ಸುಳ್ಯ: ಸುಳ್ಯ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ಸರಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕು. ಭಾಗೀರಥಿ ಮುರುಳ್ಯ ಮಾತನಾಡುತ್ತಾ ನಮ್ಮ ಗ್ರಾಮ, ಜಿಲ್ಲೆ, ರಾಜ್ಯ ಅಭಿವೃದ್ಧಿಯಾದರೆ ದೇಶ ಅಭಿವೃದ್ಧಿ ಆದಂತೆ. ಪ್ರತಿಯೊಬ್ಬರಿಗೂ ಸೂರು ಒದಗಿಸುವ ಸಂಕಲ್ಪ ಮಾಡುವ ಮೂಲಕ ಸ್ವಾತಂತ್ರ್ಯವನ್ನು ಅರ್ಥ ಪೂರ್ಣವಾಗಿ ಮಾಡಬೇಕು ಅಲ್ಲದೇ ಮೌಲ್ಯಯುತ ಶಿಕ್ಷಣ, ಆರೋಗ್ಯಕ್ಕೆ ಪ್ರಾಮುಖ್ಯತೆ ನೀಡಬೇಕು ಎಂದು ಹೇಳಿದರು. ಪರಿಸರವನ್ನು ಉಳಿಸಲು ಪ್ರಧಾನಿಗಳ ಆಶಯದಂತೆ ಸ್ವಚ್ಛತೆಯನ್ನು ಕಾಪಾಡಲು ನಾವೆಲ್ಲರು ಆದ್ಯತೆ ನೀಡಬೇಕು. ಮನೆ ಇಲ್ಲದೇ ಜೋಪಡಿಯಲ್ಲಿ ವಾಸಿಸುತ್ತಿರುವವರಿಗೆ ಮನೆ ನಿರ್ಮಿಸಿ ಕೊಡುವಂತಾಗಬೇಕು ಇದಕ್ಕೆ ಅಧಿಕಾರಿಗಳು ಸಹಕಾರ ನೀಡಬೇಕು ಎಂದು ವಿನಂತಿಸಿದರು. ಪರಿಸರವನ್ನು ಉಳಿಸುವವರನ್ನು, ಗಿಡ ನೆಡುವವರನ್ನು ಗುರುತಿಸಿ ಮುಂದಿನ ದಿನಗಳಲ್ಲಿ ಗೌರವಿಸುವಂತಾಗಬೇಕು ಎಂದು ಅವರು ಹೇಳಿದರು.
ಮುಂದಿನ ತಲೆಮಾರಿನಲ್ಲಿ ದೇಶಪ್ರೇಮ ಬೆಳೆಸಲು ಸ್ವಾತಂತ್ರ್ಯ ದಿನಾಚರಣೆ ಪ್ರೇರಣೆಯಾಗಬೇಕು. ಎಲ್ಲಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ಮನೋಭಾವನೆ ಬೆಳೆಸುವ ಮೌಲ್ಯಯುತ ಶಿಕ್ಷಣ ನೀಡಬೇಕು ಎಂದು ಅವರು ಹೇಳಿದರು. ತಹಶೀಲ್ದಾರ್ ಜಿ.ಮಂಜುನಾಥ್ ಧ್ವಜಾರೋಹಣ ನೆರವೇರಿಸಿ ಗೌರವ ವಂದನೆ ಸ್ವೀಕರಿಸಿ ಸ್ವಾತಂತ್ರ್ಯದ ಸಂದೇಶ ನೀಡುತ್ತಾ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ಹೋರಾಟಗಾರರ ತ್ಯಾಗ ಬಲಿದಾನವನ್ನು ಗೌರವಪೂರ್ಣವಾಗಿ ಸ್ಮರಿಸುತ್ತೇವೆ. ಸ್ವಾತಂತ್ರ್ಯಾ ನಂತರ ಎಲ್ಲಾ ಕ್ಷೇತ್ರಗಳಲ್ಲಿ ಭಾರತ ಅದ್ಭುತ ಸಾಧನೆ ಮಾಡಿದೆ. ಭೂಮಿ ಹಾಗೂ ಪರಿಸರವನ್ನು ಉಳಿಸುವ ಮೂಲಕ ಭಾರತವನ್ನು ಉಳಿಸುವುದು ನಮ್ಮ ಆದ್ಯ ಕರ್ತವ್ಯವಾಗಬೇಕು ಎಂದು ಹೇಳಿದರು. ಸಮಾರಂಭದಲ್ಲಿ ಅಥಿತಿಗಳಾಗಿ ಆಗಮಿಸಿದ್ದ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಜಿ, ಅಕಾಡೆಮಿ ಆಫ್ ಲಿವರಲ್ ಎಜ್ಯುಕೇಷನ್‌ನ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ, ನ.ಪಂ.ಸದಸ್ಯ ಎಂ.ವೆಂಕಪ್ಪ ಗೌಡ ಸ್ವಾತಂತ್ರ್ಯತೋತ್ಸವದ ಶುಭ ಹಾರೈಸಿದರು. ದೇಶ ಸೇವೆಗೈದ ಮಾಜಿ ಸೈನಿಕರಾದ ಕೆ.ಪಿ.ಜಗದೀಶ್, ಬಿ.ಕೆ.ಮಾಧವ, ರಾಮದಾಸ್ ಶೇಟ್, ಹಿರಿಯ ಪತ್ರಕರ್ತರಾದ ಸುರೇಶ್ ಬೆಳಗಜೆ, ಗಂಗಾಧರ ಮಟ್ಟಿ, ಎನ್.ಎ.ಅಬ್ದುಲ್ಲಾ , ಹಾಗೂ ಸರಕಾರಿ ಶಾಲೆಗಳಲ್ಲಿ ಅತೀ ಹೆಚ್ಚಿನ ಅಂಕ ಪಡೆದ ವಿಧ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಿಸಿ ಗೌರವಿಸಲಾಯಿತು ಸಭಾ ಕಾರ್ಯಕ್ರಮದಲ್ಲಿ ಎಸ್‌ಐ ಈರಯ್ಯ ದೂಂತೂರು, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಗುರುಪ್ರಸಾದ್, ನ.ಪಂ. ಮುಖ್ಯಾಧಿಕಾರಿ ಸುಧಾಕರ ಎಂ.ಎಚ್, ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಮೋಹನ ಗೌಡ, ಉಪ ಪ್ರಾಂಶುಪಾಲ ಪ್ರಕಾಶ್ ಮೂಡಿತ್ತಾಯ, ನಗರ ಪಂಚಾಯತ್ ಸದಸ್ಯರಾದ ವಿನಯಕುಮಾರ್ ಕಂದಡ್ಕ, ಶರೀಫ್ ಕಂಠಿ, ರಾಜು ಪಂಡಿತ್, ಸಿದ್ದಿಕ್ ಕೊಕ್ಕೊ, ಶಶಿಕಲಾ ನೀರಬಿದಿರೆ, ಕಿಶೋರಿ ಶೇಟ್, ಪೂಜಿತಾ, ಶಿಲ್ಪಾ ಮತ್ತಿತರರು ಉಪಸ್ಥಿತರಿದ್ದರು.
ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಸ್ವಾಗತಿಸಿ, ಕ್ಷೇತ್ರ ಶಿಕ್ಷಣಾಧಿಕಾರಿ ಶೀತಲ್.ಯು.ಕೆ ವಂದಿಸಿದರು. ಚಂದ್ರಮತಿ ಕೆ.ಕಾರ್ಯಕ್ರಮ ನಿರೂಪಿಸಿದರು.
- Saturday
- November 23rd, 2024