ಸುಳ್ಯ ಕೃಷಿ ಇಲಾಖೆಯ ಕಟ್ಟಡವನ್ನು ಹಲವಾರು ವರ್ಷಗಳಿಂದ ಗ್ರಾಮ ಪಂಚಾಯತ್ ಬಾಡಿಗೆಗೆ ನೀಡಿದ್ದು ಇದರ ಕುರಿತಾಗಿ ಕೃಷಿ ನಿರ್ದೇಶಕರು ಅಜ್ಜಾವರಕ್ಕೆ ತೆರಳಿದ ಸಂದರ್ಭದಲ್ಲಿ ಗಮನಕ್ಕೆ ಬಂದು ಪರಿಶೀಲನೆ ನಡೆಸಿದಾಗ ಅಕ್ರಮ ಬಯಲಾಗಿದೆ.
ಅಜ್ಜಾವರದ ಸ.ಹಿ.ಪ್ರಾ.ಶಾಲಾ ಆಟದ ಮೈದಾನದ ಬದಿಯಲ್ಲಿ ಕೃಷಿ ಇಲಾಖೆಗೆ ಸಂಬಂದಿಸಿದ ಸುಮಾರು 10 ಸೆಂಟ್ಸ್ ಸ್ಥಳದಲ್ಲಿ ಕೃಷಿ ಇಲಾಖೆಯ ಕಟ್ಟಡವಿದ್ದು ಇದನ್ನು ಕೃಷಿ ಇಲಾಖೆಯ ಗಮನಕ್ಕೆ ತಾರದೇ ಹಳೆಯ ಬೀಗವನ್ನು ಒಡೆದು ಬೇರೆ ವ್ಯಕ್ತಿಗಳಿಗೆ ಬಾಡಿಗೆ ರೂಪದಲ್ಲಿ ನೀಡಿದ್ದರು. ಇದರ ಕುರಿತಾಗಿ 2023 ರಲ್ಲಿ ಗ್ರಾಮ ಸಭೆಯಲ್ಲಿ ಇದರ ಬಾಡಿಗೆಯನ್ನು ಪಂಚಾಯತ್ ಸಂಗ್ರಹಿಸುವ ಕುರಿತಾಗಿ ಚರ್ಚಿಸಿದ್ದು ಬಳಿಕ ಆ ಕಟ್ಟಡದ ಮೇಲ್ಚಾವಣಿ ಶಿಥಿಲಾವಸ್ಥೆಯಲ್ಲಿದ್ದು ಇದನ್ನು ದುರಸ್ತಿ ಪಡಿಸುವಂತೆ ಅಲ್ಲದೇ ಹಳೆಯ ಕಟ್ಟಡವನ್ನು ಉಳಿಸುವ ದೃಷ್ಟಿಯಲ್ಲಿ ಕೃಷಿ ಇಲಾಖೆಗೆ ಪತ್ರ ಬರೆಯಲು ಗ್ರಾಮ ಸಭೆಯಲ್ಲಿ ನಿರ್ಣಯಿಸಲಾಗಿತ್ತು. ಆದರೆ ಗ್ರಾ.ಪಂ ಯಾವುದೇ ರೀತಿಯಲ್ಲಿ ಪತ್ರಗಳನ್ನು ಬರೆಯದೇ ಈ ಕೃಷಿ ಇಲಾಖೆಯ ಕಟ್ಟಡದ ಕುರಿತ ಯಾವುದೇ ಮಾಹಿತಿ ನೀಡದೇ ಅದರ ದುರಸ್ತಿ ಪಡಿಸದೇ ಮತ್ತೆ ಕಟ್ಟಡವನ್ನು ಬಾಡಿಗೆಗೆ ನೀಡಿ ಹಣ ಸಂಗ್ರಹಿಸುತ್ತಿತ್ತು. ಅಜ್ಜಾವರಕ್ಕೆ ಬಂದಿದ್ದ ಸುಳ್ಯ ಕೃಷಿ ನಿರ್ದೇಶಕರ ಗಮನಕ್ಕೆ ಈ ವಿಷಯ ಬಂದ ಕೂಡಲೇ ಇದರ ಗಂಭೀರತೆ ಅರಿತ ಕೃಷಿ ನಿರ್ದೇಶಕರು ಗ್ರಾ.