ತಂದೆ, ಮಗ, ಹಾಗೂ ಸಂಬಂಧಿ ಸೇರಿ ಮೂವರ ದಾರುಣವಾಗಿ ಮೃತಪಟ್ಟ ಘಟನೆ ಇಂದು ಮುಂಜಾನೆ ಸುಳ್ಯದ ಜಟ್ಟಿಪಳ್ಳಕ್ಕೆ ಅಪ್ಪಳಿಸಿತು. ಜಟ್ಟಿಪಳ್ಳದ ನಿವಾಸಿ ನಿವೃತ್ತ ಪೋಸ್ಟ್ ಮಾಸ್ಟರ್ ಅಣ್ಣು ನಾಯ್ಕ್, ಅವರ ಪುತ್ರ ಪಿ.ಎಫ್ ಕಚೇರಿಯಲ್ಲಿ ಅಧಿಕಾರಿಯಾಗಿರುವ ಚಿದಾನಂದ ನಾಯ್ಕ್, ಜಟ್ಟಿಪಳ್ಳ ಪರಿಸರದಲ್ಲಿ ಪ್ಲಂಬಿಂಗ್ ಮತ್ತು ಕೃಷಿ ಕಾರ್ಮಿಕರಾಗಿ ಗುರುತಿಸಿಕೊಂಡಿದ್ದ ಉತ್ತಮ ಕೆಲಸಗಾರ ರಮೇಶ್ ನಾಯ್ಕ್ ಇಂದು ಮುಂಜಾನೆ ಪುತ್ತೂರಿನಲ್ಲಿ ನಡೆದ ಕಾರು ಅಪಘಾತದಲ್ಲಿ ಸಾವನ್ನಪ್ಪಿರುವುದು ಜಟ್ಟಿಪಳ್ಳ ಪರಿಸರದ ಜನತೆಯನ್ನು ಬೆಚ್ಚಿ ಬೀಳಿಸಿತ್ತು.
ಅಣ್ಣು ನಾಯ್ಕರವರ ಪತ್ನಿ ರತ್ನಾವತಿಯವರ ತವರು ಮನೆಯಾದ ವಿಟ್ಲದ ದಂಬೆ ಎಂಬಲ್ಲಿ ಗೋಂದೋಳು ಪೂಜೆ ಇದ್ದ ಕಾರಣ ನಿನ್ನೆ ಅವರು ಮತ್ತು ಅವರ ಬಂಧುಗಳೆಲ್ಲ ವಿಟ್ಲಕ್ಕೆ ಹೋಗಿದ್ದರು. ಗೋಂದೋಳು ಪೂಜೆ ಮುಗಿಸಿ ಮುಂಜಾನೆ 4 ಗಂಟೆಗೆ ವಿಟ್ಲದಿಂದ ಹೊರಟು ಸುಳ್ಯ ಕಡೆಗೆ ಬಂದರು.
ಹಿರಿಯರಾದ ಅಣ್ಣು ನಾಯ್ಕ್ ಮತ್ತು ರಮೇಶ್ ನಾಯ್ಕರು ಅಣ್ಣು ನಾಯ್ಕರ ಪುತ್ರ ಚಿದಾನಂದರ ಜತೆ ಅವರ ಕಾರಿನಲ್ಲಿ ಪುತ್ತೂರಿನ ಪರ್ಲಡ್ಕದಲ್ಲಿ ಬರುತ್ತಿರುವಾಗ ನಿದ್ದೆಯ ಮಂಪರಿನ ಕಾರಣದಿಂದಾಗಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಪ್ರಪಾತಕ್ಕೆ ಉರುಳಿತು. ಪರಿಣಾಮವಾಗಿ ಮೂವರೂ ಸ್ಥಳದಲ್ಲೇ ಮೃತಪಟ್ಟರು.
ಘಟನಾ ಸ್ಥಳಕ್ಕೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸೂಕ್ತ ರೀತಿಯಲ್ಲಿ ರಸ್ತೆಗಳ ಜಾಗೃತ ಫಲಕಗಳು ಮತ್ತು ನಿಯಮ ಪಾಲನೆ ನೋಡಿಕೊಳ್ಳುವಂತೆ ಸೂಚಿಸಿದರು.