್ತಿಲ , ರಾಜೇಶ್ ಭಟ್ ನೆಕ್ಕಿಲ , ತೀರ್ಥರಾಮ ನೆಡ್ಚಿಲ್ , ಎ.ಜಿ ಕರುಣಾಕರ ಉಪಸ್ಥಿತರಿದ್ದರು .
