ಅಮರ ಸುದ್ದಿ ಸ್ಪೆಷಲ್ ರಿಪೋರ್ಟ್ : ✍️ಉಲ್ಲಾಸ್ ಕಜ್ಜೋಡಿ
ಪುಸ್ತಕಗಳನ್ನು ಓದುವುದು ನಾವು ನಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಹಾಗೂ ನಮ್ಮನ್ನು ನಾವು ಮತ್ತಷ್ಟು ಪ್ರಬುದ್ಧರನ್ನಾಗಿಸಿಕೊಳ್ಳಲು ಇರುವಂತಹ ಒಂದು ಅತ್ಯದ್ಭುತವಾದ ಮಾರ್ಗ. ಆದರೆ ಇಂದಿನ ಈ ಯಾಂತ್ರೀಕೃತ ಜಗತ್ತಿನಲ್ಲಿ ಸ್ಮಾರ್ಟ್ ಫೋನ್, ಕಂಪ್ಯೂಟರ್ ಮುಂತಾದವುಗಳು ನಮ್ಮ ಮನೆ-ಮನಗಳಿಗೆ ಲಗ್ಗೆಯಿಟ್ಟು ನಾವಿಂದು ಪುಸ್ತಕಗಳನ್ನು ಓದುವಂತಹ ಆಸಕ್ತಿಯನ್ನೇ ಕಳೆದುಕೊಳ್ಳುವ ಪರಿಸ್ಥಿತಿಗೆ ತಲುಪುತ್ತಿದ್ದೇವೆ. ಕೇವಲ ದೊಡ್ಡವರಿಗಷ್ಟೇ ಅಲ್ಲ ಚಿಕ್ಕ ಮಕ್ಕಳಿಗೂ ಕೂಡ ಇಂದಿನ ದಿನಗಳಲ್ಲಿ ಒಂದು ಬದಿಯಲ್ಲಿ ಸ್ಮಾರ್ಟ್ ಫೋನ್ ಹಾಗೂ ಇನ್ನೊಂದು ಬದಿಯಲ್ಲಿ ಪುಸ್ತಕವನ್ನಿಟ್ಟು ಯಾವುದಾದರೂ ಒಂದನ್ನು ತೆಗೆದುಕೊಳ್ಳಲು ಹೇಳಿದರೆ ಆ ಮಗು ಸ್ಮಾರ್ಟ್ ಫೋನ್ ಅನ್ನೇ ಆಯ್ಕೆ ಮಾಡಿ ತೆಗೆದುಕೊಳ್ಳುವ ಮಟ್ಟಿಗೆ ಮೊಬೈಲ್ ಫೋನ್ ಗಳು ದುಷ್ಪರಿಣಾಮಗಳನ್ನು ಬೀರುತ್ತಿವೆ. ಇಂತಹ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಗ್ರಂಥಾಲಯಗಳು ಮಕ್ಕಳಲ್ಲಿ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳೆಸುವ ನಿಟ್ಟಿನಲ್ಲಿ ವಿನೂತನವಾದ ಕಾರ್ಯಕ್ರಮಗಳ ಮೂಲಕ ಮಕ್ಕಳನ್ನು ಗ್ರಂಥಾಲಯಕ್ಕೆ ಬರುವಂತೆ ಮಾಡುವುದರೊಂದಿಗೆ ಮಕ್ಕಳಲ್ಲಿ ಓದುವ ಹವ್ಯಾಸವನ್ನು ಬೆಳೆಸುವ ಮೂಲಕ ಅವರ ಭವಿಷ್ಯಕ್ಕೆ ಭದ್ರ ಬುನಾದಿಯನ್ನು ಹಾಕುವ ಕಾರ್ಯದಲ್ಲಿ ಕೈ ಜೋಡಿಸುತ್ತಿವೆ. ಇಂತಹುದೇ ಕಾರ್ಯಕ್ರಮಗಳನ್ನು ಮಾಡುತ್ತಾ ಮಕ್ಕಳಲ್ಲಿ ಆಟದೊಂದಿಗೆ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳೆಸುತ್ತಿರುವ ನಮ್ಮೂರಿನ ಗ್ರಾಮ ಪಂಚಾಯತ್ ಗ್ರಂಥಾಲಯದ ಬಗ್ಗೆ ಇಂದು ತಿಳಿದುಕೊಳ್ಳೋಣ ಬನ್ನಿ…
