ಕೆಲ ವರ್ಷಗಳ ಹಿಂದೆ ಚಿಕ್ಕದಾಗಿ ಗುಂಡಿಗಳಿಂದ ತುಂಬಿದ್ದ ದೊಡ್ಡತೋಟ ಉಬರಡ್ಕ ಸುಳ್ಯ ರಸ್ತೆ ಅಗಲೀಕರಣಗೊಂಡು ಅಭಿವೃದ್ಧಿಗೊಂಡಿದೆ. ರಸ್ತೆಯೆನೋ ಅಭಿವೃದ್ಧಿಯಾಯಿತು ಆದರೇ ಅಪಘಾತ ಸಂಖ್ಯೆ ಹೆಚ್ಚುತ್ತಾ ಹೋಗುತ್ತಿದ್ದು, ನ.08 ರಂದು ನಡೆದ ಅಪಘಾತದಲ್ಲಿ ವಿದ್ಯಾರ್ಥಿನಿಯೋರ್ವಳನ್ನು ಬಲಿ ತೆಗೆದುಕೊಂಡಿದೆ. ಈ ಅಪಘಾತಕ್ಕೆ ಮೊದಲ ಕಾರಣ ರಸ್ತೆ ಬದಿ ಕ್ಲಿಯರೆನ್ಸ್ ಇಲ್ಲದಿರುವುದು ಗೋಚರಿಸುತ್ತದೆ. ಈ ರಸ್ತೆಯುದ್ದಕ್ಕೂ ಕಾಡುಗಿಡಗಳು ಬೆಳೆದು ರಸ್ತೆಯವರೆಗೂ ಚಾಚಿಕೊಂಡಿದೆ.
ಹಲವು ತಿರುಗಳಲ್ಲಿ ವಾಹನಗಳಿಗೆ ಸೈಡ್ ಕೊಡುವ ಸಂದರ್ಭ ರಸ್ತೆಯ ಬದಿಗೆ ಹೋಗಲು ಜಾಗವೇ ಇಲ್ಲದಂತಾಗಿದೆ. ಇಂತಹ ಪರಿಸ್ಥಿತಿಯಲ್ಲಿ ದ್ವಿಚಕ್ರ ವಾಹನ ಚಾಲಕರು ತಬ್ಬಿಬ್ಬಾಗುವ ಪರಿಸ್ಥಿತಿ ನಿರ್ಮಾಣವಾಗಬಹುದು. ಈ ರಸ್ತೆಯಲ್ಲಿ ಉಬರಡ್ಕ ಸಂಚರಿಸುವ ಜನರು ಮಾತ್ರ ಪ್ರಯಾಣಿಸುತ್ತಿಲ್ಲ. ದೊಡ್ಡತೋಟ ಎಲಿಮಲೆ, ಮರ್ಕಂಜ, ಗುತ್ತಿಗಾರು ಭಾಗದಿಂದ ಜನ ಬರುತ್ತಾರಲ್ಲದೇ ಪ್ರವಾಸಿಗರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುತ್ತಾರೆ. ರಸ್ರೆ ಉತ್ತಮವಾಗಿರುವುದರಿಂದ ಸವಾರರು ವೇಗವಾಗಿಯೂ ಬರುತ್ತಾರೆ. ಇಂತಹ ಸಂದರ್ಭದಲ್ಲಿ ಸೈಡ್ ಕೊಡಲು ಸಮಸ್ಯೆ ಉಂಟಾಗುತ್ತಿದ್ದು ಅಪಘಾತಗಳಿಗೆ ಕಾರಣವಾಗಿದೆ.
ಈ ಭಾಗದ ಸ್ಥಳೀಯಾಡಳಿತ, ಜನಪ್ರತಿನಿಧಿಗಳು ರಸ್ತೆಯಲ್ಲಿ ಸಂಚರಿಸುವಾಗ ಗಮನ ಹರಿಸಿದ್ದರೇ ಅಪಘಾತವನ್ನು ತಪ್ಪಿಸಬಹುದಿತ್ತು ಎಂದು ಜನರಾಡಿಕೊಳ್ಳುತ್ತಿದ್ದರು. ಪಿಡಬ್ಲ್ಯೂಡಿ ಇಲಾಖೆ ನಿದ್ರೆಯಿಂದ ಎದ್ದೇಳುವ ಮೊದಲು ಸ್ಥಳಿಯಾಡಳಿತ ಹಾಗೂ ಸಂಘ ಸಂಸ್ಥೆಗಳು ರಸ್ತೆ ಬದಿ ಬೆಳೆದಿರುವ ಗಿಡ ಗಂಟಿಗಳನ್ನು ತೆರವುಗೊಳಿಸಿದರೇ ಮುಂದೆ ಆಗಬಹುದಾದ ದುರಂತಗಳನ್ನು ಆದಷ್ಟೂ ತಪ್ಪಿಸಬಹುದಲ್ಲವೇ?