ಪಂ ತೆರಳಿ ಪ್ರಶ್ನಿಸಿದರು. ಈ ಸಂದರ್ಭದಲ್ಲಿ 45 ಸಾವಿರ ರೂಪಾಯಿಗಳು ಇದೆ ಬಾಡಿಗೆಯ ಹಣ, ಅದನ್ನು ಈಗಲೇ ನೀಡುತ್ತೆನೆ ಎಂದು ಪಿಡಿಒ ಉತ್ತರಿಸಿದ್ದರು. ಈ ರೀತಿಯಲ್ಲಿ ಹಣವನ್ನು ಪಡೆದುಕೊಳ್ಳುವುದು ಅಸಾಧ್ಯವಾಗಿದೆ ಅಲ್ಲದೇ ಅವರು ಕಲೆಕ್ಷನ್ ಮಾಡಿದ ಹಣದ ಮೂಲವನ್ನು ಸರಕಾರಕ್ಕೆ ತಿಳಿಸಬೇಕಿತ್ತು. ಅಲ್ಲದೇ ಯಾವ ಖಾತೆಯಲ್ಲಿ ಹಣವನ್ನು ಹಾಕಲಾಗಿದೆ ಮತ್ತು ಅದು ಸರಕಾರದ ಕ್ಯಾಶ್ ಬುಕ್ ನಲ್ಲಿ ನಮುದಾಗಿದೆಯೇ ಎಂದು ತೋರಿಸಬೇಕಿರುತ್ತದೆ ಎಂದು ಹೇಳಿದರಲ್ಲದೆ ಈ ಕಟ್ಟಡವನ್ನು ಸಂಪೂರ್ಣವಾಗಿ ಉಳಿಸುವ ಜವಾಬ್ದಾರಿ ನಮ್ಮ ಮೇಲಿದೆ ಮತ್ತು ಅದರ ಬಾಡಿಗೆ ಪಡೆದಿರುವುದು ಸರಿಯಾದ ಕ್ರಮವಲ್ಲ ಎಂದು ಪಿಡಿಓ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಅಜ್ಜಾವರ ಗ್ರಾ.ಪಂ ಅಭಿವೃದ್ಧಿ ಅಧಿಕಾರಿಯು ಒಂದು ಇಲಾಖೆಯ ಕಟ್ಟಡವನ್ನೆ ಈ ರೀತಿಯಲ್ಲಿ ದುರ್ಬಳಕೆ ಮಾಡಲಾಗಿದ್ದು ಇಂತಹ ಇನ್ನೆಷ್ಟು ಪ್ರಕರಣಗಳು ಗೋಚರಿಸದೇ ಇರಬಹುದು ಈ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯ ವಿರುದ್ದ ಪಂಚಾಯತ್ ರಾಜ್ ಇಲಾಖೆಯು ಸಂಪೂರ್ಣ ತನಿಖೆಯನ್ನು ನಡೆಸಿ ಸೂಕ್ತ ರೀತಿಯಲ್ಲಿ ಕ್ರಮ ಕೈಗೊಳ್ಳುವರೇ ಎಂದು ಕಾದು ನೋಡಬೇಕಿದೆ.
ಈ ಬಗ್ಗೆ ಅಮರ ಸುದ್ದಿ ಜತೆ ಮಾತನಾಡಿದ ಅವರು ಅಜ್ಜಾವರಕ್ಕೆ ತೆರಳಿದ ಸಂದರ್ಭದಲ್ಲಿ ಈ ಅಕ್ರಮ ಬಯಲಾಗಿದ್ದು, ಈ ಕುರಿತು ಗ್ರಾ.ಪಂ ತೆರಳಿ ವಿಚಾರಿಸಿದ್ದು ಕೆಲ ದಿನಗಳಲ್ಲಿ ನಾನೇ ಖುದ್ದಾಗಿ ತೆರಳಿ ನೋಟಿಸ್ ನೀಡಲಿದ್ದು ಇದರ ಸಂಪೂರ್ಣ ಕಡತಗಳ ಮಾಹಿತಿ ಪಡೆಯಲಿದ್ದೇವೆ. ಸಂಪೂರ್ಣ ಕಡತಗಳನನ್ನು ಕೇಳಿದ್ದು ಅಲ್ಲದೇ ಈ ರೀತಿಯಲ್ಲಿ ಅಕ್ರಮವಾಗಿ ಬಾಡಿಗೆ ನೀಡಲು ಅವರಿಗೆ ಯಾವ ಅಧಿಕಾರ ಇದೆ ಮತ್ತು ಇದು ಸರಿಯಾದ ಕ್ರಮವಲ್ಲ ಇದರ ಕುರಿತಾಗಿ ನೋಟಿಸ್ ಜಾರಿಗೊಳಿಸಿ ಕ್ರಮ ಜರುಗಿಸಲಾಗುವುದು ಎಂದು ಗುರುಪ್ರಸಾದ್ ಎಂ ಎಸ್ ತಿಳಿಸಿದ್ದಾರೆ.