ಪೆರುವಾಜೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ವಿರುದ್ದ ಸ್ಥಳೀಯ ಮೂರು ವ್ಯಕ್ತಿಗಳ ಹೆಸರಿನಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ದೂರು ಸಲ್ಲಿಕೆ ಮಾಡಲಾಗಿದ್ದು, ಇದೀಗ ಈ ದೂರು ಅರ್ಜಿಯ ಬಗ್ಗೆಯೇ ಸಂಶಯ ಮೂಡಿದ್ದು, ಗ್ರಾಮದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಆ.27 ರಂದು ಪಿಡಿಓ ಜಯಪ್ರಕಾಶ್ ವಿರುದ್ಧ ನೀಡಿದ ದೂರು ಅರ್ಜಿಗೆ ನಕಲಿ ಸಹಿ ಹಾಕಿದ್ದಾರೆಂಬ ಆರೋಪ ಕೇಳಿ ಬಂದಿದ್ದು, ಪಿಡಿಓ ಅವರು ಮುಂದಿನ ಮಾರ್ಚ್ ನಲ್ಲಿ ನಿವೃತ್ತರಾಗುವವರಿದ್ದಾರೆ. ದುರುದ್ದೇಶದಿಂದ ಅವರ ವಿರುದ್ಧ ಕೆಲವರು ಆರೋಪ ಮಾಡುತ್ತಿದ್ದಾರೆ. ಇದು ರಾಜಕೀಯ ಪಕ್ಷದ ಓರ್ವ ನಾಯಕನ ಅಣತಿಯಂತೆ ನಡೆದಿದೆ, ಅಲ್ಲದೇ ಇದು ರಾಜಕೀಯವಾಗಿ ಮಾಡುತ್ತಿರುವ ಕೆಲಸವಾಗಿದೆ. ನಕಲಿ ಸಹಿ ಸಂಗ್ರಹದ ಬಗ್ಗೆ ಸೂಕ್ತ ತನಿಖೆ ನಡೆಸಬೇಕೆಂಬ ಒತ್ತಾಯ ಗ್ರಾಮಸ್ಥರಿಂದ ಕೇಳಿಬಂದಿದೆ.
ಈ ಬಗ್ಗೆ ಪಿಡಿಓ ಅವರನ್ನು ಸಂಪರ್ಕಿಸಿದಾಗ ನನ್ನ ವಿರುದ್ಧ ದುರುದ್ದೇಶವಿಟ್ಟು ದೂರು ನೀಡಿದ್ದಾರೆ. ದೂರು ಅರ್ಜಿಯಲ್ಲಿ ವ್ಯಕ್ತಿಯೊಬ್ಬರು 6 ವರ್ಷಗಳ ಹಿಂದೆ ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ಅವರು ಈಗ ಬಂದು ಸಹಿ ಹಾಕಲು ಸಾಧ್ಯವೇ ಹಾಗೂ ಕೆಲ ಅವಿದ್ಯಾವಂತರಿಂದ ಸಹಿ ಹಾಕಿಸಲಾಗಿದೆ. ತಪ್ಪು ಮಾಡಿದವರಿಗೆ ದೇವರೇ ಶಿಕ್ಷೆ ನೀಡಲಿ ಎಂದಿದ್ದಾರೆ.
ಈ ಬಗ್ಗೆ ಜಿಲ್ಲಾಡಳಿತ ಎಚ್ಚೆತ್ತು ನಕಲಿ ಸಹಿ ಹಾಕಿದವರ ವಿರುದ್ಧ ಕ್ರಮ ಕೈಗೊಳುವುದೇ, ಈ ಅರ್ಜಿಯ ಕುರಿತು ಪೋಲಿಸ್ ಇಲಾಖೆಗೆ ದೂರು ನೀಡುವುದೇ ಕಾದು ನೋಡಬೇಕಿದೆ.
ದೂರಿನ ಪತ್ರದಲ್ಲೇನಿದೆ ಗೊತ್ತಾ ?
ರಿಗೆ,ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್
ರಿಂದ, ಗ್ರಾಮಸ್ಥರು ಪೆರುವಾಜೆ ಗ್ರಾಮ ಪಂಚಾಯತ್ ಪೆರುವಾಜೆ- 574212 ಸುಳ್ಯ ತಾಲೂಕು ದ.ಕ.
ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಪೆರುವಾಜೆ ಗ್ರಾಮ ಪಂಚಾಯತ್ ಇವರು ಶೋಷಿಸುತ್ತಾ ಮನಬಂದಂತೆ ವರ್ತಿಸುತ್ತಿರುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವರೇ
ಮೇಲೆ ವಿಷಯದಲ್ಲಿ ಹೇಳಿದಂತೆ ಶ್ರೀ ಜಯಪ್ರಕಾಶ್ ಎಂಬ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಪೆರುವಾಜೆ ಗ್ರಾಮ ಪಂಚಾಯತ್ ಕಾನೂನು ಪ್ರಕಾರ ನಿರ್ವಹಿಸಬೇಕಾದ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸದೆ ಬಡವರು ಬಂದರೆ ನಿರ್ಲಕ್ಷಿಸುತ್ತು ಮಾತನಾಡಿದರೆ ರೋಪ್ ಹಾಕುತ್ತಿದ್ದಾರೆ.
