ಸದಾ ಹಚ್ಚಹಸಿರಿನಿಂದ ಕಂಗೊಳಿಸುವ ದಟ್ಟ ಕಾನನದ ಮಧ್ಯೆಯಿರುವ ಪುಟ್ಟದಾದೊಂದು ಊರು.ಸುತ್ತಲೂ ಬೆಟ್ಟಗುಡ್ಡಗಳು ಅದರ ಮಧ್ಯೆ ಮೂರು ಸಣ್ಣ ಹೊಳೆಗಳು ಹರಿದು ಒಟ್ಟು ಸೇರಿ ಒಂದು ದೊಡ್ಡಹೊಳೆಯಾಗಿ ಹರಿದು ಪಯಸ್ವಿನಿ ನದಿ ಸೇರುತ್ತದೆ. ಹೊಳೆಸುತ್ತಲೂ ಅಡಿಕೆ ತೋಟಗಳು ಮತ್ತು ಹತ್ತಾರು ಮನೆಗಳು ಅದರ ಮಧ್ಯೆ ಕಂಗೊಳಿಸುವ ಭವ್ಯವಾದ ಮಸೀದಿ ಮತ್ತು ಮದ್ರಸಗಳು.ಸರಿಯಾದ ಮೂಲತ ಸೌಕರ್ಯವಿಲ್ಲದಿದ್ದರೂ ಅದನ್ನೇ ಸವಾಲಾಗಿ ಸ್ವೀಕರಿಸಿ ಮುನ್ನಡೆಯುವ ಸಾಹಸಮಯಿ ಜನರು.ಧಾರ್ಮಿಕ ಶಿಕ್ಷಣ ಮತ್ತು ಅಹ್ಲುಸುನ್ನತ್ ವಲ್ ಜಮಾಅತ್‌ನ ಆಶಯಾದರ್ಶಗಳ ಪಾಲನೆಯಲ್ಲಿ ಮುಂಚೂಣಿಯಲ್ಲಿರುವ ಈ ಸುಂದರ ಊರಿನ ಹೆಸರೇ ಪೈಂಬೆಚ್ಚಾಲ್ . ಈ ಪೈಂಬೆಚ್ಚಾಲ್ ಎಂಬ ಹೆಸರು ಇಂದು ಪ್ರತಿವರ್ಷ ಇಲ್ಲಿ ನಡೆಯುವ ಅಜ್ಮೀರ್ ಆಂಡ್ ನೇರ್ಚೆ ಯಿಂದಾಗಿ ಸುದ್ದಿಯಾಗುತ್ತಿದೆ.
.ಕಳೆದ ಒಂಬತ್ತು ವರ್ಷಗಳಿಂದ ಆಚರಿಸಿಕೊಂಡು ಬರುತ್ತಿರುವ ಬೃಹತ್ ಅಜ್ಮೀರ್ ಆಂಡ್ ನೇರ್ಚೆಯು ಈ ವರ್ಷ ದಶಮಾನೋತ್ಸವ ವನ್ನು ಆಚರಿಸುತ್ತಿದೆ.
ಪ್ರತಿವರ್ಷ ಬಹಳ ಅದ್ದೂರಿಯಾಗಿ ನಡೆಸಲ್ಪಡುವ ಕಾರ್ಯಕ್ರಮದಲ್ಲಿ ಪ್ರಸಿದ್ಧ ವಾಗ್ಮಿಗಳು, ಉಲಮಾಗಳು ಗಣ್ಯರು ಹಾಗೂ ಸಾವಿರಾರು ಜನರು ಭಾಗವಹಿಸುತ್ತಾರೆ.
