Ad Widget

ಕೇಂದ್ರ ಸರ್ಕಾರದಿಂದ ದ.ಕ. ಜಿಲ್ಲೆಗೆ ‘ಪಿಎಂ ಜನ್ ಮನ್’ ಯೋಜನೆಯಡಿ ಬುಡಕಟ್ಟು ಸಮುದಾಯ ಅಭ್ಯುದಯಕ್ಕೆ 10.32 ಕೋಟಿ ರೂ. ಬಿಡುಗಡೆ : ಸಂಸದ ಕ್ಯಾ. ಚೌಟ

ಸುಳ್ಯದ ಪಂಜಕ್ಕೂ ಪಿಎಂ ಜನ್ ಮನ್ ಅನುದಾನ ಬಳಕೆ

ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಯೋಜನೆಯಾದ ಪಿಎಂ ಜನ್ ಮನ್(ಪ್ರಧಾನಮಂತ್ರಿ ಜನ್ ಜಾತಿ ಆದಿವಾಸಿ ನ್ಯಾಯ್ ಮಹಾ ಅಭಿಯಾನ್) ಯೋಜನೆಯಡಿ ದಕ್ಷಿಣ ಕನ್ನಡ ಜಿಲ್ಲೆಗೆ ವಿವಿಧ ಅಭಿವೃದ್ಧಿ ಕಾಮಗಾರಿಗಾಗಿ ಕೇಂದ್ರ ಸರ್ಕಾರದಿಂದ ಒಟ್ಟು 10.32 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ತಿಳಿಸಿದ್ದಾರೆ. ಬುಡಕಟ್ಟು ಸಮುದಾಯವನ್ನು ಮುಖ್ಯ ವಾಹಿನಿಗೆ ತರುವ ಈ ಪಿಎಂ ಜನ್ ಮನ್ ಯೋಜನೆಯಡಿ 2024-25ನೇ ಸಾಲಿಗೆ ನಮ್ಮ ದಕ್ಷಿಣ ಕನ್ನಡ ಜಿಲ್ಲೆಯನ್ನು ಗುರುತಿಸಿ ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯವು ಈ ಅನುದಾನವನ್ನು ನೀಡಿದೆ. ಈ ಹಿನ್ನಲೆಯಲ್ಲಿ ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವರಾದ ಜುಯಲ್ ಓರಂ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದ್ದಾರೆ. ಕೇಂದ್ರ ಸರ್ಕಾರ ಬಿಡುಗಡೆಗೊಳಿಸಿರುವ ಒಟ್ಟು 10.32 ಕೋಟಿ ರೂ.ಗಳ ಅನುದಾನದ ಪೈಕಿ ಸುಮಾರು 7.80 ಕೋಟಿ ರೂ. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ರಾಜ್ಯ ಸರ್ಕಾರದ ಆಡಳಿತಾತ್ಮಕ ಅನುಮೋದನೆ ಬಾಕಿಯಿದೆ. ಹೀಗಿರುವಾಗ, ಆದ್ಯತೆ ಮೇರೆಗೆ ಆಡಳಿತಾತ್ಮಕ ಅನುಮೋದನೆ ನೀಡಿ ಕಾಮಗಾರಿ ತ್ವರಿತ ಅನುಷ್ಠಾನಗೊಳಿಸುವಂತೆ ಕೋರಿ ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವರು ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆಯಲಾಗಿದೆ ಎಂದಿದ್ದಾರೆ.

