Ad Widget

ಸುಳ್ಯ ಸಿ.ಎ. ಬ್ಯಾಂಕ್ ವಾರ್ಷಿಕ ಮಹಾಸಭೆ – ಮೆಸ್ಕಾಂ ಪವರ್ ಮ್ಯಾನ್ ಗಳಿಗೆ ಸನ್ಮಾನ

ಸುಳ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ (ಸಿ.ಎ.ಬ್ಯಾಂಕ್) ವಾರ್ಷಿಕ ಮಹಾಸಭೆಯು ಸೆ.21ರಂದು ಬ್ಯಾಂಕಿನ ಶ್ರೀ ಎ.ಎಸ್. ವಿಜಯಕುಮಾರ್ ಸಭಾಂಗಣದಲ್ಲಿ ನಡೆಯಿತು. SSLC ಮತ್ತು PUC ಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಸಂಘದ ಸದಸ್ಯರ 20 ಮಕ್ಕಳಿಗೆ ತಲಾ ರೂ 2,000 ವಿದ್ಯಾರ್ಥಿ ವೇತನವನ್ನು ಮಹಾಸಭೆಯಲ್ಲಿ ನೀಡಲಾಯಿತು. ಸಂಘದ ಕಾರ್ಯ ವ್ಯಾಪ್ತಿಯಾದ ಸುಳ್ಯ ಮತ್ತು ಅಜ್ಜಾವರದಲ್ಲಿ ಕಾರ್ಯನಿರ್ವಹಿಸುತ್ತಿರುವ 10 ಮಂದಿ ಮೆಸ್ಕಾಂ ಪವರ್ ಮ್ಯಾನ್ ಗಳನ್ನು ಗುರುತಿಸಿ ಗೌರವಿಸಲಾಯಿತು. ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ನಿರ್ದೇಶಕರು ಮತ್ತು ಸುಳ್ಯ ಸಿಎ ಬ್ಯಾಂಕ್ ನಾಮನಿರ್ದೇಶಿತ ನಿರ್ದೇಶಕರು ಆಗಿರುವ ಶ್ರೀ ಎಸ್ ಎನ್ ಮನ್ಮಥ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಶ್ರೀ ಎಸ್ ಎನ್ ಮನ್ಮಥ ಅವರಿಗೆ ಮತ್ತು ಎಸ್ ಸಿ ಡಿ ಸಿ ಸಿ ಬ್ಯಾಂಕ್ ನ ಸುಳ್ಯ ವಲಯ ಮೇಲ್ವಿಚಾರಕರಾದ ಶ್ರೀ ಬಾಲಕೃಷ್ಣ ಪುತ್ಯ ರವರಿಗೂ ಸಂಘದ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.
ನಂತರ ಮಹಾಸಭೆಯ ಅಜೆಂಡ ಪ್ರಕಾರ ಕಾರ್ಯಕ್ರಮವನ್ನು ಮುಂದುವರಿಸಲಾಯಿತು. ಸಂಘದ ಅಧ್ಯಕ್ಷ ಶ್ರೀ ವಿಕ್ರಂ ಅಡ್ಪಂಗಾಯ ಅಧ್ಯಕ್ಷತೆ ವಹಿಸಿ, ವರದಿ ಸಾಲಿನಲ್ಲಿ ಸಂಸ್ಥೆಯು ರೂ.277.41 ಕೋಟಿ ವ್ಯವಹಾರ ನಡೆಸಿದ್ದು, ಒಟ್ಟು ರೂ.1 ಕೋಟಿ 37 ಲಕ್ಷ ಲಾಭಗಳಿಸಿದೆ. ಸದಸ್ಯರಿಗೆ ಶೇ.12 ಡಿವಿಡೆಂಡ್ ನೀಡಲು ನಿರ್ಧರಿಸಲಾಗಿದೆ ಎಂದು ಘೋಷಣೆ ಮಾಡಿದರು.

