ಜ್ಯೋತಿ ವಿದ್ಯಾಸಂಘದ ವಾರ್ಷಿಕ ಮಹಾಸಭೆಯು ಜ್ಯೋತಿ ಪ್ರೌಢಶಾಲೆಯಲ್ಲಿ ಸಂಘದ ಅಧ್ಯಕ್ಷ ಎನ್.ಎ ಜ್ಞಾನೇಶ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
2024-25ನೇ ಸಾಲಿನ ನೂತನ ಅಧ್ಯಕ್ಷರಾಗಿ ಎನ್.ಎ ಜ್ಞಾನೇಶ್ ರವರನ್ನು ಪುನರಾಯ್ಕೆ ಮಾಡಲಾಯಿತು. ಕಾರ್ಯದರ್ಶಿಯಾಗಿ ಮುಡುಕಜೆ ಹರಿಶ್ಚಂದ್ರ, ಕೋಶಾಧಿಕಾರಿಯಾಗಿ ಲೋಕನಾಥ್ ಅಮೆಚೂರು ಇವರುಗಳನ್ನು ಆಯ್ಕೆ ಮಾಡಲಾಯಿತು. ನಿರ್ದೇಶಕರುಗಳಾಗಿ ಪ್ರಸನ್ನ ನಿಡ್ಯಮಲೆ ಹಾಗೂ ಪ್ರವೀಣ್ ಮಜಿಕೋಡಿ ರವರನ್ನು ನೂತನವಾಗಿ ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸಿನೋಪ್ಸಿನ್ ಇಂಡಿಯಾ ಲಿಮಿಟೆಡ್ ನ ವ್ಯವಸ್ಥಾಪಕರಾದ ಶಿವಾನಂದ ಕರ್ಲಪ್ಪಾಡಿ ರವರು ಶಾಲೆಗೆ 10 ಲ್ಯಾಪ್ ಟಾಪ್ ಗಳನ್ನು ತಮ್ಮ ಸಂಸ್ಥೆಯಿಂದ ಉಚಿತವಾಗಿ ನೀಡಿದರು. ಅವರನ್ನು ಈ ಸಂದರ್ಭದಲ್ಲಿ ಶಾಲೆಯ ವತಿಯಿಂದ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಸ್ಥಳ ದಾನಿಗಳಾದ ಶಕುಂತಲಾ ಉಮಾಸುಂದರ್ ರೈ, ನಿರ್ದೇಶಕರಾದ ಕೃಷ್ಣಪ್ಪ ಕೊಳಂಗಾಯ, ರಾಜ್ ಗೋಪಾಲ್ ರಾಮಕಜೆ, ಶಾಲಾ ಸ್ಥಾಪಕರಾದ ಪೂವಪ್ಪ ಮಾಸ್ಟರ್ ದೊಡ್ಡಡ್ಕ, ಶಾಲಾ ಮುಖ್ಯ ಶಿಕ್ಷಕರಾದ ನಾಗರಾಜ್ ಜಿ ಆರ್ ಉಪಸ್ಥಿತರಿದ್ದರು.
ಸಭೆಯಲ್ಲಿ ಸಂಘದ ನಿರ್ದೇಶಕರಾದ ಎನ್ ಎ ರಾಮಚಂದ್ರ, ವಿಶ್ವನಾಥ್ ಪೆರುಮುಂಡ, ಅಶೋಕ್ ಪೀಚೆಮನೆ, ನಿವೃತ್ತ ಶಿಕ್ಷಕರಾದ ಎಂ ಆರ್ ನರೇಂದ್ರ, ದೊಡ್ಡಣ್ಣ ಬರಮೇಲು, ದೇವಸ್ಥಾನದ ಮೊಕ್ತೇಸರರಾದ ಎನ್ ಎ ಜಿತೇಂದ್ರ, ಪೋಷಕ ಸಂಘದ ಅಧ್ಯಕ್ಷರಾದ ಜಯರಾಮ್ ಕದಿಕಡ್ಕ, ವಿಶ್ವನಾಥ್ ಕುಂಬಳಚೇರಿ ಹಾಗೂ ಹಿರಿಯ ವಿದ್ಯಾರ್ಥಿಗಳು, ಶಾಲಾ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.
ಸಹ ಕಾರ್ಯದರ್ಶಿ ವೇದವ್ಯಾಸ ಭಟ್ ಸ್ವಾಗತಿಸಿ ಉಪಾಧ್ಯಕ್ಷರಾದ ಕೆ ಕೆ ಪದ್ಮಯ್ಯ ವಂದಿಸಿದರು. ಶ್ರೀಮತಿ ಚಂದ್ರಮತಿ ಕಾರ್ಯಕ್ರಮ ನಿರೂಪಿಸಿದರು. ಮಹಾಸಭೆಗೆ ಮೊದಲು ಶಾಲೆಯಲ್ಲಿ ಗಣಪತಿ ಹವನ ನಡೆಯಿತು.
- Thursday
- November 21st, 2024