ನಮ್ಮೂರು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಹರಿಹರ ಪಳ್ಳತ್ತಡ್ಕ ಎಂಬೊಂದು ಗ್ರಾಮ. ಇಲ್ಲಿ ಗ್ರಾಮ ಪಂಚಾಯತ್ ಗ್ರಂಥಾಲಯವಿದ್ದು, ಚಂದ್ರಿಕಾ ಎಂಬುವವರು ಗ್ರಂಥಾಲಯ ಮೇಲ್ವಿಚಾರಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಗ್ರಂಥಾಲಯಕ್ಕೆ ಹಲವಾರು ಸಮಯಗಳಿಂದ ಪ್ರತೀದಿನ ಸಂಜೆ 10 ರಿಂದ 12 ಮಂದಿ ಮಕ್ಕಳು ಶಾಲೆಯಿಂದ ಮನೆಗೆ ಬಂದ ಬಳಿಕ ಓದಲು ಬರುತ್ತಿದ್ದು, ಗ್ರಂಥಾಲಯದಲ್ಲೇ ತಮ್ಮ ಶಾಲಾ ಚಟುವಟಿಕೆಗಳನ್ನೆಲ್ಲಾ ಮಾಡಿ ಮುಗಿಸಿ ನಂತರ ಎಲ್ಲರೂ ಜೊತೆಗೂಡಿ ಪಾಠಗಳನ್ನು ಓದುತ್ತಿದ್ದು, ಗ್ರಂಥಾಲಯ ಮೇಲ್ವಿಚಾರಕರು ಮಕ್ಕಳಿಗೆ ಸಹಕರಿಸುತ್ತಾರೆ.
ಅಲ್ಲದೇ ರಜಾ ದಿನವಾದ ಆದಿತ್ಯವಾರದಂದು ಕೂಡ ಮಕ್ಕಳು ಗ್ರಂಥಾಲಯಕ್ಕೆ ಬಂದು ತಮ್ಮ ಓದಿಗೆ ಸಂಬಂಧಿಸಿದ ಕೆಲಸಗಳನ್ನು ಮಾಡುವುದರೊಂದಿಗೆ ಪೇಪರ್ ಓದುವುದು, ಗ್ರಂಥಾಲಯ ಮೇಲ್ವಿಚಾರಕರು ಕೊಟ್ಟ ವಿಷಯದ ಮೇಲೆ ಕಥೆ ಬರೆಯುವುದು, ಓದುವುದು, ಗಟ್ಟಿಯಾಗಿ ಓದುವುದು ಹಾಗೂ ಹಳೆಯ ಕಾಲದ ಆಟಗಳಾದ ಚಿನ್ನಿದಾಂಡು, ಚೆನ್ನೆಮಣೆ ಹಾಗೂ ಚೆಸ್, ಕೇರಂ ಸೇರಿದಂತೆ ಹೊರಾಂಗಣ ಆಟವಾದ ಲಗೋರಿ ಆಟಗಳನ್ನು ಆಡಿ ಖುಷಿಪಡುತ್ತಾರೆ. ಅದೇ ರೀತಿ ಸರ್ಕಾರದ ಸುತ್ತೋಲೆಯಂತೆ ಪ್ರತೀ ತಿಂಗಳಿನಲ್ಲಿ ಬರುವ ವಿಶೇಷ ದಿನಗಳಲ್ಲಿ ಆ ದಿನದ ವಿಶೇಷತೆಯ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸುವುದರ ಜೊತೆಗೆ ಗ್ರಂಥಾಲಯ ಮೇಲ್ವಿಚಾರಕರ ಸಹಕಾರದೊಂದಿಗೆ ಮಕ್ಕಳು ಡ್ಯಾನ್ಸ್, ಕ್ರಾಫ್ಟ್, ಪ್ರಕೃತಿಯ ಬಗ್ಗೆ ಕಲಿಕೆ, ಹಾಡು ಹಾಡುವುದು ಹೀಗೆ ವಿವಿಧ ರೀತಿಯ ಚಟುವಟಿಕೆಗಳು ಮಾಡುತ್ತಾರೆ.
