✍️ಉಲ್ಲಾಸ್ ಕಜ್ಜೋಡಿ
ಮಳೆಗಾಲದ ಸಮಯದಲ್ಲಿ ನೀರಿನ ಹರಿವು ಹೆಚ್ಚಾಗಿ ನದಿಗಳು ತುಂಬಿ ಹರಿಯುವುದು ಸರ್ವೇಸಾಮಾನ್ಯ. ಕೆಲವೊಮ್ಮೆ ನೀರಿನ ಹರಿವು ಹೆಚ್ಚಾದಾಗ ನದಿಯ ನೀರು ರಸ್ತೆ, ಸೇತುವೆಗಳ ಮೇಲೆ ಹರಿದು ಕೆಲಹೊತ್ತು ಸಂಚಾರಕ್ಕೆ ತೊಡಕುಂಟಾಗುತ್ತದೆ. ಆದರೆ ಸುಳ್ಯ ತಾಲೂಕಿನ ಕೊಲ್ಲಮೊಗ್ರು ಗ್ರಾಮದ ಕೊಲ್ಲಮೊಗ್ರು ಪೇಟೆ ಸಮೀಪದಲ್ಲಿರುವ ಕೊಲ್ಲಮೊಗ್ರು ಮತ್ತು ಕಲ್ಮಕಾರು ಸಂಪರ್ಕಿಸುವ ಮುಖ್ಯ ರಸ್ತೆಯಲ್ಲಿ ಮುಳುಗು ಸೇತುವೆಯೊಂದಿದ್ದು, ಪ್ರತೀ ಮಳೆಗಾಲದಲ್ಲೂ ಸೇತುವೆಯ ಮೇಲೆ ನೀರು ಹರಿದು ಸಂಚಾರಕ್ಕೆ ತೊಂದರೆಯಾಗುತ್ತಲೇ ಇದೆ. ನದಿಗೆ ಮೂರು ಸಣ್ಣ ಗಾತ್ರದ ಮೋರಿಗಳನ್ನು ಹಾಕಿ ನಿರ್ಮಿಸಿದ ಮುಳುಗು ಸೇತುವೆ ಇದಾಗಿದ್ದು, ಪ್ರತೀ ಮಳೆಗಾಲದಲ್ಲೂ ಈ ಸೇತುವೆ ಮುಳುಗಡೆಯಾಗುವುದರಿಂದ ಮಳೆಗಾಲದ ಸಂದರ್ಭಗಳಲ್ಲಿ ಸೇತುವೆ ಮುಳುಗಡೆಯಾದಾಗ ಈ ಭಾಗದ ಜನರು ತಮ್ಮ ವಿವಿಧ ಕೆಲಸ-ಕಾರ್ಯಗಳಿಗಾಗಿ ಪೇಟೆ-ಪಟ್ಟಣಗಳಿಗೆ ಹಾಗೂ ಗ್ರಾಮ ಪಂಚಾಯತ್ ಕೇಂದ್ರಕ್ಕೆ ತೆರಳಲು ಅಸಾಧ್ಯವಾಗುತ್ತಿದ್ದು, ಕಲ್ಮಕಾರು ಭಾಗದಿಂದ ಕೊಲ್ಲಮೊಗ್ರು ಭಾಗಕ್ಕೆ ತೆರಳುವ ಸಂಪರ್ಕವೂ ಕಡಿತಗೊಳ್ಳುತ್ತದೆ. ಅಷ್ಟೇ ಅಲ್ಲದೇ ಜೋರಾಗಿ ಮಳೆ ಬಂದ ಸಂದರ್ಭದಲ್ಲಿ ನದಿಯಲ್ಲಿ ನೀರು ಉಕ್ಕಿ ಹರಿಯುವುದರಿಂದ ಕೊಲ್ಲಮೊಗ್ರು ಪೇಟೆಯ ಭಾಗವೂ ಜಲಾವೃತಗೊಳ್ಳುವುದಲ್ಲದೇ ಸಮೀಪದ ತೋಟ ಹಾಗೂ ಮನೆಗಳಿಗೆ ನೀರು ನುಗ್ಗುವ ಆತಂಕವೂ ಸ್ಥಳೀಯರಲ್ಲಿ ಮನೆಮಾಡುತ್ತದೆ. ಪ್ರತೀ ಬಾರಿ ಜೋರಾಗಿ ಮಳೆ ಬಂದಾಗ ಸೇತುವೆ ಮುಳುಗಡೆಯಾಗಿ ಇದೀಗ ಸೇತುವೆಯ ಎರಡೂ ಬದಿಗಳಲ್ಲಿ ಮಣ್ಣು ಕುಸಿದು ಸೇತುವೆ ಅಪಾಯಕಾರಿ ಸ್ಥಿತಿಯಲ್ಲಿದ್ದು, ಮುಂಬರುವ ದಿನಗಳಲ್ಲಿ ಬೃಹತ್ ವಾಹನಗಳ ಸಂಚಾರಕ್ಕೂ ಕಷ್ಟಕರವಾಗುವ ಪರಿಸ್ಥಿತಿ ಎದುರಾಗುವ ಆತಂಕವಿದ್ದು, ಇಲ್ಲಿ ಸುಸಜ್ಜಿತವಾದ ಸರ್ವಋತು ಸೇತುವೆ ನಿರ್ಮಾಣದ ಜೊತೆಗೆ ನದಿಯ ನೀರು ಪೇಟೆಗೆ ನುಗ್ಗದಂತೆ ತಡೆಗೋಡೆ ನಿರ್ಮಾಣ ಮಾಡಬೇಕೆಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ.
- Sunday
- November 10th, 2024