ಒಂದು ಊರಿನಲ್ಲಿ ರಾಜು ಎಂಬೊಬ್ಬ ಯುವಕನಿದ್ದ. ಆತನಿಗೆ ಪ್ರಾಣಿ-ಪಕ್ಷಿಗಳೆಂದರೆ ಅತೀವ ಪ್ರೀತಿ. ವಿಧವಿಧವಾದ ಪ್ರಾಣಿ-ಪಕ್ಷಿಗಳ ಛಾಯಾಚಿತ್ರವನ್ನು ಸೆರೆಹಿಡಿದು ಸಂಗ್ರಹಿಸುವುದು ಆತನ ಹವ್ಯಾಸವಾಗಿತ್ತು.
ಹೀಗೊಂದು ದಿನ ರಾಜು ತನ್ನ ಮನೆಯ ಎದುರಿನ ತೋಟದಲ್ಲಿ ಸಂಚರಿಸುತ್ತಿದ್ದಾಗ ಅಲ್ಲೊಂದು ಗಿಡದಲ್ಲಿ ಗುಬ್ಬಚ್ಚಿ ಪಕ್ಷಿ ಕಾಣಿಸಿತು. ಚಿಕ್ಕದಾಗಿ ಮುದ್ದುಮುದ್ದಾಗಿದ್ದ ಆ ಗುಬ್ಬಚ್ಚಿಯನ್ನು ನೋಡಿದ ರಾಜುವಿಗೆ ಅದನ್ನು ಸಾಕುವ ಮನಸ್ಸಾಯಿತು. ಹಾಗಾಗಿ ಆತನು ಅದನ್ನು ಹಿಡಿದು ತಂದು ತನ್ನ ಮನೆಯಲ್ಲಿದ್ದ ಪಂಜರದಲ್ಲಿ ಬಂಧಿಸಿಟ್ಟ. ರಾಜು ಯಾವುದೇ ದುರುದ್ದೇಶದಿಂದ ಆ ಗುಬ್ಬಚ್ಚಿಯನ್ನು ಸೆರೆಹಿಡಿದಿರಲಿಲ್ಲ. ಬದಲಾಗಿ ಅದನ್ನು ಸಾಕುವ ಉದ್ದೇಶದಿಂದ ಸೆರೆಹಿಡಿದಿದ್ದ. ಆದರೆ ಆ ಗುಬ್ಬಚ್ಚಿಗೂ ಒಂದು ಮನಸ್ಸಿದೆ, ಅದಕ್ಕೂ ತನ್ನಂತೆಯೇ ಭಾವನೆಗಳಿವೆ ಎಂಬುವುದನ್ನು ಆತ ಅರಿಯಲೇ ಇಲ್ಲ.
ಹೀಗೆ ದಿನಗಳು ಉರುಳಿದವು, ಪ್ರತಿನಿತ್ಯ ತನ್ನ ಬಳಗದೊಂದಿಗೆ ಇಡೀ ಆಕಾಶವೇ ತನ್ನ ಮನೆ ಎಂಬಂತೆ ಆಕಾಶದುದ್ದಕ್ಕೂ ಸ್ವಚ್ಛಂದವಾಗಿ ಹಾರಾಡುತ್ತಿದ್ದು ಇದೀಗ ಪಂಜರದಲ್ಲಿ ಬಂಧಿಯಾಗಿದ್ದ ಗುಬ್ಬಚ್ಚಿ ಪಂಜರದಿಂದ ಬಿಡುಗಡೆಗೊಳ್ಳಲು ಮತ್ತೆ ತನ್ನ ಬಳಗವನ್ನು ಸೇರಲು ದುಃಖದಿಂದ ಕಾಯುತ್ತಿತ್ತು. ಆದರೆ ರಾಜುವಿಗೆ ಆ ಪಕ್ಷಿಯ ಅಳಲು ಕೇಳಿಸಲೂ ಇಲ್ಲ, ಕಾಣಿಸಲೂ ಇಲ್ಲ, ಅರ್ಥವಾಗಲೂ ಇಲ್ಲ.
