ಅಡಿಕೆ ತೋಟದಲ್ಲಿ ಪತ್ತೆಯಾದ ವ್ಯಕ್ತಿಯನ್ನು ಮರಳಿ ಕುಟುಂಬದೊಂದಿಗೆ ಸೇರಿಸಿದ “ಸ್ಥಳೀಯರು ಹಾಗೂ ಅಯ್ಯಪ್ಪ ಸ್ವಾಮಿ ಭಕ್ತರು” ; ಉಚಿತವಾಗಿ ಸೇವೆ ನೀಡಿದ ಗುತ್ತಿಗಾರಿನ “ಅಮರ ಅಂಬುಲೆನ್ಸ್”
ಮಾಹಿತಿ ತಿಳಿದ ತಕ್ಷಣ ಸ್ಪಂದಿಸಿದ “ಹರಿಹರ ಪಳ್ಳತ್ತಡ್ಕ ಗ್ರಾ.ಪಂ”
ಡಿ.24 ರಂದು ಹರಿಹರ ಪಳ್ಳತ್ತಡ್ಕದ ಅಯ್ಯಪ್ಪ ಸ್ವಾಮಿ ಆರಾಧನಾ ಮಂದಿರ ಸಂಗಮ ಕ್ಷೇತ್ರದಲ್ಲಿ ಪೂಜೆಯ ಸಂದರ್ಭದಲ್ಲಿ ಸ್ಥಳೀಯರ ಅಡಿಕೆ ತೋಟದಲ್ಲಿ ವ್ಯಕ್ತಿಯೊಬ್ಬರು ಆಹಾರ ಸೇವಿಸದೇ ಅಸ್ವಸ್ಥಗೊಂಡ ರೀತಿಯಲ್ಲಿ ಪತ್ತೆಯಾಗಿದ್ದು, ಇದನ್ನು ಗಮನಿಸಿದ “ಸ್ಥಳೀಯರು ಹಾಗೂ ಅಯ್ಯಪ್ಪ ಸ್ವಾಮಿ ಭಕ್ತರು” ತಕ್ಷಣ ಈ ವಿಷಯವನ್ನು “ಹರಿಹರ ಪಳ್ಳತ್ತಡ್ಕ ಗ್ರಾಮ ಪಂಚಾಯತ್” ನ ಗಮನಕ್ಕೆ ತಂದು, “ಗುತ್ತಿಗಾರಿನ ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್” ನ ಅಧ್ಯಕ್ಷರಾದ ಚಂದ್ರಶೇಖರ ಕಡೋಡಿ ರವರ ಸಹಕಾರದೊಂದಿಗೆ “ಅಮರ ಅಂಬುಲೆನ್ಸ್” ಮೂಲಕ ಸುಬ್ರಹ್ಮಣ್ಯ ಪೋಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದು, ಈ ಸಂದರ್ಭದಲ್ಲಿ ಕಾಣೆಯಾದ ವ್ಯಕ್ತಿಯ ಮನೆಯವರು ಠಾಣೆಗೆ ಬಂದಿದ್ದು, ಈ ಬಗ್ಗೆ ವಿಚಾರಣೆ ನಡೆಸಿದಾಗ “ಹರಿಹರ ಪಳ್ಳತ್ತಡ್ಕದಲ್ಲಿ ಪತ್ತೆಯಾದ ವ್ಯಕ್ತಿಯ ಹೆಸರು ನಿರಂಜನ್ ಎಂಬುದಾಗಿದ್ದು, ಇದೇ ತಿಂಗಳು ಡಿ.21 ರಂದು ಬಂಟ್ವಾಳದ ಎಡಪದವು ಎಂಬಲ್ಲಿನ ಇವರು ಕುಟುಂಬ ಸಮೇತರಾಗಿ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬಂದಿದ್ದು, ಈ ಸಂದರ್ಭದಲ್ಲಿ ನಿರಂಜನ್ ರವರು ತಮ್ಮ ಕುಟುಂಬದಿಂದ ಅನಿರೀಕ್ಷಿತವಾಗಿ ತಪ್ಪಿಸಿಕೊಂಡು ಕಾಣೆಯಾಗಿದ್ದರು” ಎಂದು ತಿಳಿದುಬಂದಿದೆ. ನಂತರ ಸುಬ್ರಹ್ಮಣ್ಯ ಠಾಣಾಧಿಕಾರಿ ಕಾರ್ತಿಕ್ ರವರ ಉಪಸ್ಥಿತಿಯಲ್ಲಿ ಮನೆಯವರು ನಿರಂಜನ್ ರವರ ಗುರುತು ಪತ್ತೆ ಮಾಡಿ ಕರೆದುಕೊಂಡು ಹೋಗಿದ್ದಾರೆ ಎಂದು ತಿಳಿದುಬಂದಿದೆ.
ಹರಿಹರ ಪಳ್ಳತ್ತಡ್ಕದಲ್ಲಿ ಒಳ ಉಡುಪಿನಲ್ಲಿ ಪತ್ತೆಯಾಗಿದ್ದ ಈ ವ್ಯಕ್ತಿಗೆ ಗುತ್ತಿಗಾರಿನ ರಾಘವೇಂದ್ರ ಬೇಕರಿ ಮಾಲಕರಾದ ಅನಿಲ್ ರವರು ಹೊಸ ಬಟ್ಟೆಯನ್ನು ಹಾಗೂ ಹರಿಹರದ ಅಯ್ಯಪ್ಪ ಭಕ್ತರು ಲುಂಗಿಯನ್ನು ನೀಡಿದರು.
ಈ ಸಂದರ್ಭದಲ್ಲಿ ಹರಿಹರ ಅಯ್ಯಪ್ಪ ಸ್ವಾಮಿ ಆರಾಧನಾ ಮಂದಿರದ ಅಯ್ಯಪ್ಪ ಸ್ವಾಮಿ ಭಕ್ತರು, ಸಂತೋಷ್, ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ನ ಉಪಾಧ್ಯಕ್ಷರಾದ ಮೋಹನ್ ದಾಸ್ ಶಿರಾಜೆ, ನವೀನ್ ಕೊಪ್ಪಡ್ಕ, ಗೋಪಾಲಕೃಷ್ಣ, ರೋಹಿತಾಶ್ವ.ಎಸ್.ಪಿ, ಉದಯ ಚೆಮ್ನೂರು, ಹರಿಹರ ಪಳ್ಳತ್ತಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷರಾದ ವಿಜಯ ಕುಮಾರ್ ಅಂಙಣ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ಯಾಮ್ ಪ್ರಸಾದ್, ಸಿಬ್ಬಂದಿ ಪ್ರಿಯಾ ಕಲ್ಲೇಮಠ, ಸಚಿನ್ ಕ್ರೀಡಾ ಸಂಘದ ಅಧ್ಯಕ್ಷರಾದ ಜಗದೀಶ್ ವಾಡ್ಯಪ್ಪನ ಮನೆ ಸೇರಿದಂತೆ ಇತರರು ಸಹಕರಿಸಿದರು.(ವರದಿ : ಉಲ್ಲಾಸ್ ಕಜ್ಜೋಡಿ)