ಕಾಮಗಾರಿಯ ಬಿಲ್ ನಲ್ಲಿ ಕಡಿತಗೊಳಿಸಿರುವುದನ್ನು ಖಂಡಿಸಿ ಬ್ರೇಕ್ ಡೌನ್ ಕಾಮಗಾರಿಯನ್ನು ಸೋಮವಾರದಿಂದ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಸುಳ್ಯ ತಾಲೂಕು ಅಧ್ಯಕ್ಷರಾದ ಸೋಮಶೇಖರ್ ಪೈಕ ಹೇಳಿದರು.
ಅವರು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರಾದ ನಾವು ಮೆಸ್ಕಾಂ ಜೊತೆಗೂಡಿ ಹಲವು ವರ್ಷಗಳಿಂದ ತುರ್ತು ಕಾಮಗಾರಿಗಳಲ್ಲಿ ಒಂದಾದ ಬ್ರೇಕ್ ಡೌನ್ ಕಾಮಗಾರಿಗಳನ್ನು ಸಾರ್ವಜನಿಕರಿಗೆ ತೊಂದರೆಯಾಗದಂತೆ ಅತೀ ಶೀಘ್ರದಲ್ಲಿ ನಡೆಸಿಕೊಂಡು ಬಂದಿರುತ್ತೇವೆ. ಆದರೆ ಇತ್ತೀಚಿನ ದಿನಗಳಲ್ಲಿ ಮೆಸ್ಕಾಂ ನೀಡುತ್ತಿದ್ದ ಬ್ರೇಕ್ ಡೌನ್ ಕಾಮಗಾರಿ ದರದಲ್ಲಿ ಬಾರಿ ಇಳಿಕೆಯಾಗಿದ್ದು, ಹಾಗೂ ಈ ಹಿಂದೆ ಬ್ರೇಕ್ ಡೌನ್ ಕಾಮಗಾರಿಗಳ ಪ್ರಾದೇಶಿಕ ಭತ್ಯೆ ಸಾಗಾಣಿಕಾ ವೆಚ್ಚ ಹಾಗೂ ಬ್ರೇಕ್ ಡೌನ್ ಭತ್ಯೆಗಳನ್ನು ರದ್ದುಗೊಳಿಸಿ, ಕೇವಲ 12% ಭತ್ಯೆಯನ್ನು ನೀಡುತ್ತಿದ್ದು ಇದರಿಂದ ವಿದ್ಯುತ್ ಗುತ್ತಿಗೆದಾರರು ಭಾರಿ ನಷ್ಟ ಅನುಭವಿಸುತ್ತಿದ್ದೇವೆ. ಈ ಹಿಂದೆಯು ಇದರ ಬಗ್ಗೆ ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಮಾಡಿದ್ದು ಯಾವುದೇ ರೀತಿಯ ಕ್ರಮಗಳನ್ನು ಕೈಗೊಂಡಿರುವುದಿಲ್ಲ. ಅದುದ್ದರಿಂದ ವಿದ್ಯುತ್ ಗುತ್ತಿಗೆದಾರರಾದ ನಾವು ಬ್ರೇಕ್ ಡೌನ್ ಕೆಲಸಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲು ನಿರ್ಧರಿಸಿರುತ್ತೇವೆ. ಇದರಿಂದಾಗುವ ಸಾರ್ವಜನಿಕ ತೊಂದರೆಗಳಿಗೆ ನಾವು ಜವಾಬ್ದಾರರಾಗಿರುವುದಿಲ್ಲ ಎಂದು ತಿಳಿಸಿದರು.
ಅಲ್ಲದೇ ಬ್ರೇಕ್ ಡೌನ್ ಕಾಮಗಾರಿಗಳಲ್ಲಿ ಈ ಹಿಂದಿನಂತೆಯೇ ಪ್ರಾದೇಶಿಕ ಭತ್ಯೆ, ಸಾಗಾಣಿಕಾ ವೆಚ್ಚ ಹಾಗೂ ಬ್ರೇಕ್ ಡೌನ್ ಭತ್ಯೆಗಳನ್ನು ನೀಡಿದ್ದಲ್ಲಿ ಮಾತ್ರ ಕೆಲಸಗಳನ್ನು ಮುಂದುವರಿಸಲು ನಾವು ಬದ್ಧರಾಗಿರುತ್ತೇವೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾಯಿಲಪ್ಪ ಸಂಕೇಶ , ಮಧುಕಿರಣ್ , ರಾಮಜೋಯಿಸ , ಧನಂಜಯ ಬಳ್ಪ , ಹರಿಶ್ಚಂದ್ರ ಕೇಪಳಕಜೆ, ಚಿದಾನಂದ ಮಾಪಲಕಜೆ, ಶ್ರೀಧರ್ , ಸತ್ಯನಾರಾಯಣ ಸೇರಿದಂತೆ ಸಂಘದ ಸದಸ್ಯರು ಉಪಸ್ಥಿತರಿದ್ದರು.
- Tuesday
- December 3rd, 2024