ಪತ್ರಿಕೆಯಲ್ಲಿ ಸತ್ಯಾಸತ್ಯತೆ ಬರಬೇಕು – ಶಾಸಕಿ ಭಾಗೀರಥಿ ಮುರುಳ್ಯ
ಗ್ರಹಿಕೆಯ ಕೊರತೆಯಿಂದ ತಪ್ಪು ಸುದ್ದಿ ಪ್ರಕಟವಾಗದಂತೆ ಎಚ್ಚರಿಕೆ ವಹಿಸಿ – ಅಜ್ಜಮಾಡ ರಮೇಶ್ ಕುಟ್ಟಪ್ಪ
ಪ್ರಜಾಪ್ರಭುತ್ವದ ಎಲ್ಲ ಅಂಗಗಳಿಗೆ ಕನ್ನಡಿ ಹಿಡಿದು ಸರಿತಪ್ಪುಗಳನ್ನು ಎತ್ತಿ ತೋರಿಸಿ ಸಮಾಜ ತಿದ್ದುವ ಕಾರ್ಯದಲ್ಲಿ ತೊಡಗಿಕೊಂಡಿರುವ ಪತ್ರಿಕೆಗಳು ವರದಿ ಪ್ರಕಟಿಸುವ ವೇಳೆ ಸತ್ಯ, ಧರ್ಮ, ನ್ಯಾಯ, ಪತ್ರಿಕಾಧರ್ಮ ಅನಾವರಣವಾಗುವಂತಾಗಬೇಕು ಎಂದು ಸಂಸದ ಕ್ಯಾ. ಬೃಜೇಶ್ ಚೌಟ ಹೇಳಿದರು.
ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಗರದ ಕನ್ನಡ ಭವನದಲ್ಲಿ ಬುಧವಾರ ಆಯೋಜಿಸಲಾದ ಪತ್ರಿಕಾ ದಿನಾಚರಣೆ, ಸನ್ಮಾನ ಹಾಗೂ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರಸ್ತುತ ವಿಮರ್ಶೆಯ ಕಾಲಘಟ್ಟದಲ್ಲಿ ನಾವಿರುವ ಕಾರಣ, ಪತ್ರಿಕೆಗಳು ಸರಿ ತಪ್ಪುಗಳನ್ನು ಪರಾಮರ್ಶಿಸುವಂತಾಗಬೇಕಲ್ಲದೆ ಸಮಾಜಕ್ಕೆ ಸ್ಫೂರ್ತಿಯಾಗಬಲ್ಲ ವಿಚಾರತ್ತ ಬೆಳಕು ಚೆಲ್ಲಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ, ಪತ್ರಿಕೆಗಳು ಸತ್ಯಾಸತ್ಯತೆಯನ್ನು ಅರಿತು ವರದಿ ಮಾಡಿದಾಗ ಜನರು ಪತ್ರಿಕೆಗಳ ಮೇಲೆ ಇಟ್ಟಿರುವ ವಿಶ್ವಾಸ ವೃದ್ಧಿಯಾಗುತ್ತದೆ. ಪತ್ರಕರ್ತರಿಂದ ಗ್ರಾಮೀಣ ಭಾಗದಲ್ಲಿ ಗ್ರಾಮ ವಾಸ್ತವ್ಯ ಮಾಡುವ ಮೂಲಕ ಅಧಿಕಾರಿಗಳ ಕಣ್ಣು ತೆರೆಸುವ ಕೆಲಸ ಆಗಿದೆ ಎಂದರು.
.
