
ಕೊಲ್ಲಮೊಗ್ರ ಗ್ರಾಮದ ಚಾಳೆಪ್ಪಾಡಿ(ತಂಬಿನಡ್ಕ) ಎಂಬಲ್ಲಿ ನೆಲೆಸಿದ್ದ ಅಂಚೆಯಣ್ಣ ಅಬ್ದುಲ್ ಜಬ್ಬಾರ್ ರವರು ಸೆ.13.ರಂದು ನಿಧನರಾಗಿದ್ದರು. ಅಕಾಲಿಕ ನಿಧನದಿಂದ ಆರ್ಥಿಕವಾಗಿ ಬಹಳಷ್ಟು ಸಂಕಷ್ಟದಲ್ಲಿದ್ದ ಜಬ್ಬಾರ್ ಕುಟುಂಬಕ್ಕೆ ದಿಕ್ಕೇ ತೋಚದಂತಾಗಿತ್ತು. ತಾನು ಬದುಕಿದ್ಸಾಗ ಜಾತಿ ಧರ್ಮ ನೋಡದೇ ಇತರರ ನೋವಿಗೆ ಸ್ಪಂದಿಸುತ್ತಾ ಬಂದಿದ್ದರಿಂದ ಜಬ್ಬಾರ್ ಒಬ್ಬ ಅಜಾತಶತ್ರುವಾಗಿದ್ದರು. ಈ ಹಿನ್ನೆಯಲ್ಲಿ ಕೆಲ ಆತ್ಮೀಯರು ಸೇರಿ ಅವರ ಕುಟುಂಬದ ನೋವಿಗೆ ಸ್ಪಂದಿಸುವ ಮಾನವೀಯತೆ ದೃಷ್ಟಿಯಿಂದ ಸಾಮಾಜಿಕ ಜಾಲತಾಣದ ಮುಖಾಂತರ ಕೈಲಾದಷ್ಟು ಆರ್ಥಿಕ ನೆರವನ್ನು ನೀಡಿ ಎಂದು ಮನವಿ ಮಾಡಿದ್ದರು. ಇದ್ದಕ್ಕೆ ಸ್ಪಂದಿಸಿದ ದಾನಿಗಳು ಜಾತಿ ಧರ್ಮ ನೋಡದೇ ನೆರವು ನೀಡಿದ್ದರು. ಕೆಲವೇ ದಿನಗಳಲ್ಲಿ ಸಂಗ್ರಹವಾದ ಸುಮಾರು 1ಲಕ್ಷದ 20 ಸಾವಿರಕ್ಕೂ ಮಿಕ್ಕಿ ಹಣವನ್ನು ಕೊಲ್ಲಮೊಗ್ರ ಅಂಚೆ ಕಚೇರಿ ಬಳಿ ದಿ.ಅಬ್ದುಲ್ ಜಬ್ಬಾರ್ ರವರ ಮನೆಯವರಿಗೆ ಹಸ್ತಾಂತರಿಸಲಾಯಿತು. ಈ ಮಹತ್ಕಾರ್ಯಕ್ಕೆ ಗ್ರಾಮಸ್ಥರಾದ ಅನಂತರಾಮ ಮಣಿಯಾನ ಮನೆ, ಟಿ. ಶ್ರೀಧರ್ ನಾಯರ್, ಶೇಖರ್ ಅಂಬೆಕಲ್ಲು, ಸಚಿತ್ ಶಿವಾಲ, ಶ್ರೀಮತಿ ಹೇಮಲತ ಶುಭಕರ ಕೊಮ್ಮೆಮನೆ ಹಾಗೂ ದಿನೇಶ್ ಕುಮಾರ್ ಮಡ್ತಿಲ ನೇತೃತ್ವದಲ್ಲಿ 140ಕ್ಕೂ ಮಿಕ್ಕಿ ಜನ ಕೈ ಜೋಡಿಸಿದ್ದಾರೆ. ಹಸ್ತಾಂತರ ಸಂದರ್ಭದಲ್ಲಿ ನೇತೃತ್ವ ವಹಿಸಿದವರು ಸೇರಿದಂತೆ ಪ್ರಮುಖರಾದ ಹರ್ಷಕುಮಾರ್ ದೇವಜನ, ಕಮಲಾಕ್ಷ ಮುಳ್ಳುಬಾಗಿಲು, ಮಣಿಕಂಠ ಕೊಳಗೆ, ಅಂಚೆ ಪಾಲಕ ಚಂದ್ರಶೇಖರ ಕುಂಞೆಟಿ, ಮತ್ತಿತರರು ಉಪಸ್ಥಿತರಿದ್ದರು.
