ಒಂಭತ್ತು ದಿನಗಳಲ್ಲಿ ದುರ್ಗೆಯು ನವವಿದದ ರೂಪದಲ್ಲಿ ಅವತಾರವೆತ್ತಿ ದುಷ್ಟ ರಾಕ್ಷಸರಾದ ರಕ್ತಬೀಜಾಸುರ, ಚಂಡ ಮುಂಡ ರಾಕ್ಷಸರು ,ಮಹಿಷಾಸುರ ಹೀಗೆ ಹಲವಾರು ದುಷ್ಟ ಶಕ್ತಿಗಳನ್ನು ಸಂಹಾರಗೈದು ರಾಕ್ಷಸರಿಗೆ ಮುಕ್ತಿ ನೀಡಿ, ಬಳಿಕ ಹತ್ತನೆಯ ದಿನದಂದು ವಿಜಯವನ್ನು ಆಚರಣೆ ಮಾಡುವ ಮೂಲಕ ಇಡೀ ಬ್ರಹ್ಮಾಂಡವನ್ನೇ ಪಾವನಮಾಡಿದ ಶ್ರೀ ದುರ್ಗೆಯ ಮಹಿಮೆಯ ಬಗ್ಗೆ ನೀವೆಲ್ಲರೂ ತಿಳಿದುಕೊಂಡಿರುವ ಸತ್ಯ ಸರ್ವಕಾಲಿಕವಾದದ್ದು.
ಅಂತೆಯೇ ಸ್ತ್ರೀಯನ್ನು ಪ್ರಕೃತಿಗೆ ಹೋಲಿಸಿದರೆ, ಪ್ರಕೃತಿಯು ಪೂಜ್ಯನೀಯ ಭಾವಡೊಡನೆ ದೇವಿ ಶಕ್ತಿಗೆ ಹೊಂದಿಕೆಯಾಗಿದೆ.
ಇಲ್ಲಿ ಶ್ರೀಶಕ್ತಿ ಹಾಗೂ ಸ್ತ್ರೀ ಶಕ್ತಿ ಎರಡೂ ಕೂಡ ಪ್ರಕೃತಿಯೊಂದಿಗೆ ಏಕವಾಗಿದೆ. ಓಂಕಾರಕ್ಕೆ ಇಡೀ ಬ್ರಹ್ಮಾಂಡವನ್ನೇ ಜಾಗೃತಗೊಳಿಸುವ ಶಕ್ತಿ ಇರಬೇಕಾದರೆ, ಜಗವಾಳುವ ತ್ರಿ ಶಕ್ತಿ ಗಳ ಜನನಿ ಮಹಾಶಕ್ತಿಯು ವಿಶ್ವ ಚೈತನ ಎಂದರೆ ತಪ್ಪಾಗಲಾರದು.
ಪ್ರತಿಯೊಂದು ಹೆಣ್ಣಲ್ಲಿಯೂ ದೇವಿ ಶಕ್ತಿ ಅಡಗಿದೆ. ತನ್ನನ್ನು ಪೂಜಿಸುವ ಭಕ್ತರ ಇಷ್ಟಾರ್ಥವನ್ನು ಪ್ರೀತಿಯಿಂದಲೇ ನೆರವೇರಿಸಿಕೊಡುವ ಮೃದು ಕೋಮಲ ಹೃದಯ ಜಗತ್ತಿನ ಎಲ್ಲಾ ಸ್ತ್ರೀಯರಲ್ಲಿ ಇಲ್ಲವೇ ? ಇದೆ.
ತನ್ನನ್ನು ಪ್ರೀತಿಸುವ, ಗೌರವಿಸುವ ಅತ್ಮೀಯರಾಗಿ ಕಾಣುವ ಎಲ್ಲರನ್ನೂ ಕೂಡಾ ನವಯುಗದ ನಾರಿ ನಗುಮುಖದಲ್ಲೇ ಸ್ವೀಕಾರ ಮಾಡುತ್ತಾಳೆ. ಕಷ್ಟದಲ್ಲಿ ಇದ್ದಾಗ ಸಹಾಯ ಮಾಡುತ್ತಾಳೆ. ಅಮ್ಮಾ ಎಂದಾಗ ಮರುಗುತ್ತಾಳೆ. ಎಲ್ಲವೂ ಶ್ರೀ ದೇವಿಯ ಏಕಚಿತ್ತ ಮನಸ್ಸಿನಂತೆ.
