ಸುಬ್ರಹ್ಮಣ್ಯ ಜ.02: ರಾಜ್ಯದ ಪ್ರಸಿದ್ಧ ಪುಣ್ಯಕ್ಷೇತ್ರ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಿರುಷಷ್ಠಿ ಮಹೋತ್ಸವದ ಅಂಗವಾಗಿ ಗುರುವಾರ ಆರಂಭಗೊಂಡ ಸಾಂಸ್ಕೃತಿಕ ಕಾರ್ಯಕ್ರಮನ್ನು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಕು| ಭಾಗೀರಥಿ ಮುರುಳ್ಯ ರವರು ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಪ್ರಮುಖರಾದ ಜುಬಿನ್ ಮೊಹಾಪಾತ್ರ, ಲಕ್ಷ್ಮೀಶ ಗಬ್ಲಡ್ಕ, ಮಲ್ಲಿಕಾ ಪಕ್ಕಳ, ಅರವಿಂದ ಅಯ್ಯಪ್ಪ ಸುತಗುಂಡಿ ಉಪಸ್ಥಿತರಿದ್ದರು.
“ದೇಶದ ಕಲಾ ಸಂಸ್ಕೃತಿ ಔನತ್ಯಕ್ಕೆ ಕುಕ್ಕೆ ದೇವಳದಿಂದ ನಿರಂತರ ಪ್ರೋತ್ಸಾಹ” : ಕಿರುಷಷ್ಠಿ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಶಾಸಕಿ ಭಾಗೀರಥಿ ಮುರುಳ್ಯ ಅಭಿಮತ
“ದೇಶದ ಕಲಾ ಸಂಸ್ಕೃತಿಯ ಔನತ್ಯಕ್ಕೆ ಕುಕ್ಕೆ ದೇವಳದಿಂದ ಅನವರತ ಪ್ರೋತ್ಸಾಹ ದೊರಕುತ್ತಿದೆ. ಅನೇಕ ವರ್ಷಗಳಿಂದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಕಿರುಷಷ್ಠಿ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರಸಿದ್ದ ಕಲಾವಿದರಿಗೆ ವೇದಿಕೆ ಒದಗಿಸಿದೆ. ಗ್ರಾಮೀಣ ಕಲಾಸಕ್ತರಿಗೆ ಕಲೆಯ ಆಸ್ವಾದಕ್ಕೆ ದೇವಳದ ವತಿಯಿಂದ ವಿಶೇಷ ಅವಕಾಶ ಒದಗಿಸಲಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳು ನಮ್ಮ ಸಂಸ್ಕೃತಿಯ ಪ್ರತೀಕವಾಗಿದೆ.ಭಾರತೀಯ ಕಲಾ ಪ್ರಕಾರಗಳತ್ತ ಆಧುನಿಕ ಜನತೆ ಹೆಚ್ಚು ಆಕರ್ಷಿತರಾಗಬೇಕು” ಎಂದು ಹೇಳಿದ ಅವರು “ಮನಸ್ಸನ್ನು ಅರಳಿಸುವ ದೇಶಿಯ ಕಲಾ ಪ್ರಕಾರಗಳು ಸುಸಂಸ್ಕೃತ ಸಮಾಜ ನಿರ್ಮಾಣದಲ್ಲಿ ತನ್ನದೇ ಆದ ಪಾತ್ರವನ್ನು ಹೊಂದಿದೆ. ಭಾರತೀಯ ಕಲೆಯು ದೈವೀ ಭಾವನೆಗಳೊಂದಿಗೆ ಶಾಂತಿ ಮತ್ತು ಮಾನಸಿಕ ನೆಮ್ಮದಿಯನ್ನು ನೀಡುತ್ತದೆ” ಎಂದರು.
“ಅಂತರಂಗದಲ್ಲಿ ಭಗವಂತನನ್ನು ಕಾಣಿರಿ”
“ಸುಬ್ರಹ್ಮಣ್ಯನು ಜ್ಞಾನದ ಅಧಿಪತಿ, ಸಂಗೀತ ಮತ್ತು ಕಲಾಪ್ರೀಯ. ಆಲಯಗಳಿಗೆ ನಾವುಗಳು ಹೃದಯಾಂತರಾಳದ ಭಕ್ತಿಯಿಂದ ಹೋಗಬೇಕು. ಸರ್ವರೂ ಭಗವಂತನಿಗೆ ಶರಣಾಗುವ ದೃಷ್ಟಿಯಿಂದ ದೇವಾಲಯಗಳಿಗೆ ಆಗಮಿಸಬೇಕು. ಅಂತರಂಗದಲ್ಲಿ ಭಗವಂತನನ್ನು ಕಾಣುವುದೇ ಧರ್ಮ. ಸಮಾಜವನ್ನು ಪೋಷಿಸುವುದು ಧರ್ಮ” ಎಂದು ಧಾರ್ಮಿಕ ಉಪನ್ಯಾಸ ನೀಡಿದ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಹಾಗೂ ವಾಗಿ ಲಕ್ಷ್ಮೀಶ ಗಬಲಡ್ಕ ಹೇಳಿದರು.