ಈ ಗ್ರಂಥಾಲಯದ ಕಾರ್ಯಚಟುವಟಿಕೆಗಳ ಬಗ್ಗೆ ಮಾತನಾಡಿದ ಗ್ರಂಥಾಲಯ ಮೇಲ್ವಿಚಾರಕರಾದ ಚಂದ್ರಿಕಾ ರವರು “ನಮ್ಮ ಗ್ರಾಮ ಪಂಚಾಯತ್ ಗ್ರಂಥಾಲಯಕ್ಕೆ ದಿನನಿತ್ಯ ಸಂಜೆ ಶಾಲೆ ಮುಗಿದ ನಂತರ 10-12 ಮಂದಿ ಮಕ್ಕಳು ಬರುತ್ತಾರೆ. ಇಲ್ಲಿ ಮಕ್ಕಳಿಗೆ ಓದು-ಬರಹದೊಂದಿಗೆ ವಿವಿಧ ರೀತಿಯ ಚಟುವಟಿಕೆಗಳನ್ನು ಮಾಡಿಸಲಾಗುತ್ತದೆ. ಶಾಲೆಗೆ ರಜೆ ಇರುವ ದಿನಗಳಲ್ಲಿ ಮಕ್ಕಳು ಒಳಾಂಗಣ-ಹೊರಾಂಗಣ ಆಟಗಳೊಂದಿಗೆ ಕಂಪ್ಯೂಟರ್ ನಲ್ಲಿ ಚಿತ್ರ ಬಿಡಿಸುವುದು ಹಾಗೂ ಟೈಪಿಂಗ್ ಮಾಡುವುದನ್ನು ಮಾಡುತ್ತಾರೆ. ಗ್ರಂಥಾಲಯದಲ್ಲಿ ಕೃಷಿ ಸಂಬಂಧಿತ ಪುಸ್ತಕಗಳು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬೇಕಾಗುವ ಪುಸ್ತಕಗಳು, ಮಕ್ಕಳ ಪುಸ್ತಕಗಳು, ಕಥೆ ಪುಸ್ತಕಗಳು, ಕಾದಂಬರಿಗಳು, ಮಕ್ಕಳ ಪ್ರಾಜೆಕ್ಟ್ ಗಳು, ಗ್ರಾಮರ್ ಪುಸ್ತಕಗಳು ಹಾಗೂ ಸ್ಪರ್ಧೆಗಳಿಗೆ ಬೇಕಾದ ಮಾಹಿತಿಗಳು, ಮಾಸ ಪತ್ರಿಕೆಗಳು, ವಾರಪತ್ರಿಕೆಗಳು ಹಾಗೂ ಆಯಾ ದಿನಗಳ ದಿನಪತ್ರಿಕೆಗಳು ಸೇರಿದಂತೆ ಸುಮಾರು 6 ಸಾವಿರಕ್ಕೂ ಅಧಿಕ ಪುಸ್ತಕಗಳಿವೆ. ಗ್ರಂಥಾಲಯದಲ್ಲಿ ಕಂಪ್ಯೂಟರ್ ತಂತ್ರಜ್ಞಾನವಿದ್ದು, ಸರ್ಕಾರದ ಯೋಜನೆಯಂತೆ ಮಹಿಳೆಯರಿಗೆ ಡಿಜಿಟಲ್ ಸಾಕ್ಷರತೆಯನ್ನು ಮೂಡಿಸಲಾಗುತ್ತಿದೆ. ಹಾಗೂ ಓದುವ ಬೆಳಕು ಯೋಜನೆಯ ಅಡಿಯಲ್ಲಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸುಮಾರು 300ಕ್ಕೂ ಅಧಿಕ ವಿದ್ಯಾರ್ಥಿಗಳು ಸದಸ್ಯತ್ವವನ್ನು