ಹೌದು ಇಷ್ಟೆಲ್ಲಾ ಸುಕೋಮಲ ಮನಸ್ಸಿನ ದೇವತೆ ದುರ್ಗೆ ಭಕ್ತರ ತಪ್ಪುಗಳನ್ನು ಒಪ್ಪಿಕೊಂಡು ಮನ್ನಿಸಿ, ಕಾಪಾಡಿ ಇನ್ನೊಂದು ಅವಕಾಶವನ್ನು ಭಕ್ತರಿಗೆ ಕೊಡುವ ಜಗಜನನಿ, ಲೋಕ ಕಲ್ಯಾಣಕ್ಕಾಗಿ ಶಾಂತರೂಪದ ದುರ್ಗೆಯು ಘೋರ ರೂಪವನ್ನು ಪಡೆದು ಕಾಳಿಮಾತೆಯಾಗಬೇಕಾದರೆ ಆ ದುಷ್ಟ ಶಕ್ತಿಗಳು ಎಷ್ಟೆಲ್ಲಾ ಪಾಪ ಕೃತ್ಯಗಳನ್ನು ಎಸಗಿರಬೇಕು ಅಲ್ಲವೇ ? ಕರುಣಾಮಯಿಯಾಗಿ ಜಗವಾಳುವ ಜಗನ್ಮಾತೆ, ಪ್ರಾಣವನ್ನೇ ತೆಗಿಯುವ ಮಟ್ಟಕ್ಕೆ ಹೋಗಬೇಕಾದರೆ ಆ ಕೆಟ್ಟ ಹುಳುಗಳು ಜಗತ್ತಲ್ಲಿ ಇರಬಾರದು ಎಂದರ್ಥ.
ಅಂತೆಯೇ ನವಯುಗದ ನಾರಿಯೂ ಕೂಡಾ ಈ ಕಲಿಯುಗದಲ್ಲಿ ಜೀವಿಸಲು ತನ್ನ ಶಕ್ತಿಯನ್ನು ಪಡೆದುಕೊಳ್ಳಲೇ ಬೇಕು. “ಸ್ತ್ರೀ ಕರುಣೆಗೂ ಸರಿ, ಕಾಳಿರೂಪಿಗೂ ಸೈ” ಎನ್ನುವ ಹಾಗಾಗಬೇಕು. ಸಮಾಜದಲ್ಲಿ ಹೆಣ್ಣಿಗೆ ಯಾವಾಗಲೂ ಮಾನ ಹಾಗೂ ಪ್ರಾಣದ ರಕ್ಷಣೆಗೆ ಅವಳ ದೈವಿ ಶಕ್ತಿ ಜಾಗೃತವಾಗಲೇಬೇಕು.
ವಿಪರ್ಯಾಸ ಎಂದರೆ, ಸ್ವತಃ ಜನರ ಪ್ರಾಣವನ್ನು ಕಾಪಾಡುವ ವೈದ್ಯಗೂ ಕೂಡಾ ತನ್ನನ್ನು ತಾನು ರಕ್ಷಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಇನ್ನು ಉಳಿದವರು ಹೇಗೆ?
ಇಂದು ಕಲಿಯುಗದಲ್ಲಿ ಹೆಣ್ಣು ದೈರ್ಯದಿಂದ ಜೀವಿಸಬೇಕಾದರೆ, ಆಕೆಯ ರಕ್ಷಣೆಗೆ ದೇವಿ ಶಕ್ತಿಯಂತಿರುವ ಕಾನೂನು ಶಕ್ತಿ ಮಹಿಳೆಗೆ ದೊರೆಯಲೇಬೇಕು ಎಂಬುದು ನಮ್ಮೆಲ್ಲರ ಆಶಯ. ಹೌದಲ್ಲವೇ?..
ನಾಡಿನ ಸಮಸ್ತ ಜನತೆಗೆ ವಿಜಯ ದಶಮಿ ಹಬ್ಬದ ಹಾರ್ದಿಕ ಶುಭಾಶಯಗಳೊಂದಿಗೆ,
ಶ್ವೇತಾ ರಮೇಶ್ ಬೆಳ್ಳಿಪ್ಪಾಡಿ