Ad Widget

ಕನ್ನಡದ ಕಿಚ್ಚು ಹತ್ತಿಸಿದ ಕನ್ನಡ ಮೇಷ್ಟ್ರು

ಅವರ ನಿಜ ನಾಮಧೇಯ ಯಸ್. ವೆಂಕಟರಮಣ ಭಟ್. ಅವರನ್ನು ಎಲ್ಲರೂ ಕರೆಯುತ್ತಿದ್ದದ್ದು ಎಸ್.ವಿ. ಮೇಷ್ಟ್ರು ಎಂಬುದಾಗಿ. ನಾನು ಅಂದಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೆಳ್ಳಾರೆ (ಇಂದಿನ ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆ) ಯಲ್ಲಿ 7ನೇ ತರಗತಿಯಲ್ಲಿ ಕಲಿಯುತ್ತಿದ್ದಾಗ ನಮಗೆ ಕನ್ನಡ ಕಲಿಸಿದ ನಮ್ಮ ಪ್ರೀತಿಯ ಎಸ್.ವಿ. ಮೇಷ್ಟ್ರು. ಅವರು ಕನ್ನಡದಲ್ಲಿ ಪಾಠ ಆರಂಭಿಸಿದರೆ ನಾವೆಲ್ಲರೂ ಮಂತ್ರಮುಗ್ದರಾಗಿ ತಲ್ಲೀನರಾಗಿ ಕುಳಿತು ಬಿಡುತಿದ್ದೆವು. ಕ್ಲಾಸಿನಲ್ಲಿ ಸಾಸಿವೆ ಬಿದ್ದರೂ ಕೇಳಿಸುವಷ್ಟು ನಿಶ್ಚಬ್ಧ. ಭೀಮ ದುರ್ಯೋಧನರ ಗದಾಯುದ್ಧವನ್ನು ಅವರು ವರ್ಣಿಸುತ್ತಿದ್ದರೆ ನಮಗೆಲ್ಲ ರೋಮಾಂಚನವಾಗುತ್ತಿತ್ತು. ಪಂಪ ರನ್ನರ ಹಳೆಗನ್ನಡ ಪದ್ಯಗಳನ್ನು ಲೀಲಾಜಾಲವಾಗಿ ಮುತ್ತು ಉದುರಿದಂತೆ ಸ್ಪಷ್ಟವಾಗಿ ಸುಲಲಿತವಾಗಿ ಆಸಕ್ತಿದಾಯಕವಾಗಿ ವಿವರಿಸುತ್ತಿದ್ದರೆ ,ನಾವು ಆಸಕ್ತಿಯಿಂದ ಆಲಿಸುತ್ತಿದ್ದೆವು. ಎಷ್ಟೋ ಬಾರಿ ನಮಗೆ ಅರಿವಿಲ್ಲದೆ ನಮ್ಮ ಕಣ್ಣುಗಳಿಂದ ನೀರು ಧಾರಾಕಾರವಾಗಿ ಸುರಿಯುತ್ತಿತ್ತು. ಅವರು ಪಾಠ ಮಾಡುವಾಗ ಆ ಪಾತ್ರವನ್ನೇ ತಮ್ಮೊಳಗೆ ಆವಾಹನೆ ಮಾಡಿಕೊಂಡು ಅದೇ ಹಾವಬಾವ ಮತ್ತು ಪರವಶತೆಯಿಂದ ನಮಗೆ ಮನ ತಟ್ಟುವಂತೆ ವರ್ಣಿಸುತ್ತಿದ್ದರು. ಅವರ ಕ್ಲಾಸನ್ನು ನಾವೂ ಯಾವತ್ತೂ ತಪ್ಪಿಸುತ್ತಿರಲಿಲ್ಲ. ಅವರು ಬರೀ ಪಾಠ ಮಾಡುತ್ತಿರಲಿಲ್ಲ. ನಮ್ಮಿಂದ ಅದಕ್ಕೆ ಪೂರಕವಾದ ಪ್ರತಿಕ್ರಿಯೆ ಮತ್ತು ಫಲಿತಾಂಶ ನಿರೀಕ್ಷಿಸುತ್ತಿದ್ದರು. ನಾವು ತಪ್ಪು ಮಾಡಿದಾಗ ಮುಲಾಜಿಲ್ಲದೆ ನಾಗರಬೆತ್ತದಿಂದ ಬಾಸುಂಡೆ ಬರುವಂತೆ ಏಟು ನೀಡಲು ಹೇಸುತ್ತಿರಲಿಲ್ಲ. ನಮಗೆ ಅವರ ಬಗ್ಗೆ ಭಕ್ತಿಯೂ ಭಯವೂ ಇತ್ತು. ಸದಾ ಬಿಳಿ ಪಂಚೆ ಮತ್ತು ಬಿಳಿ ಅಂಗಿ ಅಥವಾ ಜುಬ್ಬಾ ಮತ್ತು ಹೆಗಲಲ್ಲೊಂದು ಶಾಲು. ಅವರನ್ನು ಕಂಡರೆ ನಮಗೆ ವಿಪರೀತ ಭಯ ,ಭಕ್ತಿ ಮತ್ತು ಗೌರವ. ಅವರ ವ್ಯಕ್ತಿತ್ವವೂ ಹಾಗೆ ಇತ್ತು. ಯಾವುದೇ ಕಪ್ಪು ಚುಕ್ಕೆ ಇಲ್ಲದೆ, ವಿದ್ಯಾರ್ಥಿಗಳಲ್ಲಿ ಯಾವುದೇ ಭೇಧ ಭಾವ ಮಾಡುತ್ತಿರಲೇ ಇಲ್ಲ. ಸಮಯ ಪರಿಪಾಲನೆಗೆ ಅತೀ ಹೆಚ್ಚು ಮಹತ್ವ ನೀಡುತ್ತಿದ್ದರು. ಅನಗತ್ಯವಾಗಿ ಕ್ಲಾಸಿನಲ್ಲಿ ಅನಗತ್ಯ ಅಸಂಬಂಧ್ಧ ವಿಚಾರ ಮಾತಾಡುತ್ತಿರಲೇ ಇರಲಿಲ್ಲ. ವೈಯುಕ್ತಿಕ ಕೆಲಸಗಳನ್ನು ಯಾವತ್ತೂ ವಿದ್ಯಾರ್ಥಿಗಳಿಂದ ಮಾಡಿಸುತ್ತಲೆ ಇರಲಿಲ್ಲ, ಹೆಸರಿಗೆ ಕನ್ನಡ ಮೇಷ್ಟ್ರು ಆಗಿದ್ದರೂ, ಗಣಿತ ಶಾಸ್ತ್ರವನ್ನೂ ಅಷ್ಟೇ ಪರಿಣಾಮಕಾರಿಯಾಗಿ (ಅದ್ಯಾಪಕರ ಕೊರತೆ ಇದ್ದಾಗ) ಮಾಡುತ್ತಿದ್ದರು. ವಿದ್ಯಾರ್ಥಿಗಳಲ್ಲಿ ಜಾತಿ, ಮತ, ಧರ್ಮಗಳ ಅಥವಾ ಬಡವ, ಬಲ್ಲಿದ ಎಂಬ ಬೇಧ ಭಾವ ಮಾಡದೇ ನಿಜಾರ್ಥದಲ್ಲಿ  ಪರಿಪೂರ್ಣ ಶಿಕ್ಷಕರಾಗಿದ್ದರು. ಒಳ್ಳೆ ಕೆಲಸ ಮಾಡಿದಾಗ ಬೆನ್ನು ತಟ್ಟಿ ಹುರಿದುಂಬಿಸುತ್ತಿದ್ದರು. ಶಿಸ್ತು, ಸಂಯಮ, ಸಮಯ ಪಾಲನೆಗೆ ಅತೀ ಹೆಚ್ಚು ಮಹತ್ವ ನೀಡುತ್ತಿದ್ದ ಅವರು, ನಮ್ಮ ಜೀವನಕ್ಕೆ ಭದ್ರ ಅಡಿಪಾಯ ಹಾಕಿದ ಮಹಾನುಭಾವ ಎಂದರೆ ಅತಿಶಯೋಕ್ತಿಯಾಗಲಾರದು.

