ಗುತ್ತಿಗಾರು ಸಮೀಪದ ಮೊಗ್ರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು 5 ವರ್ಷಗಳು ಪ್ರಭಾರ ಮುಖ್ಯ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿದ್ದ ಶ್ರೀ ಪ್ರಮೋದ್ ಕೆ ಬಿ ಅವರಿಗೆ ಮೈಸೂರು ವಿಶ್ವವಿದ್ಯಾನಿಲಯ ಡಾಕ್ಟರೇಟ್ ಪದವಿ ಘೋಷಿಸಿದೆ. ಇವರು ಮೈಸೂರಿನ ಮಾನಸ ಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕನ್ನಡ ಸಾಹಿತ್ಯದಲ್ಲಿ ಎಂ. ಎ ಪದವಿಯನ್ನು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ ಹೊಂದಿ, 2017 ರಿಂದ “ಹೊಸಗನ್ನಡ ಕಾವ್ಯದಲ್ಲಿ ದೇವರ ಗ್ರಹಿಕೆ” ಎಂಬ ವಿಷಯದ ಮೇಲೆ ಸಂಶೋಧನೆ ಕೈಗೊಂಡಿದ್ದರು. ಇವರ ಸಂಶೋಧನೆಗೆ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಮೊತ್ತ ಮೊದಲ ದಲಿತ ಆತ್ಮಕಥೆಯನ್ನು ನೀಡಿ ಖ್ಯಾತನಾಮರಾದ ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರೂ ಆದ ಪ್ರೊ. ಅರವಿಂದ ಮಾಲಗತ್ತಿ ಮಾರ್ಗದರ್ಶಕರಾಗಿದ್ದರು. ಪ್ರಮೋದ್ ಕೆ ಬಿ ಅವರ ಈ ಸಾಧನೆಗೆ ಸುಳ್ಯ ತಾಲೂಕಿನ ಅವರ ಆತ್ಮೀಯ ಶಿಕ್ಷಕ ವೃಂದ, ಅವರು ಸೇವೆ ಸಲ್ಲಿಸಿದ್ದ ಶಾಲೆಯ ಎಸ್ಡಿಎಂಸಿ ವೃಂದ ಸಂತಸ ವ್ಯಕ್ತಪಡಿಸಿವೆ.
ಶ್ರೀ ಪ್ರಮೋದ್ ಕೆ ಬಿ ಅವರು ಪ್ರಸ್ತುತ ಮೈಸೂರು ಜಿಲ್ಲೆಯ ಕೆ ಆರ್ ನಗರ ತಾಲೂಕಿನ ಪಶುಪತಿ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
- Thursday
- November 21st, 2024