“ಕೆಲವೊಮ್ಮೆ ಮನುಷ್ಯನಿಗೆ ತನ್ನ ತಪ್ಪಿನ ಅರಿವಾಗದೇ ಇದ್ದಾಗ ಆ ದೇವರೇ ಯಾವುದಾದರೂ ಒಂದು ರೂಪದಲ್ಲಿ ಬಂದು ಮನುಷ್ಯನಿಗೆ ತನ್ನ ತಪ್ಪಿನ ಅರಿವನ್ನು ಮಾಡಿಸುತ್ತಾರೆ” ಎಂಬ ಮಾತಿನಂತೆ ಒಂದು ದಿನ ರಾತ್ರಿ ರಾಜುವಿನ ಕನಸಿನಲ್ಲಿ ಸಾಧುವೊಬ್ಬರು ಬಂದು “ರಾಜು….. ನೀನು ನಿನ್ನ ಮನಸ್ಸಿನ ಸಂತೋಷಕ್ಕಾಗಿ ಆಗಸದಲ್ಲಿ ಸ್ವಚ್ಛಂದವಾಗಿ ಹಾರಾಡುತ್ತಿದ್ದ ಆ ಗುಬ್ಬಚ್ಚಿಯನ್ನು ಸೆರೆಹಿಡಿದು ಪಂಜರದಲ್ಲಿ ಬಂದಿಸಿಟ್ಟಿರುವೆ. ಆದರೆ ಆ ಪಕ್ಷಿ ನಿನಗೇನೂ ಕೇಡನ್ನು ಬಯಸಿಲ್ಲ ಅಥವಾ ನಿನಗೇನೂ ಹಾನಿಯನ್ನು ಮಾಡಿಲ್ಲ. ಆದರೂ ನೀನು ವಿನಾಃಕಾರಣ ಆ ಪಕ್ಷಿಯನ್ನು ಪಂಜರದಲ್ಲಿ ಬಂದಿಸಿಟ್ಟಿರುವೆ. ಈ ಜಗತ್ತಿನಲ್ಲಿರುವ ಪ್ರತಿಯೊಂದು ಜೀವರಾಶಿಗಳಿಗೂ ಕೂಡ ತಮ್ಮ ಇಚ್ಚೆಯಂತೆ ಬದುಕುವ ಹಕ್ಕು-ಸ್ವಾತಂತ್ರ್ಯ ಎಲ್ಲವೂ ಇದೆ. ಇನ್ನೊಬ್ಬರ ಬದುಕಿನ ಹಕ್ಕನ್ನು ಕಸಿದುಕೊಳ್ಳುವುದು, ಇನ್ನೊಬ್ಬರ ಮನಸ್ಸಿಗೆ ವಿನಾಃಕಾರಣ ನೋವನ್ನುಂಟು ಮಾಡುವುದು ಮಹಾ ಅಪರಾಧ. ಆದ್ದರಿಂದ ಇನ್ನು ಮುಂದಾದರೂ ಸಾಧ್ಯವಾದರೆ ಇತರರಿಗೆ ಒಳಿತನ್ನು ಬಯಸು ಆದರೆ ಯಾರಿಗೂ ಕೂಡ ಕೆಡುಕನ್ನು ಬಯಸಬೇಡ” ಎಂದು ಹೇಳಿ ಮಾಯವಾಗುತ್ತಾರೆ. ತಕ್ಷಣವೇ ನಿದ್ರೆಯಿಂದ ಎಚ್ಚರಗೊಂಡ ರಾಜುವಿಗೆ ತನ್ನ ತಪ್ಪಿನ ಅರಿವಾಗಿ “ಇನ್ನು ಮುಂದೆ ನಾನು ನನ್ನ ಮನಸ್ಸಿನ ಸಂತೋಷಕ್ಕಾಗಿ ಯಾವ ಪ್ರಾಣಿ-ಪಕ್ಷಿ, ಜೀವಿಗಳಿಗೂ ಕೆಡುಕನ್ನು ಬಯಸುವುದಿಲ್ಲ, ಅವುಗಳನ್ನು ಬಂಧಿಸಿಟ್ಟು ಅವುಗಳ ಬದುಕುವ ಹಕ್ಕನ್ನು ಕಸಿದುಕೊಳ್ಳುವುದಿಲ್ಲ. ಇನ್ನು ಮುಂದೆ ನಾನು ಪ್ರತಿಯೊಬ್ಬರಿಗೂ ಒಳಿತನ್ನೇ ಬಯಸುತ್ತೇನೆ” ಎಂದು ತಾನು ಮಾಡಿದ ತಪ್ಪಿಗೆ ಪಶ್ಚಾತ್ತಾಪಪಟ್ಟು ಪಂಜರದಲ್ಲಿ ಬಂಧಿಯಾಗಿದ್ದ ಆ ಗುಬ್ಬಚ್ಚಿಯನ್ನು ಪಂಜರದಿಂದ ತೆಗೆದು ಆಕಾಶದೆಡೆಗೆ ಹಾರಲು ಬಿಡುತ್ತಾನೆ…✍️ಉಲ್ಲಾಸ್ ಕಜ್ಜೋಡಿ
- Tuesday
- November 5th, 2024