ಸದಸ್ಯರಾದ ಶ್ರೀ ವಿನಯ ಕುಮಾರ್ ಕಂದಡ್ಕ, ಕುಸುಮಾಧರ ಎ ಟಿ ಪಿಕೆ ಉಮೇಶ್ ಸರಕಾರ ರೈತರಿಗೆ ಬೆಳೆಸಾಲವನ್ನು 0% ನಲ್ಲಿ 5 ಲಕ್ಷದವರೆಗೆ ಹಾಗೂ ಶೇ.3 ಬಡ್ಡಿದರದಲ್ಲಿ 15 ಲಕ್ಷದವರೆಗೆ ಕೃಷಿ ಸಾಲ ನೀಡುವ ಕುರಿತು ಆದೇಶ ಮಾಡಿದೆ. ಇಲ್ಲಿ ಯಾಕೆ ನೀಡುತ್ತಿಲ್ಲ ಎಂದು ಪ್ರಶ್ನಿಸಿದರು. ಅಧ್ಯಕ್ಷ ಶ್ರೀ ವಿಕ್ರಂ ಏ ವಿ ಈ ಬಗ್ಗೆ ಡಿಸಿಸಿ ಬ್ಯಾಂಕ್ ಅಧ್ಯಕ್ಷರಲ್ಲಿ ಮಾತನಾಡಿದ್ದು ದಕ್ಷಿಣ ಕನ್ನಡ ಜಿಲ್ಲೆಗೆ ಸುಮಾರು 650 ಕೋಟಿಗಳಷ್ಟು ಮೊತ್ತ ಹೆಚ್ಚುವರಿ ಬೇಕಿರುವುದರಿಂದ ಆ ಹಣ ಬಿಡುಗಡೆಯಾದ ನಂತರವಷ್ಟೇ ಡಿಸಿಸಿ ಬ್ಯಾಂಕಿನಿಂದ ಸಾಲ ವಿತರಿಸಬಹುದು ಎಂದು ತಿಳಿಸಿದ್ದಾರೆ. ಎಂದರು.
ಹಿರಿಯ ಸದಸ್ಯ ಶ್ರೀ ಆನಂದರಾವ್ ಕಾಂತಮಂಗಲ ಮಾತನಾಡಿ ಸದಸ್ಯರ ಸಾಲದ ಎಂಟ್ರಿಗಳನ್ನು ಆರ್ ಟಿ ಸಿ ಇಂದ ಸಂಘದ ವತಿಯಿಂದಲೇ ತೆಗೆಯಲು ವ್ಯವಸ್ಥೆ ಮಾಡಲು ಸೂಚಿಸಿದರು.
ಸಂಘದ ಸಿಬ್ಬಂದಿಗಳು ದುಡಿದ ಪರಿಣಾಮ ಸಂಘ ಇಷ್ಟು ಲಾಭ ಪಡೆಯಲು ಸಾಧ್ಯವಾಯಿತು. ಆದ್ದರಿಂದ ಅವರಿಗೆ 2 ತಿಂಗಳ ಬೋನಸ್ ನೀಡಿ ಎಂದು ಶ್ರೀ ಡಿ.ಎಸ್. ಗಿರೀಶ್ ಹಾಗೂ ಶ್ರೀ ರಾಮಚಂದ್ರ ಪೆಲತಡ್ಕ ಹಳಿದರು. ಡಿವಿಡೆಂಡ್ ಶೇ.15ಕ್ಕೆ ಏರಿಸಿ ಎಂದು ಶ್ರೀ ಜಯರಾಮ ಮುಂಡೋಳಿಮೂಲೆ, ಶ್ರೀ ಅಬ್ದುಲ್ ಕುಂಞಿ ನೇಲ್ಯಡ್ಕ, ಶ್ರೀ ದಾಮೋದರ ಮಂಚಿ, ಶ್ರೀ ಬೆಳ್ಯಪ್ಪ ಮುಡೂರು ಒತ್ತಾಯಿಸಿದರು. ಅಜ್ಜಾವರ ಶಾಖೆಯನ್ನು ಪೂರ್ಣ ಪ್ರಮಾಣದ ಬ್ಯಾಂಕಿಂಗ್ ವ್ಯವಸ್ಥೆ ಮತ್ತು ರಸಗೊಬ್ಬರ ಕೃಷಿ ಉಪಕರಣ ಇತ್ಯಾದಿ ವಿತರಣೆಗೆ ವ್ಯವಸ್ಥೆಯಾಗುವಂತೆ ಮಾಡಲು ಅಜ್ಜಾವರ ಗ್ರಾಮದಲ್ಲಿ ಒಂದು ಎಕರೆ ಜಾಗ ಹುಡುಕುತ್ತಿದ್ದೇವೆ ಮತ್ತು ಈ ಬಗ್ಗೆ ಭೂಮಿ ಖರೀದಿಗೆ ಕ್ಷೇಮನಿಧಿಯ ಹೆಚ್ಚಳದ ಅವಶ್ಯಕತೆ ಇದೆ ಎಂದು ಅಧ್ಯಕ್ಷ ಶ್ರೀ ವಿಕ್ರಮ್ ಎ.