✍️ಉಲ್ಲಾಸ್ ಕಜ್ಜೋಡಿ
“ಶ್ವಾನ” ಅಂದರೆ ನಾಯಿಗಳಿಗೆ ಇರುವಷ್ಟು ಬುದ್ಧಿಶಕ್ತಿ ಹಾಗೂ ಸ್ವಾಮಿನಿಷ್ಠೆ ಬೇರೆ ಯಾವ ಪ್ರಾಣಿಗಳಿಗೂ ಇಲ್ಲ ಎಂದು ಹೇಳಬಹುದು. ಏಕೆಂದರೆ ನಾಯಿಗಳಿಗೆ ನಾವು ಒಂದು ಹೊತ್ತು ಆಹಾರ ನೀಡಿದರೂ ಕೂಡ ಅವುಗಳು ನಮ್ಮನ್ನು ಸದಾ ನೆನಪಿನಲ್ಲಿಟ್ಟುಕೊಳ್ಳುತ್ತವೆ. ಪ್ರತೀ ಬಾರಿ ಅವುಗಳು ನಮ್ಮನ್ನು ಕಂಡಾಗಲೂ ಅವರದ್ದೇ ಆದ ರೀತಿಯಲ್ಲಿ ಪ್ರೀತಿಯನ್ನು ತೋರುತ್ತವೆ. ಆದ್ದರಿಂದ ಸ್ವಾಮಿನಿಷ್ಠೆ ಅಥವಾ ನಿಯತ್ತಿಗೆ ಇನ್ನೊಂದು ಹೆಸರೇ ಶ್ವಾನ ಅಥವಾ ನಾಯಿಗಳು ಎನ್ನಬಹುದು. ಇಂದು ಈ ಮಾತುಗಳಿಗೆ ಒಂದು ಸಣ್ಣ ಉದಾಹರಣೆಯನ್ನು ನೀಡುವುದಾದರೆ ಸುಳ್ಯ ತಾಲೂಕಿನ ಕೊಲ್ಲಮೊಗ್ರು ಗ್ರಾಮದ ಬಂಗ್ಲೆಗುಡ್ಡೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ “ಸುಂದರಿ” ಎಂಬ ಹೆಸರಿನ ಶ್ವಾನವೊಂದಿದ್ದು, ಸ್ಥಳೀಯರ ಮಾಹಿತಿಯ ಪ್ರಕಾರ ಸುಮಾರು 03 ವರ್ಷಗಳಿಂದ ಈ ಶ್ವಾನವು ಈ ಶಾಲೆ ಹಾಗೂ ಶಾಲೆಯ ಆಸುಪಾಸಿನಲ್ಲಿ ವಾಸಿಸುತ್ತಿದ್ದು, ಬೆಳಗ್ಗಿನ ಸಮಯ ಹೆಚ್ಚಾಗಿ ಶಾಲೆಯಲ್ಲೇ ಇರುತ್ತದೆ. ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರನ್ನು ಹೊರತುಪಡಿಸಿ ಬೇರೆ ಯಾರಾದರೂ ಶಾಲೆಗೆ ಬಂದರೆ, ಶಾಲೆಯ ವಸ್ತುಗಳನ್ನು ಮುಟ್ಟಿದರೆ ಬೊಗಳುವ ಈ ಶ್ವಾನ ಶಾಲೆಯ ರಕ್ಷಣೆ ಮಾಡುವುದಲ್ಲದೇ ಪ್ರತಿನಿತ್ಯ ಬೆಳಿಗ್ಗೆ ವಿದ್ಯಾರ್ಥಿಗಳೊಂದಿಗೆ ಅಸೆಂಬ್ಲಿಯಲ್ಲಿ ಪಾಲ್ಗೊಳ್ಳುತ್ತದೆ. ಹಾಗೂ ಈ ವರ್ಷದ ಸ್ವಾತಂತ್ರ್ಯೋತ್ಸವದ ಮೆರವಣಿಗೆಯ ಸಂದರ್ಭದಲ್ಲಿ ಈ ಶ್ವಾನವು ವಿದ್ಯಾರ್ಥಿಗಳ ಮಧ್ಯೆ ಹೆಜ್ಜೆ ಹಾಕಿದ್ದು ಊರವರ ಮೆಚ್ಚುಗೆಗೆ ಕಾರಣವಾಗಿದೆ. ಅದೇನೇ ಇರಲಿ ಒಟ್ಟಿನಲ್ಲಿ ಮನುಷ್ಯರೇ ತಮ್ಮ ಕೆಲಸಗಳನ್ನು ಸರಿಯಾಗಿ ಮಾಡದೇ ಸಬೂಬು ಹೇಳುವ ಈ ಕಾಲದಲ್ಲಿ ಶ್ವಾನವೊಂದು ಶಾಲೆಯಲ್ಲಿ ಹಾಕುವ ಒಂದು ಹೊತ್ತು ಊಟಕ್ಕೆ ಪ್ರತಿಫಲವಾಗಿ ತನ್ನ ಕೆಲಸವನ್ನು ನಿಷ್ಠೆಯಿಂದ ಮಾಡುತ್ತಾ ಊರವರ ಪ್ರೀತಿಗೆ ಪಾತ್ರವಾಗಿದ್ದು ವಿಶೇಷವೇ ಸರಿ…✍️ಉಲ್ಲಾಸ್ ಕಜ್ಜೋಡಿ
- Tuesday
- December 3rd, 2024