ಪಡೆದಿದ್ದಾರೆ. ಅದರೊಂದಿಗೆ ಗ್ರಂಥಾಲಯವು ಪುಸ್ತಕಗಳನ್ನು ಓದುವ ತಾಣ ಮಾತ್ರವಲ್ಲದೇ ಮಾಹಿತಿ ಕೇಂದ್ರವೂ ಆಗಿದ್ದು, ಸಾರ್ವಜನಿಕರಿಗೆ ಬೇಕಾದಂತಹ ಎಲ್ಲಾ ಮಾಹಿತಿಗಳು ಇಲ್ಲಿ ದೊರೆಯುತ್ತಿದ್ದು, ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಪಂಚಾಯತ್ ಸದಸ್ಯರ ಸಂಪೂರ್ಣ ಸಹಕಾರದೊಂದಿಗೆ ಈ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ” ಎಂದರು.
ಗ್ರಂಥಾಲಯಗಳ ಕಾರ್ಯಚಟುವಟಿಕೆಗಳ ಬಗ್ಗೆ ತಿಳಿಸುವ ಸಲುವಾಗಿ ಹಾಗೂ ಸಾರ್ವಜನಿಕರು ಹೆಚ್ಚಾಗಿ ಗ್ರಂಥಾಲಯದ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎನ್ನುವ ದೃಷ್ಟಿಯಿಂದ ನಾನು ಇಂದು ಈ ಬರಹವನ್ನು ಬರೆಯುತ್ತಿದ್ದು, ಸಾರ್ವಜನಿಕರಾದ ನಾವುಗಳು ನಮಗೆ ದೊರೆಯದೇ ಇರುವ ಸಾರ್ವಜನಿಕ ಸೌಲಭ್ಯಗಳನ್ನು ಸರ್ಕಾರದೊಂದಿಗೆ ಅಥವಾ ಸಂಬಂಧಪಟ್ಟವರೊಂದಿಗೆ ಕೇಳಿ ಪಡೆಯುವುದು ಹೇಗೆ ನಮ್ಮ ಕರ್ತವ್ಯವಾಗಿದೆಯೋ ಹಾಗೆಯೇ ನಮ್ಮಲ್ಲಿ ಇರುವ ಸಾರ್ವಜನಿಕ ಸೌಲಭ್ಯಗಳನ್ನು ಉಪಯೋಗಿಸಿಕೊಂಡು, ಉಳಿಸಿಕೊಂಡು ಹೋಗುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಆದ್ದರಿಂದ ಇನ್ನು ಮುಂದಾದರೂ ಸಾರ್ವಜನಿಕರಾದ ನಾವೆಲ್ಲರೂ ನಮ್ಮ ನಮ್ಮ ಗ್ರಾಮಗಳಲ್ಲಿರುವ ಗ್ರಂಥಾಲಯ ಸೇರಿದಂತೆ ಇನ್ನಿತರ ಸಾರ್ವಜನಿಕ ಸೌಲಭ್ಯಗಳ ಪ್ರಯೋಜನವನ್ನು ಪಡೆದುಕೊಂಡು ಅವುಗಳನ್ನು ಉಳಿಸಿಕೊಂಡು ಹೋಗುವತ್ತ ಹೆಜ್ಜೆ ಹಾಕೋಣ.