ಸದ್ರಿಯವರು ಪೆರುವಾಜೆ ಪಂಚಾಯತ್ ಆರಂಭ ಕಾಲದಿಂದಲೂ ಅಂದರೆ ಸುಮಾರು 5-6 ವರ್ಷಗಳಿಂದ ಇಲ್ಲಿಯೇ ಕೆಲಸ ಮಾಡುತ್ತಿದ್ದು ಚುನಾಯಿತ ಪ್ರತಿನಿಧಿಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳುತ್ತಿಲ್ಲ. ಗುಂಪುಗಾರಿಕೆ ಮಾಡುತ್ತಿದ್ದು ಇವರು ಅಕ್ರಮ ಕಾರುಬಾರು ಮಾಡುತ್ತಿದ್ದಾರೆ.
ಇಷ್ಟು ದೀರ್ಘ ಕಾಲ ಒಬ್ಬರೇ ಒಂದೇ ಜಾಗದಲ್ಲಿ ಕೆಲಸ ಮಾಡುತ್ತಿರುವುದು ಅದಕ್ಕೆ ಅವಕಾಶ ಕೊಟ್ಟಿರುವುದು ಕಾನೂನು ಪ್ರಕಾರ ಅಪರಾಧವಾಗಿದೆ.
ಇತ್ತೀಚೆಗೆ ಪಿಡಿಒ ಕಾನೂನು ಬಾಹಿರವಾಗಿ ಯಾರಿಂದಲೋ ಪ್ರಯೋಜನ ಪಡೆದು ಸರ್ಕಸ್ ಮಾಡಲು ಹೋಗಿ ದಲಿತ ದೌರ್ಜನ್ಯ ಕಾನೂನಿನಡಿಯಲ್ಲಿ ಕೇಸು ದಾಖಲಾಗಿದೆ. ಇದಕ್ಕೆ ಪಂಚಾಯತ್ ಹಣವನ್ನು ವೆಚ್ಚ ಮಾಡುತ್ತಿದ್ದಾರೆ ಇಂತಹ ಅನೇಕ ನಿದರ್ಶನ ಇದೆ.
ಸದ್ರಿಯವರು ನಿರ್ಣಯದ ಪ್ರತಿಗಳನ್ನು ನಿಯಮಾನುಸಾರ ನೋಟಿಸು ಬೋರ್ಡ್ ನಲ್ಲಿಯೂ ಹಾಕುವುದಿಲ್ಲ. ಕೇಳಿದರೆ ಬೆದರಿಸುವ ತಂತ್ರವನ್ನು ಮಾಡುತ್ತಾರೆ. ಇಂತಹ ಇವರ ಕಾನೂನು ಬಾಹಿರ ಕೃತ್ಯಗಳಿಗೆ ಅನೇಕ ನಿದರ್ಶನ ಇದೆ.
ಆದ್ದರಿಂದ ಸದ್ರಿ ಜಯಪ್ರಕಾಶ್ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪೆರುವಾಜೆ ಗ್ರಾಮ ಪಂಚಾಯತ್ ಇವರನ್ನು ಇಲ್ಲಿಂದ ಬೇರೆಡೆಗೆ ವರ್ಗಾಯಿಸಿ ಇಲ್ಲಿಗೆ ಓರ್ವ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಯನ್ನು ನಿಯೋಜಿಸಬೇಕಾಗಿ ಕೋರಿಕೆ. ನಿವೃತ್ತಿಗೆ ಸ್ವಲ್ಪ ಸಮಯ ಇಲ್ಲಿಯೇ ಮುಂದುವರಿಯಬೇಕು ಎಂಬ ಒತ್ತಡ ತಂದರು. ಆದರೂ ಅವರನ್ನು ನಿರ್ದಾಕ್ಷಿಣ್ಯವಾಗಿ ಇಲ್ಲಿಂದ ಕಳುಹಿಸಬೇಕು.
ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿ ಸುಳ್ಯ ತಾಲೂಕು ಪಂಚಾಯತ್ ಸುಳ್ಯ ಇವರಿಗೆ ಪ್ರತಿ
ಶ್ಯಾಮ ಸುಂದರ ನೀರ್ಕಜೆ ಮನೆ ಪೆರುವಾಜೆ ಗ್ರಾಮ, ಸುಂದರ ಮುಗೇರ ಮುಂಡಾಜೆ ಪೆರುವಾಜೆ ಗ್ರಾಮ, ಐತ ಹರಿಜನ ಕಾಪಿತಕಾಡು ಪೆರುವಾಜೆ ಗ್ರಾಮ
ಉಳಿದ ಸಹಿ ಮುಂದಿನ ಪುಟದಲ್ಲಿ ಎಂದು ಬರೆಯಲಾಗಿದೆ.