✍️ಉಲ್ಲಾಸ್ ಕಜ್ಜೋಡಿ
“ಈ ಜಗತ್ತಿನಲ್ಲಿ ಪ್ರತಿಯೊಬ್ಬರೂ ಕೂಡ ತಮ್ಮ ಜೀವನದಲ್ಲಿ ಯಶಸ್ವಿಯಾಗಬೇಕಾದರೆ ಮುಂದೆ ಗುರಿ ಇರಬೇಕು, ಹಿಂದೆ ಗುರು ಇರಬೇಕು” ಎನ್ನುವ ಮಾತಿದೆ. ಗುರಿ ನಮ್ಮನ್ನು ಜೀವನದಲ್ಲಿ ಯಶಸ್ವಿಯಾಗಿಸಿದರೆ ಗುರುಗಳು ಆ ನಮ್ಮ ಯಶಸ್ಸಿಗೆ ದಾರಿದೀಪವಾಗಿರುತ್ತಾರೆ.
ಹಾಗೆಯೇ ವಿದ್ಯಾರ್ಥಿಗಳಿಗೆ ಜೀವನದ ಗುರಿ ತೋರುವ ದಾರಿದೀಪವಾಗಿ, ಮಾರ್ಗದರ್ಶಕರಾಗಿ ತಾವು ಕಲಿತದ್ದನ್ನು ತಮ್ಮ ವಿದ್ಯಾರ್ಥಿಗಳಿಗೆ ಧಾರೆಯೆರೆದು ಅವರ ಬದುಕನ್ನು, ಅವರ ಭವಿಷ್ಯವನ್ನು ಬೆಳಗುವಂತಹ ಪುಣ್ಯ ಕಾರ್ಯವನ್ನು ಮಾಡುತ್ತಿರುವ ಎಲ್ಲಾ ಶಿಕ್ಷಕರಿಗೂ ಹೃದಯಪೂರ್ವಕ ಧನ್ಯವಾದಗಳನ್ನು ತಿಳಿಸುತ್ತಾ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯೆಯನ್ನು ಧಾರೆಯೆರೆದ ಒಂದೇ ಕುಟುಂಬದ ಹತ್ತು ಶಿಕ್ಷಕರ ಬಗ್ಗೆ ಇಂದು ತಿಳಿದುಕೊಳ್ಳೋಣ ಬನ್ನಿ…
ಕಡಬ ತಾಲೂಕಿನ ಸುಬ್ರಹ್ಮಣ್ಯ ಸಮೀಪದ ಬಿಳಿನೆಲೆ ಕೈಕಂಬದ “ನಡುತೋಟ ಕುಟುಂಬದ” ಹತ್ತು ಮಂದಿ ಸದಸ್ಯರು ಶಿಕ್ಷಕ ವೃತ್ತಿಯನ್ನು ಆಯ್ಕೆ ಮಾಡಿಕೊಂಡು ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯೆಯನ್ನು ಧಾರೆಯೆರೆದು ಅವರ ಭವಿಷ್ಯವನ್ನು ರೂಪಿಸಿದ್ದು, ಕುಟುಂಬದ ಹಿರಿಯರಾದ ನೀಲಪ್ಪ ಗೌಡ ನಡುತೋಟ ರವರು 40 ವರ್ಷಗಳ ಕಾಲ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದು, ಕಡಬ ತಾಲೂಕಿನ ಸುಬ್ರಹ್ಮಣ್ಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಧ್ಯಾಪಕರಾಗಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದ ಇವರು ಸುಳ್ಯ ತಾಲೂಕಿನ ಹರಿಹರ ಪಲ್ಲತ್ತಡ್ಕ ಪದವಿಪೂರ್ವ ಕಾಲೇಜಿನಲ್ಲಿ ಇತಿಹಾಸ ಉಪನ್ಯಾಸಕರಾಗಿ ನಿವೃತ್ತರಾಗಿದ್ದು, ನೀಲಪ್ಪ ರವರ ಪತ್ನಿ ಶ್ರೀಮತಿ ಶಾಂತಿ ರವರು ಸುಬ್ರಹ್ಮಣ್ಯ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ನೀಲಪ್ಪ ಗೌಡ ರವರ ಸಹೋದರರಾದ ದಿ| ದಿವಾಕರ ಗೌಡ ರವರು ಸುಂಕದಕಟ್ಟೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾಗಲೇ ನಿಧನರಾಗಿದ್ದರು. ದಿವಾಕರ ರವರ ಪತ್ನಿ ಶ್ರೀಮತಿ ಸುಮತಿ ರವರು ಬಿಳಿನೆಲೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ.
ನೀಲಪ್ಪ ಗೌಡ ರವರ ಇನ್ನೊಬ್ಬ ಸಹೋದರರಾದ ವಿಶ್ವನಾಥ ಗೌಡ ರವರು ಸುಬ್ರಹ್ಮಣ್ಯದ ಎಸ್.ಎಸ್.ಪಿ.ಯು ಕಾಲೇಜಿನಲ್ಲಿ ವೃತ್ತಿ ಶಿಕ್ಷಣ ವಿಭಾಗದ ಮುಖ್ಯಸ್ಥರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದು, ವಿಶ್ವನಾಥ ರವರ ಪತ್ನಿ ಶ್ರೀಮತಿ ಲೀಲಾ ಕುಮಾರಿ ರವರು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಪಂಜ ಇಲ್ಲಿ ಮುಖ್ಯ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ನೀಲಪ್ಪ ರವರ ಮತ್ತೊಬ್ಬ ಸಹೋದರರಾದ ವಿಜಯ ಕುಮಾರ್ ರವರು ಸಿರಿಬಾಗಿಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ವಿಜಯ ಕುಮಾರ್ ರವರ ಪತ್ನಿ ಶ್ರೀಮತಿ ಗೀತಾ ರವರು ದೈಹಿಕ ಶಿಕ್ಷಣ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿದ್ದರು.
ನೀಲಪ್ಪ ರವರ ಸಹೋದರಿ ಶ್ರೀಮತಿ ಉಮಾ ರವರು ಗುರುವಾಯನಕೆರೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಅವರ ಪತಿ ಧರಣಪ್ಪ ಗೌಡ ರವರು ಸೋಣಂದೂರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ.
ಒಟ್ಟಿನಲ್ಲಿ ಒಂದೇ ಕುಟುಂಬದ ಹತ್ತು ಮಂದಿ ಸದಸ್ಯರು ಶಿಕ್ಷಕ ವೃತ್ತಿಯನ್ನು ಆಯ್ಕೆ ಮಾಡಿಕೊಂಡು ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯೆಯನ್ನು ಧಾರೆಯೆರೆದು ಅವರ ಭವಿಷ್ಯವನ್ನು ರೂಪಿಸಿದ್ದು ಹೆಮ್ಮೆಯ ವಿಷಯ. ಇವರ ಈ ಶಿಕ್ಷಣ ಪ್ರೀತಿಗೆ ಹ್ಯಾಟ್ಸಾಪ್ ಹೇಳಲೇಬೇಕು…✍️ಉಲ್ಲಾಸ್ ಕಜ್ಜೋಡಿ
- Thursday
- November 21st, 2024