ಸುಳ್ಯ ಕೆ.ಎಸ್.ಆರ್.ಟಿ.ಸಿ. ಘಟಕದಲ್ಲಿ ಈ ಮೊದಲು ಪನ್ನಗ ಸಂಸ್ಥೆಯ ಅಡಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿದ್ದ 9 ಚಾಲಕರಿಗೆ 11 ತಿಂಗಳು ಸಮರ್ಪಕವಾಗಿ ಸಂಬಳ ನೀಡಲಾಗಿತ್ತು. ತಿಂಗಳ ಹಿಂದೆ ಆ ಸಂಸ್ಥೆಯ ಗುತ್ತಿಗೆ ಅವಧಿ ಮುಗಿದ ಬಳಿಕ ಇನ್ನೊಂದು ಸಂಸ್ಥೆ ಪೂಜ್ಯಾಯ ಸೆಕ್ಯೂರಿಟಿ ಸರ್ವಿಸ್ ಸಂಸ್ಥೆಯವರು ಗುತ್ತಿಗೆ ಪಡೆದು ಇವರನ್ನು ನೇಮಿಸಿಕೊಂಡಿದ್ದರು.
ಅವರು ನೇಮಿಸುವ ಸಂದರ್ಭದಲ್ಲಿ ಚಾಲಕರ ಬೇಡಿಕೆಯಂತೆ ಸಂಬಳ ಕಡಿತ ಮಾಡುವುದಿಲ್ಲ, ಮತ್ತಿತರ ಭರವಸೆ ನೀಡಿದ್ದರು ಎನ್ನಲಾಗಿದೆ. ಆದರೆ ಇದೀಗ ತಿಂಗಳ ಸಂಬಳದಲ್ಲಿ 5 ಸಾವಿರಕ್ಕೂ ಅಧಿಕ ಹಣ ಕಡಿತ ಮಾಡಲಾಗಿದ್ದು, ಕೆಲವರಿಗೆ 10 ಸಾವಿರದವರೆಗೆ ಕಡಿತ ಮಾಡಲಾಗಿದೆ. ಇನ್ನಿಬ್ಬರಿಗೆ ಸಂಬಳವೇ ಬಂದಿಲ್ಲ ಎಂದು ಚಾಲಕರು ಆರೋಪಿಸಿದ್ದಾರೆ.
ಸುಳ್ಯ ಘಟಕ ವ್ಯಾಪ್ತಿಯಲ್ಲಿ ಸುಮಾರು 9 ಚಾಲಕರಿಗೆ ಅನ್ಯಾಯ ಆಗಿದೆ ಎಂದು ಅವರು ಕೆಲಸಕ್ಕೆ ಗೈರಾಗಿ ಪ್ರತಿಭಟಿಸುತ್ತಿದ್ದಾರೆ. ಕೆ.ಎಸ್.ಆರ್.ಟಿಸಿ. ಅಧಿಕಾರಿಗಳು ಕೂಡ ಈ ಮೊದಲು ಭರವಸೆ ನೀಡಿದಂತೆ ನಡೆದುಕೊಂಡಿಲ್ಲ ಅದ್ದರಿಂದ ಪುತ್ತೂರು ಕೆ.ಎಸ್.ಆರ್.ಟಿ.ಸಿ. ಡಿಸಿ ಕಚೇರಿ ಮುಂಭಾಗ ಪ್ರತಿಭಟಿಸಲು ಮಡಿಕೇರಿ, ಸುಳ್ಯ, ಪುತ್ತೂರು ಘಟಕದ ಸಂತ್ರಸ್ತ ಚಾಲಕರು ತೀರ್ಮಾನಿಸಿದ್ದಾರೆ.