“ಕಲಾಪ್ರೀಯ ಸುಬ್ರಹ್ಮಣ್ಯ” : ಎಸಿ ಜುಬಿನ್ ಮೊಹಾಪಾತ್ರ
“ಸುಬ್ರಹ್ಮಣ್ಯ ದೇವರು ಕಲಾಪ್ರೀಯರು. ಕಿರುಷಷ್ಠಿಗೆ ಕಲಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ಶ್ರೀ ದೇವರನ್ನು ಆರಾಧನೆ ಮಾಡುತ್ತೇವೆ. ಸರ್ವರ ಸಹಕಾರದಿಂದ ಚಂಪಾಷಷ್ಠಿ ಮಹೋತ್ಸವ ಭಕ್ತಿಪೂರ್ವಕವಾಗಿ ಯಶಸ್ವಿಯಾಗಿದೆ. ಅದೇ ರೀತಿ ಕಿರುಷಷ್ಠಿ ಕಾರ್ಯಕ್ರಮಗಳು ಯಶಸ್ಸಾಗಲು ಸರ್ವರ ಸಹಕಾರ ಬೇಕು. ಮನಸ್ಸಿಗೆ ಆನಂದ ಮತ್ತು ಸಂತೋಷವನ್ನು ಕಲಾ ಪ್ರಕಾರಗಳನ್ನು ಸರ್ವರೂ ಬಂದು ಆಸ್ವಾಧಿಸಬೇಕು. ಪ್ರಖ್ಯಾತ ಕಲಾವಿದರು ಪ್ರತಿಭೆ ತೋರ್ಪಡಿಸಿದ ಈ ವೇದಿಕೆಯಲ್ಲಿ ಈ ವರ್ಷವೂ ಶ್ರೇಷ್ಠ ಕಲಾವಿದರು ಪ್ರತಿಭೆ ಸಾಧರಪಡಿಸಲಿದ್ದಾರೆ. ಸರ್ವರೂ ಸಹಕಾರ ನೀಡಿ ಕಾರ್ಯಕ್ರಮ ವನ್ನು ಯಶಸ್ವಿಗೊಳಿಸಬೇಕು” ಎಂದು ದೇವಳದ ಆಡಳಿತಾಧಿಕಾರಿ ಮತ್ತು ಪುತ್ತೂರು ಉಪವಿಭಾಗದ ಹಿರಿಯ ಸಹಾಯಕ ಆಯುಕ್ತ ಜುಬಿನ್ ಮೊಹಾಪಾತ್ರ ಹೇಳಿದರು.
ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪ್ರಶಾಂತ್ ಪಾಕ್ಕಳ, ಸುಬ್ರಹ್ಮಣ್ಯ ಗ್ರಾ.ಪಂ ಅಧ್ಯಕ್ಷೆ ಸುಜಾತಾ ಕಲ್ಲಾಜೆ ಮುಖ್ಯ ಅತಿಥಿಗಳಾಗಿದ್ದರು.
ಶ್ರೀ ದೇವಳದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಮಾಸ್ಟರ್ ಪ್ಲಾನ್ ಮೇಲುಸ್ತುವಾರಿ ಸಮಿತಿ ಸ್ಥಳೀಯ ಸದಸ್ಯರಾದ ಸತೀಶ್ ಕೂಜುಗೋಡು, ಅಚ್ಚುತ್ತ ಗೌಡ ಬಳ್ಪ ವೇದಿಕೆಯಲ್ಲಿದ್ದರು.
ಕ್ಷೇತ್ರ ಪುರೋಹಿತ ಮಧುಸೂದನ ಕಲ್ಲೂರಾಯ ಮತ್ತು ಪುರೋಹಿತ ಕುಮಾರ ಭಟ್ ವೇದಘೋಷ ಮಾಡಿದರು.
ಶ್ರೀ ದೇವಳದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಸ್ವಾಗತಿಸಿದರು. ಅಭಿಯಂತರ ಉದಯ ಕುಮಾರ್ ವಂದಿಸಿದರು. ಉಪನ್ಯಾಸಕ ರತ್ನಾಕರ ಸುಬ್ರಹ್ಮಣ್ಯ ಕಾರ್ಯಕ್ರಮ ನಿರೂಪಿಸಿದರು.
ಇಂದು ಕುಕ್ಕೆಯಲ್ಲಿ:
ಜ.3ರಂದು ಶುಕ್ರವಾರ(ಇಂದು) ನಟರಾಜ್ ಎಂಟರ್ ಟ್ರೈನರ್ಸ್ ಆಶ್ರಯದಲ್ಲಿ ಖ್ಯಾತ ಚಲನಚಿತ್ರ ಹಿನ್ನೆಲೆ ಗಾಯಕ ರಾಜೇಶ್ ಕೃಷ್ಣನ್ ಅವರಿಂದ ಸಂಗೀತ ಸಂಜೆ ರಾತ್ರಿ 07 ರಿಂದ 10 ರ ತನಕ ನಡೆಯಲಿದೆ. ಈ ಮೊದಲು ಸಂಜೆ 5 ರಿಂದ ನಿನಾದ ಸಾಂಸ್ಕೃತಿಕ ಕೇಂದ್ರ ತಂಟೆಪ್ಪಾಡಿ ಇವರಿಂದ ನೃತ್ಯ ಸಂಭ್ರಮ, ಬಳಿಕ ಮೂಡಬಿದಿರೆಯ ಶ್ರೀ ಆರಾಧನಾ ನೃತ್ಯ ಕೇಂದ್ರದ ಗುರು ವಿದುಷಿ ಸುಖದಾ ಬರ್ವೆ ಇವರ ಶಿಷ್ಯರಿಂದ ನೃತ್ಯ ಸಿಂಚನ ನೆರವೇರಲಿದೆ.