ಅರಂತೋಡು ಎಲಿಮಲೆ ರಸ್ತೆ ಅಭಿವೃದ್ಧಿಯ ಕೂಗು ಮತ್ತೆ ಕೇಳಿಬಂದಿದ್ದು, ಜನಪ್ರತಿನಿಧಿಗಳ ಭರವಸೆ ಈಡೇರದ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸಲು ಜನ ತೀರ್ಮಾನಿಸಿದ್ದು ಈ ಬಗ್ಗೆ ಶಾಸಕರಿಗೆ ನಾಗರಿಕ ಹಿತರಕ್ಷಣಾ ವೇದಿಕೆಯ ನೇತೃತ್ವದಲ್ಲಿ ಮನವಿ ಮಾಡಿ ಬೇಡಿಕೆ ಈಡೇರಿಸಲು ಗಡುವು ನೀಡಿದ್ದಾರೆ.
ಪ್ರಸಿದ್ಧ ತೀರ್ಥ ಕ್ಷೇತ್ರಗಳಾದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳವನ್ನು ಸಂಪರ್ಕಿಸಲು ಅರಂತೋಡು ಎಲಿಮಲೆ ರಸ್ತೆ ಅತೀ ಹತ್ತಿರದ ರಸ್ತೆಯಾದ್ದರಿಂದ ಕೊಡಗು ಹಾಗೂ ಮೈಸೂರು ಭಾಗದಿಂದ ಬರುವ ಪ್ರವಾಸಿಗರ ನೂರಾರು ವಾಹನಗಳು ದಿನನಿತ್ಯ ಸಂಚರಿಸುತ್ತದೆ. ಜತೆಗೆ ಸ್ಥಳೀಯ ವಾಹನಗಳು, ಸರ್ಕಾರಿ ಹಾಗೂ ಶಾಲಾ ಬಸ್ಸುಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಸಂಚಾರ ಮಾಡುತ್ತಾರೆ.
ಸಚಿವ ಎಸ.ಅಂಗಾರ ಅವಧಿಯಲ್ಲಿ ಅಡ್ತಲೆ ಭಾಗದ ಜನರ ಸತತ ಹೋರಾಟದ ಬಳಿಕ 3 ಕಿ.ಮಿ.ರಸ್ತೆ ಅಭಿವೃದ್ಧಿಯಾಗಿತ್ತು. ಬಾಕಿ ಉಳಿದ ರಸ್ತೆ ತೀರ ಇಕ್ಕಟ್ಟಾಗಿದ್ದು ಅಭಿವೃದ್ಧಿ ಮಾಡಬೇಕೆಂಬ ಕೂಗು ಹಲವಾರು ವರ್ಷಗಳಿಂದ ಕೇಳಿಬರುತ್ತಿದ್ದರೂ ಜನಪ್ರತಿನಿಧಿಗಳಿಂದ ಭರವಸೆ ಮಾತ್ರವೇ ಹೊರತು ಅಭಿವೃದ್ಧಿ ಕಾಣುತ್ತಿಲ್ಲ. ಅಡ್ತಲೆವರೆಗೆ ಆದರೂ ಬಾಕಿ ಇರುವ 1ಕಿ.ಮೀ. ರಸ್ತೆಯನ್ನು ಈ ಬಾರಿ ಅಭಿವೃದ್ದಿ ಮಾಡಬೇಕೆಂಬ ಬೇಡಿಕೆ ಮುನ್ನಲೆಗೆ ಬಂದಿದೆ. ಈ ಹಿಂದೆ ನಡೆದ ಪ್ರತಿಭಟನೆಯಲ್ಲಿ ಜನಪ್ರತಿನಿಧಿಗಳು, ಮುಖಂಡರು ನೀಡಿದ ಭರವಸೆಯಂತೆ ಚುನಾವಣಾ ಬಹಿಷ್ಕಾರವನ್ನು ಹಿಂತೆಗೆದುಕೊಂಡಿದ್ದರು. ಇದೀಗ ಸುಮಾರು ಎರಡು ವರ್ಷಗಳೇ ಕಳೆದರೂ ರಸ್ತೆ ಅಭಿವೃದ್ಧಿಪಡಿಸುವ ಯಾವುದೇ ಸೂಚನೆಗಳೂ ಇದುವರೆಗೂ ಕಂಡುಬಂದಿಲ್ಲ. ಇದರಿಂದ ಭ್ರಮನಿರಸನಗೊಂಡಿರುವ ಜನತೆ ಮತ್ತೆ ಹೋರಾಟಕ್ಕೆ ತೀರ್ಮಾನಿಸಿ ನಾಗರಿಕ ಹಿತರಕ್ಷಣಾ ವೇದಿಕೆಯ ಮೂಲಕ ಶಾಸಕರಿಗೆ ಮನವಿ ಮಾಡಿದೆ. ಮುಂಬರುವ ಸಹಕಾರ ಸಂಘಗಳ ಚುನಾವಣೆ, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆ ಮೇಲೆ ಪರಿಣಾಮ ಬೀಳುವ ಸಾಧ್ಯತೆ ಇದ್ದು ಜನಪ್ರತಿನಿಧಿಗಳು ಎಚ್ಚೆತ್ತು ಕೇವಲ ಒಂದು ಕಿ.ಮೀ.ರಸ್ತೆಯನ್ನಾದರೂ ಅಭಿವೃದ್ಧಿ ಮಾಡಲು ಪ್ರಯತ್ನಿಸಬೇಕಿದೆ.