‘ಗ್ರಹಿಕೆಯ ಕೊರತೆಯಿಂದ ತಪ್ಪು ಸುದ್ದಿ ಪ್ರಕಟವಾಗದಂತೆ ಎಚ್ಚರಿಕೆ ವಹಿಸಿ’
ಸಮಾರಂಭದಲ್ಲಿ ಪ್ರಧಾನ ಉಪನ್ಯಾಸ ನೀಡಲು ಆಗಮಿಸಿದ್ದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ, ಮಾಹಿತಿಯ ಕೊರತೆಯಿಂದ, ಗ್ರಹಿಕೆಯ ಕೊರತೆಯಿಂದ ಸುದ್ದಿಗಳು ತಪ್ಪಾಗಿ ಪ್ರಕಟವಾಗದಂತೆ ಮಾಧ್ಯಮಗಳು ಜಾಗ್ರತೆ ವಹಿಸಬೇಕು. ಹೀಗಾದಲ್ಲಿ ಸಮಾಜದ ಸ್ವಾಸ್ಥ್ಯ ಕೆಡುವಂತಹ ಸನ್ನಿವೇಶ ಬಂದೊದಬಹುದು. ಸುದ್ದಿ ಪ್ರಕಟದ ವೇಳೆ ಈ ನಿಟ್ಟಿನಲ್ಲಿ ವರದಿಗಾರರು ಸಾಕಷ್ಟು ಮುಂಜಾಗ್ರತೆ ವಹಿಸಬೇಕು. ಅವಕಾಶ, ಅಧಿಕಾರ, ಸ್ವಾರ್ಥಕ್ಕೆ ಮಹತ್ವ ಕೊಡುವ ಜನರೇ ಸಮಾಜದಲ್ಲಿ ತುಂಬಿದರೂ ಸಮುದಾಯದ ನಡುವೆ, ಧರ್ಮಗಳ ನಡುವೆ ಪ್ರೀತಿ ಸ್ಪುರಿಸುವ ಕೆಲಸದಲ್ಲಿ ಪತ್ರಿಕೆಗಳು ತೊಡಗಬೇಕಾದ ಅನಿವಾರ್ಯತೆ ಇದೆ. ಸಮಾಜ ಹೇಗೆ ಇದೆ ಹಾಗೆ ಮಾಧ್ಯಮ ಕೂಡ ಇದೆ. ಸಮಾಜಕ್ಕೆ ಬೇಕಾದ ಸುದ್ದಿ ನೀಡಬೇಕು ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಜೆ. ಕೆ ರೈ ದಂಪತಿಯನ್ನು ಸನ್ಮಾನಿಸಲಾಯಿತು. ಪತ್ರಿಕಾ ದಿನಾಚರಣೆ ಪ್ರಯುಕ್ತ ಪ್ರೌಢ ಹಾಗೂ ಪದವಿಪೂರ್ವ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾದ ಪ್ರಬಂಧ ಹಾಗೂ ಭಾಷಣ ಸ್ಪರ್ಧಾ ವಿಜೇತರಿಗೆ ಇದೇ ವೇಳೆ ಬಹುಮಾನ ವಿತರಿಸಲಾಯಿತು.
ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ದಯಾನಂದ ಕಲ್ನಾರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷ ಚಂದ್ರಶೇಖರ ಪೇರಾಲು, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಕಾರ್ಯದರ್ಶಿ ಗಂಗಾಧರ ಕಲ್ಲಪಳ್ಳಿ , ಸುಳ್ಯ ಪ್ರೆಸ್ ಕ್ಲಬ್ ಅಧ್ಯಕ್ಷ ಹರೀಶ್ ಬಂಟ್ವಾಳ್, ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಹಿರಿಯ ಪತ್ರಕರ್ತ ಜಯಪ್ರಕಾಶ್ ಕುಕ್ಕೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕೋಶಾಧಿಕಾರಿ ಪ್ರಜ್ಞಾ ಎಸ್. ನಾರಾಯಣ ಅಚ್ರಪ್ಪಾಡಿ ಸ್ವಾಗತಿಸಿದರು. ಕಾರ್ಯದರ್ಶಿ ತೇಜೇಶ್ವರ ಕುಂದಲ್ಪಾಡಿ ವಂದಿಸಿದರು. ಗೌರವಾಧ್ಯಕ್ಷ ದಯಾನಂದ ಕೊರತ್ತೋಡಿ ಕಾರ್ಯಕ್ರಮ ನಿರೂಪಿಸಿದರು. ಕು. ಚೈತ್ರಾ ಪ್ರಾರ್ಥಿಸಿದರು.
- Thursday
- November 21st, 2024