ಕಲ್ಮಶರಹಿತ ಮನಸ್ಸು ಮತ್ತು ಯೋಚನೆಗಳು ಇದ್ದಾಗ ಬದುಕು ಸ್ವಾಸ್ಥ್ಯ ಭರಿತವಾಗುತ್ತದೆ. ಅಂತಹ ಸ್ವಾಸ್ಥ್ಯ ಭರಿತ ಸಮಾಜ ನಿರ್ಮಾಣಕ್ಕಾಗಿ ಭಾರತೀಯ ಸಂಸ್ಕೃತಿಯ ಮೌಲ್ಯವನ್ನು ಉಳಿಸಿಕೊಳ್ಳುವ ಶಿಕ್ಷಣದ ಅಗತ್ಯವಿದೆ. ವಿದ್ಯಾ ಭಾರತಿಯ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಅಂತಹ ಸಂಸ್ಕಾರ ಬೆಳೆಸುವ ಶಿಕ್ಷಣವನ್ನು ನೀಡುತ್ತಾ ಬಂದಿರುವುದು ಶ್ಲಾಘನೀಯ ಎಂದು ಸುಳ್ಯ ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಡಾ. ಲೀಲಾಧರ ಡಿ.ವಿ. ಹೇಳಿದರು. ಅವರು ಶನಿವಾರ ಜಾಲ್ಸೂರಿನ ವಿನೋಬಾನಗರ ವಿವೇಕಾನಂದ ವಿದ್ಯಾಸಂಸ್ಥೆಗಳ ಆಶ್ರಯದಲ್ಲಿ ನಡೆದ ವಿದ್ಯಾಭಾರತಿ ಕರ್ನಾಟಕ, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ವಿಭಾಗದ ವತಿಯಿಂದ ನಡೆದ ಜಿಲ್ಲಾ ಶೈಕ್ಷಣಿಕ ಸಹಮಿಲನ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಚೊಕ್ಕಾಡಿ ಶ್ರೀ ಸತ್ಯಸಾಯಿ ವಿದ್ಯಾಸಂಸ್ಥೆಗಳ ಸಂಚಾಲಕ ತೇಜಪ್ರಕಾಶ್ ಬುಡ್ಲೆಗುತ್ತು ಅವರು ಮಾತನಾಡಿ, ವಿದ್ಯಾಭಾರತಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ವಿಭಿನ್ನವಾದ ಗುಣಾತ್ಮಕ ಮನೋಭಾವವನ್ನು ಬೆಳೆಸಿಕೊಳ್ಳುತ್ತಾರೆ. ನಮ್ಮ ಸಂಸ್ಕೃತಿಯ ಶಿಕ್ಷಣ ನೀಡಬೇಕಾದದ್ದು ಇಂದಿನ ದಿನಗಳಲ್ಲಿ ಮುಖ್ಯ ಎಂದರು. ಜಿಲ್ಲೆಯ ವಿದ್ಯಾಭಾರತಿ ಶಿಕ್ಷಣ ಸಂಸ್ಥೆಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ಕ್ರೀಡೆಯಲ್ಲಿ ರಾಷ್ಟ್ರ, ರಾಜ್ಯ ಮತ್ತು ಜಿಲ್ಲಾಮಟ್ಟಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವಿನೋಬಾ ನಗರ ವಿವೇಕಾನಂದ ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷರಾದ ನ. ಸೀತಾರಾಮ ಸಭಾಧ್ಯಕ್ಷತೆ ವಹಿಸಿದ್ದರು. ವಿದ್ಯಾ ಭಾರತಿ ಕರ್ನಾಟಕ ದ. ಕ. ಜಿಲ್ಲೆಯ ಪುತ್ತೂರು ವಿಭಾಗದ ಅಧ್ಯಕ್ಷರಾದ ಲೋಕಯ್ಯ ಡಿ. ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯಾಭಾರತಿಯ ಶಿಕ್ಷಣ ಸಂಸ್ಥೆಗಳು ಇತರ ಶಿಕ್ಷಣ ಸಂಸ್ಥೆಗಳಿಗೆ ಮಾದರಿಯಾಗಬೇಕು ಎಂದು ಹೇಳಿದರು. ವಿದ್ಯಾಸಂಸ್ಥೆಗಳ ಆಡಳಿತ ಮಂಡಳಿ ಕೋಶಾಧಿಕಾರಿ ಸುಧಾಕರ್ ಕಾಮತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾ ಭಾರತಿ ಕರ್ನಾಟಕ ಇದರ ಪ್ರಾಂತ ಉಪಾಧ್ಯಕ್ಷರಾದ ಶ್ರೀಪತಿ ಅವರು ಮೌಲ್ಯಯುತ ಶಿಕ್ಷಣದ ಕುರಿತು ಉಪನ್ಯಾಸ ನೀಡಿದರು. ಸಂಸ್ಥೆಯ ಅಧ್ಯಕ್ಷ ನ. ಸೀತಾರಾಮ ಸ್ವಾಗತಿಸಿದರು. ವಿವೇಕಾನಂದ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಗಿರೀಶ್ ಕುಮಾರ್ ವಂದಿಸಿದರು. ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಜಯಪ್ರಸಾದ್ ಕಾರಿಂಜ ಹಾಗೂ ಇತರ ಶಿಕ್ಷಕರು ಕಾರ್ಯಕ್ರಮ ಸಂಯೋಜನೆಯಲ್ಲಿ ಸಹಕರಿಸಿದರು. ಶಿಕ್ಷಕ ಶಶಿಧರ್ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲೆಯ ವಿವಿಧ ಶಿಕ್ಷಣ ಸಂಸ್ಥೆಗಳಿಂದ ಸುಮಾರು 750ಕ್ಕೂ ಹೆಚ್ಚು ಮಂದಿ ಶಿಕ್ಷಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಭಾ ಕಾರ್ಯಕ್ರಮದ ಬಳಿಕ ಉಪನ್ಯಾಸ, ಗುಂಪು ಚರ್ಚೆ ಹಾಗೂ ಸಂವಾದ ಕಾರ್ಯಕ್ರಮಗಳು ಜರಗಿದವು.
- Monday
- November 11th, 2024