ಇಷ್ಟೊಂದು ಅದ್ದೂರಿಯಾಗಿ ನಡೆಸಲ್ಪಡುವ ಕಾರ್ಯಕ್ರಮದ ಹಿಂದಿರುವ ರೂವಾರಿಯೇ ನಾಸಿರ್ ಸುಖೈಫಿ ಉಸ್ತಾದರು .ಕಳೆದ ಹತ್ತು ವರ್ಷಗಳ ಹಿಂದೆ ಪೈಂಬೆಚಾಲು ಬದ್ರಿಯಾ ಜುಮಾ ಮಸೀದಿಗೆ ಖತೀಬರಾಗಿ ಬಂದ ಉಸ್ತಾದರು ಅಜ್ಮೀರ್ ಖಾಜಾ ತಂಙಳರ ಮೇಲೆ ಅಗಾಧ ವಿಶ್ವಾಸವಿರಿಸುವ ವ್ಯಕ್ತಿ.ಕಳೆದ ಹತ್ತು ವರ್ಷಗಳಿಂದ ಖಾಜಾ ತಂಙಳರ ಕಾರ್ಯಕ್ರಮವನ್ನು ಬಹಳ ಅಚ್ಚುಕಟ್ಟಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಕಾರ್ಯಕ್ರಮದ ರೂಪುರೇಶೆಗಳನ್ನು ಸಿದ್ಧಪಡಿಸುವುದು, ಗಣ್ಯಾತಿಗಣ್ಯರನ್ನು ಕರತರುವುದು,ಅದಕ್ಕಾಗಿ ವೇದಿಕೆ ಸಜ್ಜುಗೊಳಿಸುವುದು,ಊಟದ ವ್ಯವಸ್ಥೆ ಮುಂತಾದವುಗಳೆಲ್ಲದರಲ್ಲೂ ಅವರದ್ದು ಏಕಾಂಗಿ ಹೋರಾಟ.ಎಲ್ಲವೂ ಬಹಳ ಸುಸೂತ್ರವಾಗಿ ನಡೆಯುತ್ತದೆ. ಇದೆಲ್ಲವೂ ಹೇಗೆ ಸಾದಿಸುತ್ತದೆಂದು ಅವರನ್ನು ಕೇಳಿದರೆ ಅವರು ನೀಡುವ ಉತ್ತರ; ಇದರಲ್ಲಿ ನನ್ನದೇನೂ ಪಾತ್ರ ಇಲ್ಲ,ಎಲ್ಲವೂ ಖಾಜಾ ತಂಙಳರೇ ನಡೆಸಿ ಕೊಡುತ್ತಾರೆ ಎಂದು ಹೇಳುತ್ತಾರೆ.
ಸುಖೈಫಿ ಉಸ್ತಾದರು ಯಾವುದೇ ಕಾರ್ಯಗಳನ್ನು ಕೈಗೆತ್ತಿಕೊಳ್ಳುವಾಗ ಮೊದಲು ಖಾಜಾ ತಂಙಳರ ಮೇಲೆ ಒಂದು ಫಾತಿಹಾ ಓದಿಯೇ ಆರಂಭಿಸುವುದು. ಖಾಜಾ ತಂಙಳರ ಮೇಲೆ ತವಸ್ಸುಲ್ ಮಾಡಿದ ಯಾವುದೇ ಕಾರ್ಯಗಳು ನಡೆಯದ ಚರಿತ್ರೆಯಿಲ್ಲ. ಉಸ್ತಾದರು ಹೇಳುವ ಪ್ರಕಾರ ಖಾಜಾ ತಂಙಳರ ಕಾರ್ಯಕ್ರಮಕ್ಕೆ ಅಂತ ಸಹಾಯಾಭ್ಯರ್ತನೆ ಮಾಡಿದರೆ ಯಾರೂ ಇಲ್ಲ ಎಂದು ಹೇಳುವುದಿಲ್ಲ. ಸಹಾಯ ಮಾಡಿದವರಿಗೂ ಅವರ ಉದ್ದೇಶಗಳು ಈಡೇರಿದ ಅನೇಕ ಉದಾಹರಣೆಗಳಿವೆ.