ವಿ ತಿಳಿಸಿದರು. ಕ್ಷೇಮನಿಧಿ ಹೆಚ್ಚಿದಷ್ಟೂ ಸಂಘದ ಆರ್ಥಿಕ ಸದೃಢತೆ ಬಲಗೊಳ್ಳುತ್ತದೆ. ಹಾಗಾಗಿ ಈಗಿನ ಪರಿಸ್ಥಿತಿಯಲ್ಲಿ ಶೇ 12ರ ಡಿವಿಡೆಂಡ್ ಅರ್ಥಪೂರ್ಣವಾಗಿದೆ ಮತ್ತು ಹೆಚ್ಚಿನ ಮೊತ್ತ ಮೊತ್ತ ಕ್ಷೇಮನಿಧಿಯಲ್ಲಿ ಇದ್ದಲ್ಲಿ ನಮ್ಮ ಸಂಘದ ಮುಂದಿನ ದಿನಗಳ ಅಭಿವೃದ್ಧಿ ಯೋಜನೆಗಳಿಗೆ ಸಹಕಾರಿಯಾಗಲಿದೆ ಎಂದರು.ಸುದಿರ್ಘ ಚರ್ಚೆ ನಡೆದು ಅಂತಿಮವಾಗಿ ಯಾವುದೇ ಬದಲಾವಣೆ ಮಾಡದೆ ಆಡಳಿತ ಮಂಡಳಿ ಈಗಾಗಲೇ ತೀರ್ಮಾನಿಸಿದಂತೆ ಶೇ 12.00ರಷ್ಟು ಡಿವಿಡೆಂಡ್ ಮತ್ತು ಬೋನಸ್ ಪಾವತಿಸಲು ತೀರ್ಮಾನಿಸಲಾಯಿತು.
ಯಶಸ್ವಿನಿ ಯೋಜನೆಯ ಕಾರ್ಡ್ ಬಾರದಿರುವ ಕುರಿತು ಚನಿಯ ಕಲ್ತಡ್ಕ ಪ್ರಶ್ನಿಸಿದರು. ಯಶಸ್ವಿನಿ ಯೋಜನೆಯಡಿ ಹತ್ತಿರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗುವುದಿಲ್ಲ. ಈ ಕುರಿತು ಸರಕಾರಕ್ಕೆ ಬರೆಯಬೇಕು ಎಂದು ಸಂಘದ ಮಾಜಿ ಅಧ್ಯಕ್ಷ ಸುಭೋದ್ ಶೆಟ್ಟಿ ಮೇನಾಲ ತಿಳಿಸಿದರು. ಅಡಿಕೆ ಎಲೆ ಹಳದಿ ರೋಗಕ್ಕೆ ಪರ್ಯಾಯ ಬೆಳೆ ಬೆಳೆಯಲು ಪ್ರೋತ್ಸಾಹ ಸಿಗುವ ನಿಟ್ಟಿನಲ್ಲಿ ತರಬೇತಿ ಕಾರ್ಯಾಗಾರ ಮಾಡುವಂತೆ ಜಯರಾಮ ಮುಂಡೋಳಿಮೂಲೆಯವರು ಸಲಹೆ ನೀಡಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ವಿಕ್ರಂ ಅಡ್ಪಂ ಗಾಯರು ಮಾತನಾಡಿ, ಸಂಘಕ್ಕೆ ಸುಸಜ್ಜಿತ ಕಟ್ಟಡ ನಿರ್ಮಾಣ ಕಾರ್ಯ ಆಗುತ್ತಿದ್ದು ಮುಂದಿನ ಫೆಬ್ರವರಿ ತಿಂಗಳಲ್ಲಿ ಉದ್ಘಾಟನೆ ನಡೆಯಲಿದೆ. ಅದರಲ್ಲಿ ನೆಲ ಮಹಡಿ ಸೇರಿ ಮೂರು ಮಹಡಿಗಳಿರುತ್ತವೆ. ವಾಣಿಜ್ಯ ಮಳಿಗೆ, ಸಂಘದ ಕಚೇರಿ ಸೇರಿದಂತೆ ವಿಸ್ತಾರವಾದ ಹಾಲ್ ಅದರಲ್ಲಿ ಬರುತ್ತದೆ ಎಂದು ವಿವರ ನೀಡಿದರು. ಅಜ್ಜಾವರ ಶಾಖೆ ನವೀಕರಣ, ದುಗಲಡ್ಕದಲ್ಲಿರುವ ಸಂಘದ ಕಟ್ಟಡ ದುರಸ್ತಿ ಮಾಡಲಿದ್ದೇವೆ. ಕೃಷಿಕರಿಗೆ ತರಬೇತಿ ಕಾರ್ಯಗಾರಗಳು, ವಿವಿಧ ಸಂಘ ಸಂಸ್ಥೆಗಳಿಗೆ ತರಬೇತಿ ಉದ್ದೇಶಕ್ಕೆ, ಸಣ್ಣ ಪುಟ್ಟ ಸಭೆಗಳನ್ನು ವ್ಯವಸ್ಥಿತವಾಗಿ ನಡೆಸಲು ಈಗ ಸಭೆ ನಡೆಯುವ ಸಭಾಂಗಣವನ್ನು ಸುಸಜ್ಜಿತ ಹವಾನಿಯಂತ್ರಿತ ಟ್ರೈನಿಂಗ್ ಸೆಂಟರ್ ಆಗಿ ಮಾಡುವ ಚಿಂತನೆ ಇದೆ ಎಂದು ಹೇಳಿದರು.
