ಕಸ್ತೂರಿರಂಗನ್ ವರದಿ ಜಾರಿ ಗೊಳಿಸಬಾರದು ಇದರಿಂದ ಕೃಷಿಕರಿಗೆ ತೊಂದರೆಯಾಗುತ್ತದೆ ಎಂದು ಮಲೆನಾಡು ಜನಹಿತ ರಕ್ಷಣಾ ವೇದಿಕೆ ವತಿಯಿಂದ ನವೆಂಬರ್ 15ರಂದು ಕಡಬ ತಾಲೂಕು ಸಿರಿಬಾಗಿಲು ಗ್ರಾಮದ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನದ ಮಾಡ ಮೈದಾನದಲ್ಲಿ ನಡೆದ ಪ್ರತಿಭಟನೆಯ ವೇಳೆ ರೈತರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದರು. ಇದರ ವಿರುದ್ಧ ಉಪ್ಪಿನಂಗಡಿ ಪೊಲೀಸರು ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದರು.
ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಭಾಗಿರಥಿ ಮುರುಳ್ಯ, ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರುರಾಜ್ ಗಂಟಿಹೋಳೆ, ಮಲೆನಾಡು ಜನಹಿತ ರಕ್ಷಣಾ ವೇದಿಕೆ ಸಂಚಾಲಕರಾದ ಕಿಶೋರ್ ಕುಮಾರ್ ಶಿರಾಡಿ, ಸುಧಿರ್ ಶೆಟ್ಟಿ, ನವೀನ್ ನೆರಿಯ, ಸತೀಶ್ ಶೆಟ್ಟಿ ಬಲ್ಯ, ಉಮೇಶ್ ಸಾಯಿರಾಂ, ವೆಂಕಟ್ ವಳಲಂಬೆ, ಪ್ರಕಾಶ್ ಗುಂಡ್ಯ, ಪ್ರಸಾದ್ ನೆಟ್ಟಣ, ಸಯ್ಯದ್ ಮಿರಾ ಸಾಹೇಬ್, ಉಮೇಶ್ ಬಲ್ಯ, ನವೀನ್ ರೇಕ್ಯಾ, ಯತೀಶ್ ಗುಂಡ್ಯ, ಗಣೇಶ್ ಸೇರಿದಂತೆ ಒಟ್ಟು 15 ಜನರ ಮೇಲೆ ಪ್ರತಿಭಟನೆ ಹತ್ತಿಕ್ಕುವ ನಿಟ್ಟಿನಲ್ಲಿ ವಿನಾಕಾರಣ ಅವರ ವಿರುದ್ಧ ಉಪ್ಪಿನಂಗಡಿ ಪೊಲೀಸರು ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದರು. ಇದನ್ನು ಪ್ರಶ್ನಿಸಿ ಅರ್ಜಿದಾರರು ತಡೆಯಾಜ್ಞೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ಕರ್ನಾಟಕ ಉಚ್ಚ ನ್ಯಾಯಾಲಯ ನ್ಯಾಯಾಧೀಶರಾದ ಎಂ ನಾಗಪ್ರಸನ್ನ ಇವರು ಈ ಕ್ರಿಮಿನಲ್ ಮೊಕದ್ದಮೆಯ ಮೇಲೆ ಯಾವುದೇ ರೀತಿಯ ವಿಚಾರಣೆ ನಡೆಸದಂತೆ ತಡೆಯಾಜ್ಞೆ ನೀಡಿರುತ್ತಾರೆ.
ಅರ್ಜಿದಾರರ ಪರವಾಗಿ ಕರ್ನಾಟಕ ಹೈಕೋರ್ಟ್ ನ್ಯಾಯವಾದಿಗಳಾದ ಕರುಣಾಕರ ಪಾಂಬೆಲು, ಪ್ರದೀಪ್ ಬೊಳ್ಳೂರು, ಶ್ರೀಕಾಂತ್ ಆಚಳ್ಳಿ , ಆದರ್ಶ ಗೌಡ ಕಟ್ಟ, ಇವರುಗಳು ವಾದಿಸಿದರು.