ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಸುಳ್ಯ ತಾಲೂಕು ಮತ್ತು ಜನಜಾಗೃತಿ ವೇದಿಕೆ ಸುಳ್ಯ ತಾಲೂಕು ಇವುಗಳ ಸಂಯುಕ್ತ ಆಶ್ರಯದಲ್ಲಿ ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಲೋಕನಾಥ ಅಮೆಚೂರುರವರ ಅಧ್ಯಕ್ಷತೆಯಲ್ಲಿ ಅಕ್ಟೋಬರ್ 02 ರ ಗಾಂಧಿ ಜಯಂತಿಯ ಪ್ರಯುಕ್ತ ನವಜೀವನ ಸಮಿತಿಯ ಸದಸ್ಯರ ಅಭಿನಂದನಾ ಕಾರ್ಯಕ್ರಮ ಮತ್ತು ಪ್ರೇರಣಾ ಶಿಬಿರದ ಪೂರ್ವಭಾವಿ ಸಭೆಯನ್ನು ಯೋಜನಾ ಕಚೇರಿಯ ಸಭಾಂಗಣದಲ್ಲಿ ನಡೆಸಲಾಯಿತು.
ಈ ಸಭೆಯನ್ನು ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಲೋಕನಾಥ ಅಮೆಚೂರುರವರು ಚಾಲನೆಯನ್ನು ನೀಡಿದರು. ಸಭೆಯಲ್ಲಿ ತಾಲೂಕು ಯೋಜನಾಧಿಕಾರಿಯವರಾದ ಮಾಧವ ಗೌಡರವರು ಹಿಂದಿನ ಸಭೆಯ ಗತಸಭೆಯ ವರದಿಯನ್ನು ಮಂಡಿಸಿ, ಎಲ್ಲಾ ಕಾರ್ಯಕ್ಷೇತ್ರದಲ್ಲಿರುವ ನವಜೀವನ ಸಮಿತಿಯ ಸದಸ್ಯರ ಮನೆಗಳಿಗೆ ಸೇವಾಪ್ರತಿನಿಧಿಯವರು ಮತ್ತು ಪೋಷಕರು ಭೇಟಿ ನೀಡಿ ಸಮೀಕ್ಷೆಯನ್ನು ನಡೆಸಬೇಕು.
ಅ. 22ರಂದು ಬೆಳ್ಳಾರೆಯಲ್ಲಿ ನಡೆಯುವ ನವಜೀವನ ಸಮಿತಿಯ ಸದಸ್ಯರ ಅಭಿನಂದನಾ ಕಾರ್ಯಕ್ರಮ ಮತ್ತು ಪ್ರೇರಣಾ ಶಿಬಿರಕ್ಕೆ ಎಲ್ಲಾ ನವಜೀವನ ಸಮಿತಿಯ ಸದಸ್ಯರು ಹಾಗೂ ಅವರ ಕುಟುಂಬದ ಸದಸ್ಯರು ಭಾಗವಹಿಸಬೇಕು, ಒಕ್ಕೂಟಗಳ ಪದಾಧಿಕಾರಿಗಳು ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಹೇಳಿದರು. ಈ ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಚರ್ಚಿಸಿ ಮಾಹಿತಿ ಮಾರ್ಗದರ್ಶನವನ್ನು ನೀಡಿದರು.
ಈ ಸಭೆಯಲ್ಲಿ ತಾಲೂಕು ಜನಜಾಗೃತಿ ವೇದಿಕೆಯ ನಿಕಟಪೂರ್ವ ಅಧ್ಯಕ್ಷರಾದ ಭವಾನಿಶಂಕರ್ ಅಡ್ತಲೆ, ತಾಲೂಕು ಒಕ್ಕೂಟದ ಕೇಂದ್ರ ಸಮಿತಿಯ ಅಧ್ಯಕ್ಷರಾದ ಸುರೇಶ್ ಕಣೆಮರಡ್ಕ, ತಾಲೂಕು ಜನಜಾಗೃತಿ ವೇದಿಕೆಯ ಕೋಶಾಧಿಕಾರಿ ಭಾಸ್ಕರ್ ಅಡ್ಕರ್ ರವರು ಉಪಸ್ಥಿತರಿದ್ದರು.
ಈ ಪೂರ್ವಭಾವಿ ಸಭೆಯಲ್ಲಿ ಎಲ್ಲಾ ವಲಯಗಳ ಜನಜಾಗೃತಿ ವಲಯ ಅಧ್ಯಕ್ಷರುಗಳು, ತಾಲೂಕು ಜನಜಾಗೃತಿ ವೇದಿಕೆಯ ಸದಸ್ಯರುಗಳು, ಎಲ್ಲಾ ವಲಯ ಒಕ್ಕೂಟಗಳ ವಲಯಾಧ್ಯಕ್ಷರುಗಳು, ತಾಲೂಕು ಭಜನಾ ಪರಿಷತ್ ನ ಅಧ್ಯಕ್ಷರು ಮತ್ತು ಕಾರ್ಯದರ್ಶಿಯವರು, ವಲಯ ಮೇಲ್ವಿಚಾರಕರು, ಕೃಷಿ ಮೇಲ್ವಿಚಾರಕರು, ತಾಲೂಕು ವಿಚಕ್ಷಣಾಧಿಕಾರಿಯವರು, ಜ್ಞಾನ ವಿಕಾಸ ಸಮನ್ವಾಧಿಕಾರಿಯವರು, ನವಜೀವನ ಸಮಿತಿಯ ಅಧ್ಯಕ್ಷರುಗಳು ಮತ್ತು ಸದಸ್ಯರು, ಪೋಷಕರುಗಳು ಭಾಗವಹಿಸಿದರು.
ಈ ಸಂದರ್ಭದಲ್ಲಿ ಜಾಲ್ಸೂರು ವಲಯದ ಮೇಲ್ವಿಚಾರಕರು ಸ್ವಾಗತಿಸಿ, ಸುಬ್ರಹ್ಮಣ್ಯ ವಲಯದ ಮೇಲ್ವಿಚಾರಕರು ಧನ್ಯವಾದವಿತ್ತರು.