ಪ್ರತಿವರ್ಷವೂ ಕಾರ್ಯಕ್ರಮ ಆಯೋಜಿಸುವಾಗ ಉಸ್ತಾದರು ಪೈಂಬೆಚ್ಚಾಲು ಮಸೀದಿ,ಮದರಸ ಪರಿಸರದ ಅಭಿವೃದ್ಧಿಗಾಗಿ ಯಾವುದಾದರೊಂದು ಗುರಿ ಉದ್ದೇಶವನ್ನು ಇಟ್ಟುಕೊಂಡಿರುತ್ತಾರೆ.ಅದಕ್ಕೆ ಬೇಕಾದ ಕಾರ್ಯಯೋಜನೆಯನ್ನು ಹಮ್ಮಿಕೊಳ್ಳುತ್ತಾರೆ.ಅದರಂತೆ ಆರಂಭದಲ್ಲಿ ಮಸೀದಿಯ ಮೇಲ್ಗಡೆ ರಸ್ತೆಯಿಂದ ಮಸೀದಿಗೆ ಇಳಿದು ಬರುವ ಸ್ಥಳದಲ್ಲಿ ಕಾಂಕ್ರೀಟಿನಿಂದ ಸುಂದರವಾದ ಮೆಟ್ಟಿಲುಗಳನ್ನು ನಿರ್ಮಿಸಲಾಯಿತು.ತದನಂತರದ ವರ್ಷದಲ್ಲಿ ಮಸೀದಿಗೆ ಸಂಪೂರ್ಣವಾಗಿ ಪೈಂಟಿಂಗ್ ಮಾಡಿಸಲಾಯಿತು. ಜೀರ್ಣಾವಸ್ಥೆಯಲ್ಲಿದ್ದ ಮದರಸ ಪುನರ್ನಿರ್ಮಾಣಕ್ಕೆ ಯೋಜನೆ ಹಾಕಲಾಯಿತು. ಪೇರೋಡ್ ಉಸ್ತಾದರನ್ನು ಕರೆತಂದು ಹೊಸ ಮದರಸ ನಿರ್ಮಾಣಕ್ಕೆ ಮುನ್ನುಡಿ ಹಾಕಲಾಯಿತು. ಖುರ್ರತುಸ್ಸಾದಾತ್ ಕೂರತ್ ತಂಙಳ್‌ರ ಮೂಲಕ ಮದರಸಕ್ಕೆ ಶಿಲಾನ್ಯಾಸ ನೆರವೇರಿಸಲಾಯಿತು. ನಂತರದ ವರ್ಷಗಳಲ್ಲಿ ಅಜ್ಮೀರ್ ಮೌಲಿದ್ ಕಾರ್ಯಕ್ರಮದ ವೇದಿಕೆಗಳಲ್ಲಿ ಫಂಡಿಂಗ್‌ಗಳನ್ನು ನಡೆಸಿ ಭವ್ಯವಾದ ಮದರಸ ನಿರ್ಮಾಣವಾಗುವಲ್ಲಿ ಪ್ರಮುಖ ಪಾತ್ರ ವಹಿಸುವಂತಾಯಿತು.ಕಳೆದ ವರ್ಷದ ಕಾರ್ಯಕ್ರಮದಲ್ಲಿ ಮುತ್ತನ್ನೂರು ತಂಙಳರನ್ನು ಕರೆತಂದು ಧನಸಂಗ್ರಹ ಮಾಡಿಸಿ ಮದರಸಕ್ಕೆ ಬೇಕಾದ ಪೀಠೋಪಕರಣಗಳನ್ನು ಖರೀದಿಸಲಾಯಿತು.ಕಳೆದ ಒಂಬತ್ತು ವರ್ಷದ ಕಾರ್ಯಕ್ರಮಗಳಲ್ಲಿ ಕೇವಲ ಒಂದು ವರ್ಷವನ್ನು ಬಿಟ್ಟು ಉಳಿದೆಲ್ಲಾ ವರ್ಷಗಳಲ್ಲಿ ಖುರ್ರತುಸ್ಸಾದಾತ್ ಕೂರತ್ ತಂಙಳರ ಸಾನಿಧ್ಯ ಮತ್ತು ದುಆ ವು ಕಾರ್ಯಕ್ರಮದ ಯಶಸ್ಸಿಗೆ ಬಹುಮುಖ್ಯ ಕಾರಣವಾಯಿತೆಂದರೆ ತಪ್ಪಾಗಲಾರದು.
ಅಜ್ಮೀರ್ ಖಾಜಾ ತಂಙಳರ ಕಾರ್ಯಕ್ರಮಗಳು ಯಾವುದೇ ಅಡೆತಡೆ ಇಲ್ಲದೆ ನಡೆದಿರುವುದಕ್ಕೆ ಮತ್ತೊಂದು ಉದಾಹರಣೆ ಕೋವಿಡ್ ಕಾಲದ ಅಜ್ಮೀರ್ ಆಂಡ್. ನಾಡಿನೆಲ್ಲೆಡೆ ಕೊರೋನಾ ಅಬ್ಬರಿಸಿ ಯಾವುದೇ ಕಾರ್ಯಕ್ರಮಗಳು ನಡೆಯದ ಹೊತ್ತಿನಲ್ಲಿ ಅಜ್ಮೀರ್ ಮೌಲಿದ್‌ಗೆ ಅನುಮತಿ ಲಭಿಸಿ ಪ್ರತಿವರ್ಷದಂತೆ ಕೋವಿಡ್ ಸಮಯದ ಎರಡೂ ವರ್ಷದ ಕಾರ್ಯಕ್ರಮಗಳು ಬಹಳ ಸುಗಮವಾಗಿ ನೆರವೇರಿದ್ದು ವಿಶೇಷವಾಗಿತ್ತು.
