ಪೆರಾಜೆ:- ಪಿಕಪ್ ವಾಹನದಲ್ಲಿ ಹಿಂಸಾತ್ಮಕ ರೀತಿಯಲ್ಲಿ ಗೋವುಗಳನ್ನು ತುಂಬಿಸಿ ಕೇರಳ ರಾಜ್ಯಕ್ಕೆ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ಗೋವುಗಳನ್ನು ರಕ್ಷಿಸಿದ ಘಟನೆ ಮಡಿಕೇರಿ ಗ್ರಾಮಾಂತರ ವ್ಯಾಪ್ತಿಯ ಪೆರಾಜೆಯಲ್ಲಿ ನಡೆದಿದೆ. ಘಟನೆಯ ಬಳಿಕ ಪೋಲೀಸ್ ಇಲಾಖೆಗೆ ಮಾಹಿತಿ ನೀಡಿದ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರೊಬ್ಬರ ಪತ್ನಿಗೆ ವಾಟ್ಸಾಪ್ ಮೂಲಕ ಅವ್ಯಾಚ್ಯ ಪದಗಳಿಂದ ಬೈದು ಜೀವಬೆದರಿಕೆ ಹಾಕಿದ ಬಗ್ಗೆ ವರದಿಯಾಗಿದೆ. ಕುಂಬಳಚೇರಿ-ಕುಂದಲ್ಪಾಡಿ-ಕೂರ್ನಡ್ಕ ರಸ್ತೆಯ ಮೂಲಕ ಕೇರಳಕ್ಕೆ (ಕೆ.ಎ.12 ಬಿ 8020) ಪಿಕಪ್ ವಾಹನವೊಂದರಲ್ಲಿ 2 ಗೋವುಗಳನ್ನು ಜು.10 ರಂದು ರಾತ್ರಿ ಸಾಗಾಟ ಮಾಡಲಾಗುತ್ತಿತ್ತು. ಈ ಬಗ್ಗೆ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದು ಪೊಲೀಸರು ಕಾರ್ಯಾಚರಣೆ ನಡೆಸಿ ಜಾನುವಾರುಗಳ ರಕ್ಷಿಸಿದ್ದಾರೆ. ಕಾರ್ಯಚರಣೆಯಲ್ಲಿ ವಾಹನ ಹಾಗೂ ಚಾಲಕ ಕೇರಳದ ಕಲ್ಲಪಳ್ಳಿಯ ವಿನೋದ್(ಸುಳ್ಯದ ಕೇರ್ಪಳದಲ್ಲಿ ವಾಸವಿರುವ) ನನ್ನು ಪೋಲಿಸರು ವಶಕ್ಕೆ ಪಡೆದುಕೊಂಡಿದ್ದಾರೆ. ಪಿಕಪ್ ನಲ್ಲಿದ್ದ ಮತ್ತಿಬ್ಬರು ಆರೋಪಿಗಳಾದ
ಸುಳ್ಯದಲ್ಲಿ ವೆಲ್ಡಿಂಗ್ ಕೆಲಸ ನಿರ್ವಹಿಸುತ್ತಿರುವ ಪೆರಾಜೆಯ ಸಚಿನ್ ಮತ್ತು ನಿತಿನ್ ಅವರು ಪರಾರಿಯಾಗಿದ್ದರೆನ್ನಲಾಗಿದೆ. ಈ ಬಗ್ಗೆ ಮಡಿಕೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಕಾರ್ಯಚರಣೆಯಲ್ಲಿ ಮಡಿಕೇರಿ ಗ್ರಾಮಾಂತರ ಠಾಣೆಯ ಸಿಬ್ಬಂದಿಗಳಾದ ರಾಜೇಶ್.ಕೆ, ನವೀನ್ ಕುಮಾರ್ , ರವಿಕುಮಾರ್, ಬಸವರಾಜ್, ಪ್ರವೀಣ್ ಕುಮಾರ್ ಭಾಗವಹಿಸಿದ್ದರು.
ಮಹಿಳೆಗೆ ಬೆದರಿಕೆ – ಪೋಲೀಸ್ ಇಲಾಖೆಗೆ ಮಾಹಿತಿ ನೀಡಿದ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರೊಬ್ಬರ ಪತ್ನಿಗೆ ವಾಟ್ಸಪ್ ಮೂಲಕ ಅವ್ಯಾಚ್ಯ ಪದಗಳಿಂದ ಬೈದು ಜೀವಬೆದರಿಕೆ ಹಾಕಿದರೆನ್ನಲಾಗಿದೆ. ಈ ಬಗ್ಗೆ ಹಿಂದೂ ಸಂಘಟನೆಗಳಲ್ಲಿ ಗುರುರಿಸಿಕೊಂಡಿದ್ದ ಸಚಿನ್ ವಿರುದ್ಧ ಮಹಿಳೆ ದೂರು ನೀಡಿದ್ದಾರೆಂದು ತಿಳಿದುಬಂದಿದೆ.