ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯ ಕುರುಂಜಿಗುಡ್ಡೆ ಪಾರ್ಕ್ ಗೆ ಸಮಯ ನಿಗದಿ ಪಡಿಸಿ ನಾಮಫಲಕ ಅಳವಡಿಸುವಂತೆ ಕೇರ್ಪಳ ಪಯಸ್ವಿನಿ ಯುವಕ ಮಂಡಲದ ವತಿಯಿಂದ ನ.ಪಂ. ಆಡಳಿತಾಧಿಕಾರಿ ಗಳಿಗೆ ಮನವಿ ಜು.1 ರಂದು ಸಲ್ಲಿಸಲಾಯಿತು.
ನ.ಪಂ. ವತಿಯಿಂದ ಕೆಲವು ವರ್ಷಗಳ ಹಿಂದೆ ಪಾರ್ಕ್ ನಿರ್ಮಾಣ ಮಾಡಲಾಗಿದ್ದು, ಅಲ್ಲಿ ಆಕರ್ಷಕ ಗಿಡಗಳನ್ನು ನೆಡಲಾಗಿದೆ. ಕುಳಿತುಕೊಳ್ಳಲು ಸಿಮೆಂಟ್ ಬೆಂಚುಗಳನ್ನು ಅಳವಡಿಸಲಾಗಿದೆ. ಮಕ್ಕಳಿಗೆ ಆಟವಾಡಲು ಬೇಕಾದ ವಸ್ತುಗಳನ್ನು ಅಳವಡಿಸಲಾಗಿದೆ. ಪಾರ್ಕ್‌ನ ಸುತ್ತಲೂ ತಡೆ ಬೇಲಿಯನ್ನು ಹಾಕಲಾಗಿತ್ತು. ಆ ಬೇಲಿಗಳು ಈಗ ಹಾಳಾಗಿದೆ.
ಈ ಪಾರ್ಕ್‌ಗೆ ಬೆಳಗ್ಗೆ ೭ ಗಂಟೆಯಿಂದಲೇ ಶಾಲಾ – ಕಾಲೇಜು ವಿದ್ಯಾರ್ಥಿ – ವಿದ್ಯಾರ್ಥಿನಿಯವರು ಬರುತ್ತಿರುತ್ತಾರೆ. ದಿನವಿಡೀ ಕಾಲ ಕಳೆಯುವುದು ಕಂಡು ಬರುತ್ತದೆ. ಇಲ್ಲಿ ರಾತ್ರಿ ಪಾರ್ಟಿಗಳು ನಡೆಯುತ್ತಿರುತ್ತವೆ. ತಡ ರಾತ್ರಿವರೆಗೂ ಸಾರ್ವಜನಿಕರು ವಾಹನಗಳಲ್ಲಿ ಬಂದು ಹೋಗುತ್ತಿರುತ್ತಾರೆ. ಪಾರ್ಕ್ ಸ್ವಚ್ಛತೆಯಿಲ್ಲ. ಅಲ್ಲಲ್ಲಿ ಶರಾಬು ಬಾಟಲಿಗಳು ಬಿದ್ದುಕೊಂಡಿರುತ್ತದೆ. ಕೆಲವೊಮ್ಮೆ ಗಲಾಟೆಗಳಾಗಿದ್ದು ಅದು ಪೊಲೀಸ್ ಠಾಣೆ ಮೆಟ್ಟಿಲೇರಿದ ಘಟನೆಯೂ ನಡೆದಿದೆ. ಆದ್ದರಿಂದ ಕುರುಂಜಿಗುಡ್ಡೆ ಪಾರ್ಕ್ ಎಷ್ಟು ಸಮಯಕ್ಕೆ ಜನರು ಬರಬಹುದು, ಸ್ವಚ್ಛತೆ ಕಾಪಾಡುವ ಕುರಿತು ಪಾರ್ಟಿಗಳು ಮಾಡದಂತೆ, ಪಾರ್ಕ್ ವಾತಾವರಣ ಕೆಡಿಸದಂತೆ ನ.ಪಂ. ನಿಂದ ನಿಯಮಗಳನ್ನು ಸೂಚಿಸಿ ಶೀಘ್ರವಾಗಿ ನಾಮಫಲಕ ಅಳವಡಿಸಬೇಕೆಂದು ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತಿವೆ. ಮತ್ತು ಪಾರ್ಕ್‌ನ ಸುತ್ತಲೂ ಸುಸಜ್ಜಿತ ತಡೆ ಬೇಲಿಯನ್ನು ಅಳವಡಿಸಬೇಕು ಎಂದು ಮನವಿ ಮಾಡುತ್ತಿವೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಮನವಿ ಸ್ವೀಕರಿಸಿದ ತಹಶೀಲ್ದಾರ್ ಮಂಜುನಾಥರು ಎರಡು ದಿನದಲ್ಲಿ ನಾಮಫಲಕ ಅಳವಡಿಸುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು. ಯುವಕ ಮಂಡಲದ ಅಧ್ಯಕ್ಷ ಶಿವಪ್ರಸಾದ್ ಕೇರ್ಪಳ್ಳ , ಮಾಜಿ ಅಧ್ಯಕ್ಷ ಮನೋಜ್ ಈ ಮನವಿಯನ್ನು ಸಲ್ಲಿಸಿದ್ದರು.
- Thursday
- November 21st, 2024