ಕೃಷಿಕರಿಗೆ ಬೇಕಾದ ವ್ಯವಸ್ಥೆ
ಈಗ ಕೃಷಿ ಚಟುವಟಿಕೆಗಳಿಗೆ ಕೆಲಸದವರ ಕೊರತೆ ಇದೆ. ಅದಕ್ಕಾಗಿ ವಿಟ್ಲದಲ್ಲಿ ಇರುವಂತೆ ಅಡಿಕೆ ಕೃಷಿಗೆ ಮದ್ದು ಬಿಡುವವರು, ಅಡಿಕೆ ಕೊಯ್ಯುವವರು ಹೀಗೆ ಕೃಷಿಕರಿಗೆ ಬೇಕಾದ ಎಲ್ಲ ಸೌಕರ್ಯವನ್ನು ನಮ್ಮ ಸಂಘದ ಮೂಲಕ ಆರಂಭಿಸುವ ಬಗ್ಗೆ ಯೋಜನೆ ರೂಪಿಸಲಿದ್ದೇವೆ. ಕರ್ನಾಟಕದಲ್ಲಿ ಗೋಶಾಲೆಗಳನ್ನು ಸಹಕಾರ ಸಂಘಗಳ ಮೂಲಕ ನಿರ್ವಹಣೆ ಮಾಡುವ ವ್ಯವಸ್ಥೆ ಜಾರಿಗೊಳಿಸಲು ಸರಕಾರ ನಿರ್ಣಯಿಸಿರುವ ಮಾಹಿತಿ ಲಭಿಸಿದೆ. ಸುಳ್ಯದಲ್ಲಿ ಆಗುತ್ತಿರುವ ಗೋಶಾಲೆಯ ನಿರ್ವಹಣೆಯ ಅವಕಾಶ ಸಿಕ್ಕಿದಲ್ಲಿ ಸರಕಾರದ ಷರತ್ತುಗಳನ್ನು ಮತ್ತು ಅಲ್ಲಿನ ಸ್ಥಿತಿಗತಿಗಳನ್ನು ಪರಿಶೀಲಿಸಿಕೊಂಡು ನಮ್ಮ ಸಂಘದ ಕಡೆಯಿಂದ ಮಾಡಲಾಗುವುದು ಮತ್ತು ಅಲ್ಲಿ ದನದ ಸೆಗಣಿ, ಗಂಜಲ ದಿಂದ ಉಪುತ್ಪನ್ನಗಳನ್ನು ಮಾಡಿ ನಮ್ಮದೇ ಬ್ರಾಂಡ್ನಲ್ಲಿ ಮಾರಾಟ ಮಾಡುವ ಚಿಂತನೆಯೂ ಇದೆ ಎಂದು ಅವರು ಸಭೆಯಲ್ಲಿ ಹೇಳಿದರು.
ಕು. ಮೇಘಕೃಷ್ಣ ಪ್ರಾರ್ಥಿಸಿದರು. ಸಂಘದ ಉಪಾಧ್ಯಕ್ಷ ಶ್ರೀ ಚಂದ್ರಶೇಖರ ನಡುಮನೆ ಸ್ವಾಗತಿಸಿದರು. ಶ್ರೀ ತೀರ್ಥರಾಮ ಕೇರ್ಪಳ ಶತಾಬ್ದಿ ವಿದ್ಯಾರ್ಥಿ ವೇತನದ ಪಟ್ಟಿ ಓದಿದರು. ಶ್ರೀ ಮುರಳೀಕೃಷ್ಣ ಹಿಂದಿನ ವರ್ಷದ ವರದಿ ಮಂಡಿಸಿದರು.ನಿರ್ದೇಶಕರಾದ ಶ್ರೀ ಶಿವರಾಮ ಕೇರ್ಪಳ ವಂದಿಸಿದರು. ಮದ್ಯಾಹ್ನ ಭೋಜನದ ವ್ಯವಸ್ಥೆಯೊಂದಿಗೆ ಮಹಾಸಭೆ ಸಂಪನ್ನಗೊಂಡಿತು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!