ಈಗ ಅವರಿಗೆ ತೊಂಬತ್ತರ ಹರೆಯ. ಮೊನ್ನೆ ಮೊನ್ನೆವರೆಗೂ ಲವಲವಿಕೆಯಿಂದ ಓಡಾಡುತ್ತಿದ್ದರು. ಈಗ ವಯೋಸಹಜ ಖಾಯಿಲೆಯಿಂದ ಹಾಸಿಗೆ ಹಿಡಿದಿದ್ದಾರೆ. ಎರೆಡೆರಡು ಬಾರಿ ನನ್ನ ದಂತ ಚಿಕಿತ್ಸಾಲಯಕ್ಕೆ ಒಂದು ಹಲ್ಲು ಕೀಳಿಸಿ ಹೋಗಿದ್ದರು. ಅಲುಗಾಡುವ ಎಲ್ಲ ಹಲ್ಲು ಕಿತ್ತು ಹೊಸತಾದ ಹಲ್ಲಿನ ಸೆಟ್ಟು ಹಾಕುವ ಮಾಷ್ಟೇ ಎಂದು ನಾನು ಅವರಿಗೆ ಹಲವು ಬಾರಿ ಹೇಳಿದ್ದೆ. ಹಲ್ಲಿನ ಸೆಟ್ಟಿನ ಗುರು ದಕ್ಷಿಣೆ ನೀಡುತ್ತೇನೆ ಎಂದು ಅವರಿಗೆ ಆಶ್ವಾಸನೆ ನೀಡಿದ್ದೆ. ಅವರ ಆರೋಗ್ಯ ಪದೇ ಪದೇ ಕೈಕೊಡುತ್ತಿದ್ದ ಕಾರಣ ಹಲ್ಲು ಕೀಳಿಸಲು ಸಾಧ್ಯವಾಗದೆ ನನ್ನ ಆಸೆ ನೆರವೇರಲೇ ಇಲ್ಲ. ಆದರೆ ಅವರು ಮಾತ್ರ ನನ್ನ ಶಿಷ್ಯ ನನ್ನ ಹಲ್ಲು ಕಿತ್ತು ಹೊಸ ಸೆಟ್ಟು ಗುರುದಕ್ಷಿಣೆ ನೀಡುತ್ತಾನೆ ಎಂದು ಊರಿಡೀ ಹೇಳಿ ಸಂಭ್ರಮಿಸುತ್ತಿದ್ದರು. ಕೊನೆಗೂ ಆ ದಿನ ಬರಲೇ ಇಲ್ಲ ಎಂದು ಕೊರಗು ನನಗೆ ಈಗಲೂ ಇದೆ. ಆದೇನೇ ಇರಲಿ ನನ್ನಂತಹಾ ಸಾವಿರಾರು ಬಡ ವಿದ್ಯಾರ್ಥಿಗಳಿಗೆ ಪಾಠ ಹೇಳಿ, ನಮ್ಮ ಕನಸುಗಳನ್ನು ನನಸಾಗಿಸಲು ಶಕ್ತಿ ತುಂಬಿ ಸಮಾಜದಲ್ಲಿ ಸ್ಥಾನ ಮಾನ ಸಿಗುವಂತೆ ಮಾಡಿದ ಎಸ್. ವಿ. ಮೇಷ್ಟ್ರು ಹಾಗೂ ಇನ್ನಿತರ ಎಲ್ಲ ಗುರುಪರಂಪರೆಗೆ ಸಾವಿರ ಸಾವಿರ ನಮನಗಳು ಮತ್ತು ಎಲ್ಲ ಶಿಕ್ಷಕ ಬಾಂಧವರಿಗೆ ಶತ ಕೋಟಿ ನಮನಗಳು.

ಡಾ| ಮುರಲೀ ಮೋಹನ್ ಚೂಂತಾರು

ಬಾಯಿ ಮುಖ ಮತ್ತು ದವಡೆ ಶಸ್ತೃಚಿಕಿತ್ಸಕರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!