ಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲೆಯಲ್ಲಿ ನ.22ರಂದು ಶಾಲಾ ಸಂಸ್ಥಾಪಕ ದಿವಂಗತ ಶ್ರೀ ನೆಟ್ಟಾರು ವೆಂಕಟಸುಬ್ಬರಾವ್ ರವರ ಸ್ಮೃತಿ ದಿನಾಚರಣೆಯನ್ನು ಆಚರಿಸಲಾಯಿತು. ಕಾಂಚೋಡು ಶ್ರೀ ಮಂಜುನಾಥೇಶ್ವರ ದೇವಾಲಯದ ಧರ್ಮದರ್ಶಿಗಳಾದ ಶ್ರೀ ಪರಮೇಶ್ವರಯ್ಯ ಕಾಂಚೋಡು ಮುಖ್ಯ ಅತಿಥಿಯಾಗಿ ಭಾಗವಹಿಸಿ, ಬಾಲ್ಯದಲ್ಲಿ ವೆಂಕಟಸುಬ್ಬರಾವ್ ಅವರೊಂದಿಗಿನ ಒಡನಾಟ ಹಾಗೂ ಶಾಲೆಯ ಸ್ಥಾಪನೆಯ ಬಗ್ಗೆ ಅವರಿಗಿದ್ದ ಬದ್ಧತೆಯನ್ನು ತಿಳಿಸಿದರು. ಶಾಲೆಯ ವಿದ್ಯಾರ್ಥಿಗಳಲ್ಲಿ ಅವರಿಗಿದ್ದ ಮಮತೆ ಮತ್ತು ಹಾಸ್ಯ ಪ್ರವೃತ್ತಿಯಿಂದ ಎಲ್ಲರನ್ನು ರಂಜಿಸುವ ಅವರ ಗುಣವನ್ನು ನೆನಪಿಸಿದರು. ಶಾಲಾ ಸಂಚಾಲಕರಾದ ಪಿ. ಜಿ. ಎಸ್. ಎನ್ ಪ್ರಸಾದ್ ಮಾತನಾಡುತ್ತಾ ವೆಂಕಟಸುಬ್ಬರಾವ್ ಶಾಲೆಯನ್ನು ಸ್ಥಾಪಿಸದೇ ಇರುತ್ತಿದ್ದರೆ ನಾವೆಲ್ಲಾ ಪ್ರೌಢಶಾಲೆಯ ಶಿಕ್ಷಣದಿಂದ ವಂಚಿತರಾಗುತ್ತಿದ್ದೆವು. ಆ ನಿಟ್ಟಿನಲ್ಲಿ ಗ್ರಾಮದ ಎಲ್ಲಾ ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಸಂಸ್ಥಾಪಕರು ಕಾರಣರು ಎಂದರು. ಕಾರ್ಯಕ್ರಮದ ಸಭಾಧ್ಯಕ್ಷತೆ ವಹಿಸಿದ್ದ ರಾಧಾಕೃಷ್ಣ ರಾವ್ ಉಡುವೆಕೋಡಿ ಮಾತನಾಡುತ್ತ ಸಂಸ್ಥಾಪಕರಿಗೆ ಶಾಲೆಯ ಸ್ಥಾಪನೆಯಲ್ಲಿದ್ದ ಉದ್ದೇಶ ಪೂರ್ಣವಾಗುವುದು ಎಲ್ಲಾ ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾದಾಗ ಎಂದರು. ವಿದ್ಯಾರ್ಥಿಗಳು ಸಂಸ್ಥಾಪಕರ ಕುರಿತಾದ ಹಾಡುಗಳನ್ನು ಹಾಡಿದರು. ಎಸ್. ಡಿ. ಎಂ ಸಿ ಅಧ್ಯಕ್ಷರಾದ ಶ್ರೀ ಧನಂಜಯ ಶೆಟ್ಟಿ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕರಾದ ಶ್ರೀ ಯಶೋಧರ ಎನ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ ಉದಯಕುಮಾರ್ ರೈ ಧನ್ಯವಾದ ಸಮರ್ಪಿಸಿದರು. ವಿದ್ಯಾರ್ಥಿನಿಯರಾದ ಕ್ಷಮಾ ಹಾಗೂ ಜಶ್ಮಿ ಕಾರ್ಯಕ್ರಮವನ್ನು ನಿರೂಪಿಸಿದರು.
- Friday
- November 22nd, 2024