ಸುಳ್ಯದ ಪಂಜಕ್ಕೂ ಪಿಎಂ ಜನ್ ಮನ್ ಅನುದಾನ ಬಳಕೆ

ಪಿಎಂ ಜನ್ ಮನ್ ಯೋಜನೆಯಡಿ ಬೆಳ್ತಂಗಡಿ ತಾಲೂಕಿನ ಅಟ್ರಿಂಜೆಯಿಂದ-ಸುಲ್ಕೇರಿ ಸಂಪರ್ಕಿಸುವ ರಸ್ತೆ ಅಭಿವೃದ್ಧಿ(285.7 ಲಕ್ಷ ರೂ.), ಅಟ್ರಿಂಜೆಯಿಂದ-ಸುಲ್ಕೇರಿ ಸಂಪರ್ಕಿಸುವ ರಸ್ತೆ ಸೇತುವೆ ನಿರ್ಮಾಣ(267.00 ಲಕ್ಷ ರೂ.), ಪುತ್ತೂರು ತಾಲೂಕಿನ ಹಳೆನೀರಂಕಿ ಗ್ರಾಮದ ಪರಾಕಲು ಎಸ್.ಟಿ ಕಾಲೋನಿ ರಸ್ತೆಯಿಂದ ಅಲಂಕಾರ್ ರಸ್ತೆ ಅಭಿವೃದ್ಧಿ(228.05 ಲಕ್ಷ ರೂ.), ಮಂಗಳೂರು ತಾಲೂಕಿನ ಮಧ್ಯ ಗ್ರಾಮ, ಬಂಟ್ವಾಳದ ಕೇಪು ಗ್ರಾಮ, ಬೆಳ್ತಂಗಡಿಯ ನಾರಾವಿ ಗ್ರಾಮ ಹಾಗೂ ಸುಳ್ಯದ ಪಂಜ ಗ್ರಾಮದಲ್ಲಿ ತಲಾ ಒಂದು ಬಹು ಉದ್ದೇಶಿತ ಕೇಂದ್ರ ನಿರ್ಮಾಣ(2.40 ಕೋಟಿ ರೂ.) ಹಾಗೂ ಮಂಗಳೂರು ತಾಲೂಕಿನ ಮಧ್ಯ ಗ್ರಾಮದಲ್ಲಿ ಅಂಗನವಾಡಿ ಕೇಂದ್ರದ ಕಟ್ಟಡ ನಿರ್ಮಾಣ(12 ಲಕ್ಷ ರೂ.) ಸೇರಿ ಕೇಂದ್ರವು ಒಟ್ಟು 10.32 ಕೋಟಿ ವೆಚ್ಚದ ಕಾಮಗಾರಿಗಳಿಗೆ ಅನುಮೋದನೆ ನೀಡಿದೆ ಎಂದು ಕ್ಯಾ. ಚೌಟ ವಿವರಿಸಿದ್ದಾರೆ.

*ಪಿಎಂ ಜನ್ ಮನ್ ಯೋಜನೆ ಅಂದರೆ ಏನು ?*ಬುಡಕಟ್ಟು ಸಮುದಾಯಗಳನ್ನು ಮುಖ್ಯ ವಾಹಿನಿಗೆ ತರುವ ಗುರಿ ಹೊಂದಿರುವ ಕೇಂದ್ರ ಸರ್ಕಾರದ ಯೋಜನೆಯೇ ಪಿಎಂ ಜನ್ ಮನ್ ಯೋಜನೆ. ಬುಡಕಟ್ಟು ವ್ಯವಹಾರಗಳ ಸಚಿವಾಲಯವು ರಾಜ್ಯ ಸರ್ಕಾರ ಮತ್ತು ಪಿವಿಟಿಜಿ ಸಮುದಾಯಗಳ ಸಹಯೋಗದೊಂದಿಗೆ ಈ ಯೋಜನೆ ಜಾರಿಗೊಳಿಸುತ್ತದೆ. ಈ ಯೋಜನೆಯು 9 ಸಚಿವಾಲಯಗಳ ಮೇಲ್ವಿಚಾರಣೆಯ 11 ಅಂಶಗಳ ಮೇಲೆ ಗಮನ ಕೇಂದ್ರೀಕರಿಸುತ್ತದೆ. ಸುರಕ್ಷಿತ ವಸತಿ, ಶುದ್ಧ ಕುಡಿಯುವ ನೀರು, ಸುಧಾರಿತ ಆರೋಗ್ಯ, ಶಿಕ್ಷಣ ವ್ಯವಸ್ಥೆ , ಪೌಷ್ಠಿಕಾಂಶಯುಕ್ತ ಆಹಾರ ಪೂರೈಕೆ, ದೂರಸಂಪರ್ಕ ಮತ್ತು ರಸ್ತೆ ಸಂಪರ್ಕ ಜೊತೆಗೆ ಸುಸ್ಥಿರ ಜೀವನೋಪಾಯಕ್ಕಾಗಿ ಅವಕಾಶ ಕಲ್ಪಿಸಲು ಹಾಗೂ ಸೌರ ವಿದ್ಯುತ್ ಅಳವಡಿಕೆಗೆ ಪಿಎಂ ಜನ್ ಮನ್ ಯೋಜನೆ ಅನುದಾನ ಸದ್ಬಳಕೆ ಮಾಡಲಾಗುತ್ತದೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!