ಹರಿಹರಪಲ್ಲತ್ತಡ್ಕ : ಹರಿಹರ ಪಲ್ಲತ್ತಡ್ಕದ ಕಾಲಾನಿ ನಿವಾಸಿ ರವಿ ಎಂಬವರ ಮನೆ ಮೇಲೆ ಕಳೆದ ರಾತ್ರಿ ಮರ ಬಿದ್ದು ಸಂಪೂರ್ಣ ಹಾನಿಗೊಂಡಿದೆ. ಮನೆಯಲ್ಲಿದ್ದವರಿಗೆ ಗಾಯಗಳಾಗಿದ್ದು ಇದೀಗ ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಮನೆಯಲ್ಲಿದ್ದ ಐತ್ತಾ, ಮಾಲತಿ, ರವಿ, ಶೇಖರ್, ಗುರುವ, ಆದರ್ಶ್ ಸುಳ್ಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಇನ್ನೋರ್ವ ಪುತ್ರಿ ಯಕ್ಷಿತಾರವರು ಅಲ್ಪ ಗಾಯಗೊಂಡು ಮನೆಯಲ್ಲೆ ಇದ್ದಾರೆ ಎಂದು ತಿಳಿದುಬಂದಿದೆ.
ನಾವು ಈ ಹಿಂದೆಯೇ ಹಲವು ಭಾರಿ ಮರಗಳನ್ನು ತೆರವುಗೊಳಿಸಲು ಆಗ್ರಹಿಸಿದ್ದರು ಸ್ಥಳೀಯ ಆಡಳಿತ ಎಚ್ಷೆತ್ತುಕೊಳ್ಳದೇ ಇದ್ದು ಈ ದುರ್ಘಟನೆಗೆ ಕಾರಣವಾಗಿದೆ ಎಂದು ಮನೆಯವರು ಹೇಳುತ್ತಿದ್ದಾರೆ. ಸ್ಥಳೀಯರಾದ ವಿಶ್ವನಾಥ್ ಮುಂಡೋಡಿ ಎಂಬುವವರು ಈ ಘಟನೆ ಬಗ್ಗೆ ಮಾತನಾಡಿ ಸ್ಥಳೀಯ ಗ್ರಾ.ಪಂ ಅಧಿಕಾರಿಗಳು ಅಥವಾ ಜನಪ್ರತಿನಿಧಿಗಳು ಸೌಜನ್ಯಕ್ಕಾದರೂ ಭೇಟಿ ನೀಡಿ ನೀಡಿ ಆರೋಗ್ಯ ವಿಚಾರಣೆ ನಡೆಸಿಲ್ಲ. ಅಲ್ಲದೇ ಇದು ಅರಣ್ಯ ಇಲಾಖೆ ಹಾಗೂ ಪಂಚಾಯತ್ ರವರ ಬೇಜವಾಬ್ದಾರಿಯಾಗಿದೆ. ಮನೆಯ ಮೇಲೆ ಮರ ಬಿದ್ದ ಸಂದರ್ಭದಲ್ಲಿ ವಿದ್ಯುತ್ ತಂತಿಗಳು ಕೂಡ ಕಡಿತಗೊಂಡಿದ್ದು, ಆಫ್ ಮಾಡಿಸಲು ಕರೆ ಮಾಡಿದಾಗ ಅವರು ಕರೆ ಸ್ವೀಕರಿಸದೇ ಇಂದು ಮುಂಜಾನೆ ವರದಿಗಳು ಬಂದ ಬಳಿಕ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ ಎಂದು ಹೇಳಿದರು.
ಪುತ್ತೂರು ವಿಭಾಗಿಯ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಲಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.