ಸರಿಯಾದ ರಸ್ತೆಯಿಲ್ಲದ, ನೆಟ್ವರ್ಕ್ ಇಲ್ಲದ ಊರಲ್ಲಿ ದೊಡ್ಡಮಟ್ಟದ ಕಾರ್ಯಕ್ರಮಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ.ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಳ ಬಾಯಲ್ಲಿ ರಸ್ತೆಯ ದುರವಸ್ಥೆಯದ್ದೇ ಮಾತು.ಪ್ರತಿ ಕಾರ್ಯಕ್ರಮದಲ್ಲೂ ರಸ್ತೆ ಸರಿಯಾಗಲಿ ಎಂಬ ಪ್ರಾರ್ಥನೆ .ಆ ಪ್ರಾರ್ಥನೆಯ ಫಲವೆಂಬಂತೆ ಹಂತಹಂತವಾಗಿ ರಸ್ತೆ ಕಾಂಕ್ರೀಟೀಕರಣಗೊಂಡು ಖಾಜಾ ತಂಙಳರ ಆಂಡ್ ನೇರ್ಚೆಯ ಹತ್ತನೇ ವರ್ಷಾಚರಣೆಯ ಹೊತ್ತಿಗೆ ಪೂರ್ತಿ ಕಾಂಕ್ರಿಟೀಕರಣಗೊಂಡು ಸುಸಜ್ಜಿತವಾದ ರಸ್ತೆ ನಿರ್ಮಾಣವಾಗಿದೆ.
ಹತ್ತನೇ ವಾರ್ಷಿಕೋತ್ಸವವು ಈ ವರ್ಷ ಬಹಳ ವಿಜೃಂಭಣೆಯಿಂದ ನಡೆಯಲಿದೆ. ಹತ್ತನೇ ವರ್ಷಕ್ಕೆ ವಿಶೇಷವಾಗಿ ಬಡ ಅನಾಥ ಹೆಣ್ಣುಮಕ್ಕಳ ಸಾಮೂಹಿಕ ವಿವಾಹ ಸೇರಿ ಹತ್ತು ಅಂಶಗಳ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. 2025 ರ ಜನವರಿ ಎರಡರಿಂದ ಜನವರಿ ಹನ್ನೆರಡರವರೆಗೆ ಬೇರೆ ಬೇರೆ ಕಾರ್ಯಕ್ರಮಗಳು ನಡೆಯಲಿದ್ದು ಮದನೀಯಂ ಮಜ್ಲಿಸ್ ಸೇರಿದಂತೆ ಅನೇಕ ಉಲಮಾಗಳು ಸಯ್ಯಿದರುಗಳು ಭಾವಹಿಸಲಿದ್ದಾರೆ.ಖಾಜಾ ತಂಙಳರ ಬರಕತ್ತಿನಿಂದ ಈ ಹತ್ತು ದಿನಗಳ ಕಾರ್ಯಕ್ರಮಗಳು ಸುಸೂತ್ರವಾಗಿ ನಡೆಯಲಿ ಹಾಗೂ ಅದಕ್ಕೆ ಅಲ್ಲಾಹು ತೌಫೀಕ್ ನೀಡಲಿ.
ಈ ತನಕದ ಎಲ್ಲಾ ಅಜ್ಮೀರ್ ಆಂಡ್ ನೇರ್ಚೆ ಕಾರ್ಯಕ್ರಮಕ್ಕೆ ಉದಾರ ಮನಸ್ಸಿನಿಂದ ಸಹಕರಿಸಿದ ಎಲ್ಲರ ಸದುದ್ದೇಶಗಳು ಖಾಜಾ ತಂಙಳರ ಬರಕತ್ತಿನಿಂದ ಈಡೇರಲಿ ಹಾಗೂ ಕಾರ್ಯಕ್ರಮವು ಯಾಶಸ್ವಿಯಾಗಿ ನಡೆಯಲೆಂಬ ಹಾರೈಕೆಯೊಂದಿಗೆ.
🖊️ರವೂಫ್ ಪೈಂಬೆಚ್ಚಾಲ್